ಬ್ರಿಟೀಷರಿಗೆ ಮೊದಲ ಬಾರಿ ಸೋಲಿನ ರುಚಿ ತೋರಿಸಿದ್ದ ರಾಣಿ ಚೆನ್ನಮ್ಮ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಮೊದಲ ಬಾರಿಗೆ ಬ್ರಿಟೀಷರ ವಿರುದ್ದ ಕಾಳಗದಲ್ಲಿ ಗೆದ್ದು ತನ್ನ ನಾಡಿನ ಸ್ವಾತಂತ್ರ್ಯ ಪತಾಕೆಯನ್ನು ಹಾರಿಸಿದ ಪ್ರಥಮ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಇಂದು, ಈ ನಿಮಿತ್ತ ಲೇಖನ.

ರಾಣಿ ಚೆನ್ನಮ್ಮ ಹುಟ್ಟಿದ್ದು ಬೆಳಗಾವಿ ನಗರದಿಂದ ಆರು ಕಿಲೋಮೀಟರ್ ದೂರದಲ್ಲಿರುವ ಕಾಕತಿ ಎಂಬ ಪುಟ್ಟ ಗ್ರಾಮದಲ್ಲಿ. ಈಕೆ ಅಕ್ಟೋಬರ್ 23, 1778ರಲ್ಲಿ ಕಾಕತಿಯ ದೇಸಾಯರ ಮನೆತನದಲ್ಲಿ ಜನ್ಮತಾಳಿದಳು. ತಂದೆ ಕಾಕತಿಯ ದೇಸಾಯಿಯಾಗಿದ್ದ ಧೂಳಪ್ಪಗೌಡರು.

ಆಕೆ ರಾಣಿಯಾಗುತ್ತಾಳೆ ಎಂಬ ಭವಿಷ್ಯವಿದ್ದದ್ದರಿಂದ ಎಲ್ಲ ಶಾಸ್ತ್ರಗಳನ್ನು, ಶಿವ-ಶರಣರ, ವೀರರ ಜೀವನ ವೃತ್ತಾಂತಗಳನ್ನು ಬೋಧಿಸಿದರು. ಚೆನ್ನಮ್ಮ ಕುದುರೆ ಸವಾರಿ, ಯುದ್ಧ ವಿದ್ಯೆಗಳನ್ನು ಕಲಿತಳು. ಭರ್ಜಿ ಎಸೆತ ಮತ್ತು ಕತ್ತಿ ವರಸೆಗಳಲ್ಲಿ ಅಪ್ರತಿಮ ಜಾಣೆಯಾದಳು. ಚಿಕ್ಕಂದಿನಿಂದಲೂ ಅಂಜಿಕೆ ಯಿರದ ಧೈರ್ಯವಂತೆಯಾಗಿದ್ದ ಚೆನ್ನಮ್ಮಳು ತಾನು ಎಂತಹಾ ಕಷ್ಟದ ಪರಿಸ್ಥಿತಿಯನ್ನೂ ಎದುರಿಸಬಲ್ಲವಳಾಗಿದ್ದಳು.

ಕಿತ್ತೂರಿನ ದೊರೆ ಮಲ್ಲಸರ್ಜನೊಂದಿಗೆ ವಿವಾಹವಾಗಿ ಕಿತ್ತೂರಿನ ಸೊಸೆಯಾದಳು. ದುರ್ದೈವವಶಾತ್ ಮಲ್ಲಸರ್ಜ ಬೇಗನೇ ಕೊನೆಯುಸಿರೆಳೆದ.

ಚೆನ್ನಮ್ಮ ಧೃತಿಗೆಡದೆ ಹಿರಿಯ ಮಗ ಶಿವಲಿಂಗರುದ್ರ ಸರ್ಜನನ್ನು ಪಟ್ಟಕ್ಕೆ ಕೂರಿಸಿದಳು. ಆದರೆ, ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಹಿರಿಯ ಮಗನೂ ತೀರಿಕೊಂಡ. ಚೆನ್ನಮ್ಮ ಶಿವಲಿಂಗಪ್ಪನೆಂಬ ಬಾಲಕನನ್ನು ದತ್ತುವಾಗಿ ಸ್ವೀಕರಿಸಿ, ಪಟ್ಟದಲ್ಲಿ ಕೂರಿಸಿ ರಾಜ್ಯವನ್ನು ಸ್ವತಃ ತಾನೇ ನಡೆಸಲಾರಂಭಿಸಿದಳು. ಚೆನ್ನಮ್ಮ ಪ್ರಜೆಗಳೊಡನೆ ಬೆರೆತು, ಅವರ ಕಷ್ಟ-ನಷ್ಟಗಳನ್ನು ನಿವಾರಿಸುವಲ್ಲಿ ಯಶಸ್ವಿಯಾದಳು. ಕಿತ್ತೂರಿನ ಪಾಲಿಗೆ ಆಕೆ ಮಹಾತಾಯಿಯೇ ಆದಳು.

ಚೆನ್ನಮ್ಮ ಆಡಳಿತ ನೆಡೆಸುವ ಮುನ್ನ ಆ ಕಾಲಘಟ್ಟ ತುಂಬ ಸಂದ್ಧಿಗ್ನತೆಯಿಂದ ಕೂಡಿತ್ತು. ಬಿಜಾಪುರ ಸುಲ್ತಾನರ ಪತನದ ಬಳಿಕ ಉತ್ತರ ಕರ್ನಾಟಕದಾದ್ಯಂತ ಒಂದು ಬಗೆಯ ಅರಾಜಕತೆಯುಂಟಾಗಿತ್ತು.

ದಕ್ಷಿಣದ ಮೈಸೂರನ್ನಾಳುತ್ತಿದ್ದ ಒಡೆಯರ್ ರನ್ನು ಮೂಲೆಗುಂಪು ಮಾಡಿ ರಾಜ್ಯದ ಆಡಳಿತವನ್ನೆಲ್ಲಾ ತಮ್ಮ ಕೈಗೆ ತೆಗೆದುಕೊಂಡಿದ್ದ ಹೈದರ್ ಹಾಗೂ ಟಿಪ್ಪು ಸುಲ್ತಾನರುಗಳು ಉತ್ತರದಲ್ಲಿನ ಆ ಅರಾಜಕತೆಯ ಲಾಭವನ್ನು ಪಡೆಯಲು ಹವಣಿಸುತ್ತಿದ್ದರೆ, ಇನ್ನೊಂದು ಕಡೆ ಮರಾಠಾ ಪೇಶ್ವೆಗಳು ಸಹ ತಮಗೆ ಎಲ್ಲಾದರೂ ಅವಕಾಶ ದಕ್ಕೀತೆಂದು ಕಾಯುತ್ತಿರುತ್ತಿದ್ದರು. ಇನ್ನೊಂದು ಕಡೆ ಭಾರತಾದ್ಯಂತ ರಾಜರುಗಳಲ್ಲಿಯೇ ಈ ಒಳ ಜಗಳ ಕುತಂತ್ರ, ಮೋಸಗಳು ಅದರಿಂದುಂಟಾದ ಅರಾಜಕತೆಗಳು ಇವು ಬ್ರಿಟೀಷರು ಭಾರತದಲ್ಲಿ ತಮ್ಮ ಭದ್ರ ನೆಲೆ ಮಾಡಿಕೊಳ್ಳಲು ಅವಕಾಶ ಸಿಕ್ಕಿತು.

ಇಂತಹ ಪರಿಸ್ಥಿತಿಯಲ್ಲಿ ಟಿಪ್ಪು ಸುಲ್ತಾನನು ಕಿತ್ತೂರಿನ ದೊರೆ ಮಲ್ಲಸರ್ಜನನ್ನು ಬಂಧಿಸಿ ಕಪಾಲದುರ್ಗ ಎನ್ನುವಲ್ಲಿ ಸೆರೆಯಿಟ್ಟಿದ್ದನು. ಅವನ ಸೆರೆವಾಸದಿಂದ ತಪ್ಪಿಸಿಕೊಂಡ ದೊರೆ ಮಲ್ಲಸರ್ಜನು 1803ರಲ್ಲಿ ಅಂದಿನ ಬ್ರಿಟೀಷ್ ಗವರ್ನರ್ ಲಾರ್ಡ್ ವೆಲ್ಲಸ್ಲಿಗೆ ನೆರವು ನೀಡುವ ಮೂಲಕ ಕಿತ್ತೂರು ಸಂಸ್ಥಾನವನ್ನು ಭದ್ರಗೊಳಿಸಿದ್ದನು.

1809ರಲ್ಲಿ ಮರಾಠ ಪೇಶ್ವೆಯವರಿಗೂ ನೆರವಾಗಿ ಅವರಿಂದ ಸನ್ನದನ್ನು ಹೊಂದಿದ್ದನು. ಆದರೆ ಪೇಶ್ವೆಗಳು ತಾವು ಸಹ ಮಲ್ಲಸರ್ಜನಿಗೆ ವಿಶ್ವಾಸ ದ್ರೋಹವೆಸಗಿ ಅವನನ್ನು ಬಂಧಿಸಿ ಮೂರು ವರ್ಷಗಳ ಕಾಲ ಪೂನಾದ ಜೈಲಿನಲ್ಲಿಟ್ಟರು. ಇದಾಗಿ 1816 ರಲ್ಲಿ ಅಲ್ಲಿಂದ ಬಿಡುಗಡೆಯಾಗಿ ಕಿತ್ತೂರಿಗೆ ಮರಳುತ್ತಿರುವಾಗ ಮಾರ್ಗಮಧ್ಯದಲ್ಲಿಯೇ ಮಲ್ಲಸರ್ಜನು ಕೊನೆಯುಸಿರೆಳೆದನು.

ಇವನ ಬಳಿಕ ಅಧಿಕಾರವನ್ನು ವಹಿಸಿಕೊಂಡಿದ್ದ ಶಿವಲಿಂಗರುದ್ರಸರ್ಜನು ತಾನು ಬ್ರಿಟೀಷರೊಡನೆ ಸ್ನೇಹದಿಂದಿದ್ದನು. ಈ ಒಂದು ಸ್ನೇಹದ ಕುರುಹಾಗಿ ಪ್ರತಿ ವರ್ಷ ಒಂದು ಲಕ್ಷದ ಎಪ್ಪತ್ತು ಸಾವಿರ (1,70,000) ರೂಪಾಯಿ ಬ್ರಿಟೀಷರ ಕೈಸೇರಿರುತ್ತಿತ್ತು! ಶಿವಲಿಂಗರುದ್ರ ಸರ್ಜನು ತಾನು 11 ಸೆಪ್ಟೆಂಬರ್ 1824ರಂದು ತನ್ನ ರಾಜ್ಯಕ್ಕೆ ವಾರಸುದಾರರಿಲ್ಲದೆ ತೀರಿಕೊಂಡನು.

ಶಿವಲಿಂಗರುದ್ರಸರ್ಜನು ತಾನು ಸಾಯುವ ಸಮಯದಲ್ಲಿ ಆತನ ಮಡದಿಗೆ ಕೇವಲ 11 ವರ್ಷ! ಶಿವಲಿಂಗ ಮಲ್ಲಸರ್ಜನು ತಾನು ಮರಣ ಹೊಂದುವ ಮುನ್ನ ಮಾಸ್ತವರಡಿ ಗೌದರ ಪುತ್ರ ಶಿವಲಿಂಗಪ್ಪನನ್ನು ದತ್ತು ಪಡೆದಿರುತ್ತಾನೆ. ಆದರೆ ಅಂದಿನ ಬ್ರಿಟೀಷರ ಕಂಪನಿ ಸರ್ಕಾರ ಈ ದತ್ತು ಪುತ್ರನು ರಾಜ್ಯದ ಒಡೆಯನಾಗಲು ಸರ್ವಥಾ ನಿರಾಕರಿಸುತ್ತದೆ. ಆ ಸಮಯದಲ್ಲಿ ಧಾರವಾಡ ಸೀಮೆಯ ಕಲೆಕ್ಟರ್ ಆಗಿದ್ದ ಥ್ಯಾಕರೆಯು ತಾನು ಸ್ವತಃ ಕಿತ್ತೂರಿಗೆ ಭೇಟಿ ನೀಡಿ ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೆ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗ ಮುದ್ರೆ ಹಾಕುತ್ತಾನೆ.

ಕಿತ್ತೂರಿನ್ನು ಬ್ರಿಟೀಷರ ಆಕ್ರಮಣಗಳಿಂದ ರಕ್ಷಿಸಲು ಚೆನ್ನಮ್ಮ ಸಾಕಷ್ಟು ಪ್ರಯತ್ನ ಪಡುತ್ತಾಳೆ. ಮೊದಲು ಬ್ರಿಟೀಷ್ ಅಧಿಕಾರಿಗಳಾಗಿದ್ದ ಥ್ಯಾಕರೆ, ಮನ್ರೋ, ಚಾಪ್ಲಿನ್ ರವರುಗಳಿಗೆ ಸಂಧಾನ ಮಾಡಿಕೊಳ್ಳುವ ಸಲುವಾಗಿ ಪತ್ರ ಬರೆಯುತ್ತಾಳೆ. ಆದರೆ ಬ್ರಿಟೀಷರು ಅದಾಗಲೇ ಕಿತ್ತೂರನ್ನು ವಶಪಡಿಸಿಕೊಂಡೇ ಸಿದ್ದ ಎಂಬ ತೀರ್ಮಾನಕ್ಕೆ ಬಂದಾಗಿರುತ್ತದೆ. ಇದನ್ನರಿತ ಚೆನ್ನಮ್ಮನು ತಾನು ಹಠ ಬಿಡದೆ ನೆರೆ ರಾಜ್ಯದ ರಾಜರುಗಳ ಸಹಕಾರ ಕೋರಿ ಅವರಿಗೂ ಓಲೆ ಕಳುಹಿಸುತ್ತಾಳೆ. ಆದರೆ ಯಾರಿಂದಲೂ ತಕ್ಕ ಸಮಯಕ್ಕೆ ಸಹಕಾರ ದೊರೆಯದೆ ಹೋಗುತ್ತದೆ.

21 ಅಕ್ಟೋಬರ್ 1824ಕ್ಕೆ ಥ್ಯಾಕರೆ ಕಿತ್ತೂರಿಗೆ ತಾನು ಸೈನ್ಯ ಸನ್ನದ್ದನಾಗಿ ಆಗಮಿಸುತ್ತಾನೆ. 23 ಅಕ್ಟೋಬರ್ 1824ರಂದು ಥ್ಯಾಕರೆ ಅಧಿಕೃತವಾಗಿ ಯುದ್ದವನ್ನು ಆರಂಭಿಸುತ್ತಾನೆ. ಕೋಟೆಯ ಮೇಲೆ ತೋಪನ್ನು ಹಾರಿಸಲು ಅಪ್ಪಣೆ ಮಾಡಿದ ಥ್ಯಾಕರೆಯ ಸೈನ್ಯದ ಮೇಲೆ ಕೋಟೆಯೊಳಗಿನಿಂದ ನುಗ್ಗಿಬಂದ ಕಿತ್ತೂರಿನ ಸಾವಿರಾರು ಸಂಖ್ಯೆಯ ವೀರರ ಪಡೆ ಒಂದೇ ಸಮನೆ ಧಾಳಿಗೆ ತೊಡಗುತ್ತದೆ. ಚೆನ್ನಮ್ಮಳ ಅಂಗರಕ್ಷಕನಾಗಿದ್ದ ಅಮಟೂರು ಬಾಳಪ್ಪ ಹಾರಿಸಿದ ಗುಂಡಿಗೆ ಥ್ಯಾಕರೆ ಬಲಿಯಾಗುತ್ತಾನೆ. ಸ್ಟೀವನ್ಸನ್ ಹಾಗೂ ಈಲಿಯಟ್ ಎನ್ನುವ ಇಬ್ಬರು ಅಧಿಕಾರಿಗಳು ಸೆರೆಯಾಗುತ್ತಾರೆ. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾಗುತ್ತಾರೆ.

ಹೀಗೆ ಮೊದಲ ಬಾರಿಗೆ ಬ್ರಿಟೀಷರ ವಿರುದ್ದ ಕಾಳಗದಲ್ಲಿ ಗೆದ್ದು ತನ್ನ ನಾಡಿನ ಸ್ವಾತಂತ್ರ್ಯ ಪತಾಕೆಯನ್ನು ಹಾರಿಸಿದ ಚೆನ್ನಮ್ಮಳ ವಿರುದ್ದ ಬ್ರಿಟೀಷರು ಒಳ ಒಳಗೇ ಕತ್ತಿ ಮಸೆಯುತ್ತಿರುತ್ತಾರೆ. ಸಣ್ಣ ಸಂಸ್ಥಾನವೊಂದರ ರಾಣಿಯೊಬ್ಬಳಿಂದ ಸೋತು ಅವಮಾನಿತರಾದ ಬ್ರಿಟೀಷರಿಗೆ ಚೆನ್ನಮ್ಮಳ ಮೇಲೆ ಮತ್ತಷ್ಟು ದ್ವೇಷ ಕೆರಳುತ್ತದೆ.

ಇಬ್ಬರ ನಡುವೆ ಮತ್ತೆ ಪತ್ರ ವ್ಯವಹಾರಗಳು ಆರಂಭಗೊಳ್ಳುತ್ತವೆ. ಅದಾಗಿ 1824 ಡಿಸೆಂಬರ್ 2ರಂದು ಚೆನ್ನಮ್ಮಳಲ್ಲಿ ಸೆರೆಯಾಳಾಗಿದ್ದ ಸ್ಟೀವನ್ಸನ್ ಹಾಗೂ ಈಲಿಯಟ್ ರ ಬಿಡುಗಡೆಯಾಗುತ್ತದೆ. ಇದಾದ ಮರುದಿನ ಎಂದರೆ ಡಿಸೆಂಬರ್ 3 1824 ರಂದು ಬ್ರಿಟೀಷರು ಮತ್ತೆ ಬೃಹತ್ ಸೈನ್ಯದೊಂದಿಗೆ ಕಿತ್ತೂರಿನ ಮೇಲೆ ಮುಗಿಬೀಳುತ್ತಾರೆ. ಡಿಸೆಂಬರ್ 4ರಂದು ಸರ್ದಾರ ಗುರುಸಿದ್ದಪ್ಪನು ಸೆರೆಯಾಗುತ್ತಾನೆ. ಡಿಸೆಂಬರ್ 5, 1824ರಂದು ಕೆಚ್ಚೆದೆಯ ವೀರ ರಾಣಿ ಚೆನ್ನಮ್ಮಾಜಿಯು ತಾನು ತನ್ನ ಸೊಸೆಯಂದಿರಾದ ವೀರಮ್ಮ ಹಾಗೂ ಜಾನಕಿಬಯಿಯವರ ಜತೆ ಕೈದಿಯಾಗುತ್ತಾಳೆ. ಅವರನ್ನು ತುರ್ತು ವಿಚಾರಣೆ ನಡೆಸಿದ (ವಿಚಾರಣೆ ನಡೆಸಿದ ನಾಟಕ ಆಡಿದ) ಬ್ರಿಟೀಷ್ ನ್ಯಾಯಾಸ್ಥಾನವು ಡಿಸೆಂಬರ್ 12 1824ಕ್ಕೆ ಬೈಲಹೊಂಗಲದ ಕಾರಾಗ್ರಹಕ್ಕೆ ಸ್ಥಳಾಂತರಿಸುತ್ತಾರೆ. ಅಲ್ಲೇ ನಾಲ್ಕು ವರ್ಷಗಳ ಕಾಲ ಸೆರೆಯಾಳಾಗಿದ್ದ ಚೆನ್ನಮ್ಮಾಜಿಯು 1829 ಫೆಬ್ರವರಿ 2ರಂದು ಅಲ್ಲಿಯೇ ಮರಣ ಹೊಂದಿದಳು.

ಚೆನ್ನಮ್ಮಳ ಮರಣದ ಬಳಿಕವೂ ದೇಶನಿಷ್ಠರ ಹೋರಾಟ ಮುಂದುವರಿಯುತ್ತದೆ. ಯುದ್ದ ಖೈದಿಯಾಗಿದ್ದು ಬಿಡುಗಡೆಯಾದ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣನು ತಾನು ಚೆನ್ನಮ್ಮಳ ದತ್ತು ಪುತ್ರ ಶಿವಲಿಂಗಪ್ಪನ ಮುಂದಾಳತ್ವವನ್ನಿಟ್ಟುಕೊಂಡು ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾನೆ. ಆದರೆ 1830 ಫೆಬ್ರವರಿಯಲ್ಲಿ ನಮ್ಮವರೇ ಕೆಲ ವಿಶ್ವಾಸ ದ್ರೋಹಿಗಳು ರಾಯಣ್ಣನಿರುವ ಸ್ಥಳವನ್ನು ಕಂಪನಿ ಸರ್ಕಾರದವರಿಗೆ ತೋರಿಸಿ ಅವನನ್ನು ಸೆರೆಹಿಡಿಸುತ್ತಾರೆ. ಅದೇ 1830 ಮೇ ನಲ್ಲಿ ಕಿತ್ತೂರ ದೊರೆಯಾದ ಶಿವಲಿಂಗಪ್ಪ ಮತ್ತವನ ನಾಲ್ಕು ಸಾವಿರ ಬೆಂಬಲಿಗರು ತಾವು ಬ್ರಿಟೀಷರಿಗೆ ಸ್ವಯಂ ಶರಣಾಗುತ್ತಾರೆ. ಇದಾದ ಬಳಿಕ ಜುಲೈ 1830ಕ್ಕೆ ಚೆನ್ನಮ್ಮಳ ಪ್ರೀತಿಯ ಸೊಸೆ ವೀರಮ್ಮ ತಾನು ಸೆರೆಮನೆಯಲ್ಲಿಯೇ ಸಾವನ್ನಪ್ಪುತ್ತಾಳೆ.

ಸರಿಸುಮಾರು ಆರು ತಿಂಗಳುಗಳ ತರುವಾಯ 1831, ಜನವರಿ 26ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಈ ಮೂಲಕ ಕಿತ್ತೂರು ಸಂಸ್ಥಾನದ ಕೊನೆಯ ಆಶಾಕಿರಣವೂ ನಂದಿತು, ಭಾರತೀಯ ಇತಿಹಾಸದಲ್ಲಿಯೇ 1857 ಪ್ರಥಮ ಸ್ವತಂತ್ರ ಸಂಗ್ರಾಮಕ್ಕೆ ವಿಶಿಷ್ಠವಾದ ಸ್ಥಾನ ಪಡೆದರೆ, ಇದಕ್ಕೂ ಪೂರ್ವದಲ್ಲಿಯೇ ರಾಣಿ ಚೆನ್ನಮ್ಮಾಜಿಯ ಹೋರಾಟ ಬಲಿದಾನ ಭಾರತಾದ್ಯಂತ ಸ್ವತಂತ್ರ ಹೋರಾಟಗಾರರಿಗೆ ಸ್ಪೂರ್ತಿ ನೀಡಿತು.