ಡಾ.ಗುರುಪ್ರಸಾದ ರಾವ್ ಹವಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
ಯುಕೆಯ ರಾಜಕೀಯದಲ್ಲಿ ತಲ್ಲಣವನ್ನೇ ಸೃಷ್ಟಿಸಿ ಜಗತ್ತೇ ತನ್ನತ್ತ ತಿರುಗುವಂತೆ ಮಾಡಿದ ಬ್ರಿಟನ್ ಎದುರಿಸುತ್ತಿರುವ ಆರ್ಥಿಕ ಹಿಂಜರಿತ, ನಾಗರಿಕರ ಜೀವನದಲ್ಲಿ ಬದಲಾವಣೆ ತರುವ ಆಶಾ ಕಿರಣ ಎನ್ನುವಂತೆ ಕಾಣುತ್ತಿರುವ ರಿಷಿ ಸುನಕ್, ಅವರ ಪೂರ್ವಿಕರು ಸ್ವತಂತ್ರ ಪೂರ್ವದ ಅಖಂಡ ಭಾರತದವರು, ಭಾರತ ಮೂಲದವರು ಎನ್ನುವುದು ಹೆಮ್ಮೆಯ ವಿಚಾರ , ಅಲ್ಲದೇ ಖ್ಯಾತ ಉದ್ಯಮಿ ಕನ್ನಡಿಗರು ಅದ ಇನ್ಫೋಸಿಸ್ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅಳಿಯ. ಇದೀಗ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಬ್ರಿಟನ್ ನಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ರಿಷಿ ಸುನಕ್ ಪ್ರಧಾನಿ ಆಗುವ ಮೂಲಕ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ
ಅಲ್ಲಿನ ಪತ್ರಿಕೆಗಳಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತಪಡಿಸಿವೆ.
ಆಡಳಿತ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಷಿ ಸುನಕ್ ಅವರು ಕಳೆದ ವಾರ ಅಧಿಕಾರ ತ್ಯಜಿಸಿದ ಮಾಜಿ ಪ್ರಧಾನಿ ಲಿಜ್ ಟ್ರಸ್ ಅವರಿಂದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಿಷಿ ಸುನಕ್ ಅವರನ್ನು 1922 ರ ಕನ್ಸರ್ವೇಟಿವ್ ಶಾಸಕರ ಸಮಿತಿಯ ಮುಖ್ಯಸ್ಥರು ಬ್ರಿಟನ್ನ ಕನ್ಸರ್ವೇಟಿವ್ ಪಕ್ಷದ ಮುಂದಿನ ನಾಯಕ ಎಂದು ಕಳೆದ ಸೋಮವಾರ ಘೋಷಿಸಿದ್ದರು.
ಕೊನೆ ಗಳಿಗೆಯಲ್ಲಿ ಪೆನ್ನಿ ಮೊರ್ಡಾಂಟ್ ರೇಸ್ನಿಂದ ಹಿಂದೆ ಸರಿದಿದ್ದರು. ಹೀಗಾಗಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲದೆ ರಿಷಿ ಆಯ್ಕೆ ಆಗಿದ್ದಾರೆ. ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಿಂದೆ ಸರಿದಾಗಲೇ ರಿಷಿ ಪ್ರಧಾನಿ ಪಟ್ಟಕ್ಕೇರುವುದು ಬಹುತೇಕ ಖಚಿತವಾಗಿತ್ತು. ಇದೀಗ ರಿಷಿ ಸುನಕ್ ಅವರ ಆಯ್ಕೆ ಅಧಿಕೃತ.
ರಿಷಿ ಸುನಕ್ ಗೆ ಬರೋಬ್ಬರಿ 193 ಸಂಸದರು ಬೆಂಬಲ ನೀಡಿದ್ದು ಇನ್ನು ರಿಷಿ ಸುನಕ್ ಗೆ ಪ್ರಬಲ ಸ್ಪರ್ಧಿಯಾಗಿದ್ದ ಸಂಸದೆ ಪೆನ್ನಿ ಮೋರ್ಡಾಂಟ್ ಗೆ 26 ಸಂಸದರು ಮಾತ್ರ ಬೆಂಬಲ ನೀಡಿದ್ದರು ಹೀಗಾಗಿ ಪ್ರಧಾನಿ ಹುದ್ದೆ ಸ್ಪರ್ಧೆಯಿಂದ ಮೋರ್ಡಾಂಟ್ ಹಿಂದೆ ಸರಿದಿದ್ದರು. ಹೀಗಾಗಿ ರಿಷಿ ಹಾದಿ ಸುಗಮವಾಯ್ತು.
ಈ ಹಿಂದೆ ನಡೆದ ಬ್ರಿಟನ್ ಪ್ರಧಾನಿ ಚುನಾವಣೆಯಲ್ಲಿ ರಿಷಿ ಸುನಕ್, ಲಿಜ್ ಟ್ರಸ್ ವಿರುದ್ಧ ಪರಾಭವಗೊಂಡಿದ್ದರು. ಲಿಜ್ ಟ್ರಸ್ ಪ್ರಧಾನಿ ಹುದ್ದೆಗೇರಿದರೂ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರದ ನೀತಿಯಿಂದಾಗಿ ಹಿನ್ನಡೆ ಅನುಭವಿಸಿದ್ದರು. ಬ್ರಿಟನ್ ಆರ್ಥಿಕ ಪರಿಸ್ಥಿತಿ ಕ್ಷೀಣಿಸುತ್ತಿದೆ.
ಹೀಗಾಗಿ ಕನ್ಸರ್ವೇಟಿವ್ ಪಕ್ಷದ ಅಭ್ಯರ್ಥಿ ಲಿಜ್ ಟ್ರಸ್ ಅಧಿಕಾರಕ್ಕೆ ಬಂದಿದ್ದರು. ಹೀಗಾಗಿ ಪ್ರಧಾನಿ ಪಟ್ಟದ ಜವಾಬ್ದಾರಿ ಇವರಿಗೆ ಸುಲಭದ ಹಾದಿಯಾಗಿರಲಿಲ್ಲ.
ಅವರ ಆರ್ಥಿಕ ಕಾರ್ಯಕ್ರಮಗಳ ವಿಫಲತೆಯಿಂದ ಕೆಳಗಿಳಿದರು. ಅದು ಮಾರುಕಟ್ಟೆಯ ಮೂಲಕ ಆಘಾತವನ್ನು ಉಂಟುಮಾಡಿತು. ಅವರು ನೇಮಕಗೊಂಡ ಕೇವಲ ಆರು ವಾರಗಳ ನಂತರ ಅವರ ಕನ್ಸರ್ವೇಟಿವ್ ಪಕ್ಷವನ್ನು ವಿಭಜಿಸಿದ್ದರು.
ರಾಜಕೀಯ ಬಿಕ್ಕಟ್ಟಿನಿಂದ ಬದುಕುಳಿಯುವ ಪ್ರಯತ್ನದಲ್ಲಿ ಹಣಕಾಸಿನ ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ಧತೆಯನ್ನು ಉಂಟು ಮಾಡಿದ ಮಿನಿ ಬಜೆಟ್ ಅನ್ನು ಟ್ರಸ್ ಕಿತ್ತುಹಾಕಿದ್ದರು. ಕ್ವಾಸಿ ಕ್ವಾರ್ಟೆಂಗ್ ಅವರನ್ನು ಕನ್ಸರ್ವೇಟಿವ್ ನಾಯಕ ಜೆರೆಮಿ ಹಂಟ್ ಅವರೊಂದಿಗೆ ಚಾನ್ಸೆಲರ್ ಆಗಿ ಬದಲಾಯಿಸಿದರು. ಈ ಬದಲಾವಣೆಗಳನ್ನು ಘೋಷಿಸಿದ ನಂತರ ಸರ್ಕಾರದ ಸಾಲದ ವೆಚ್ಚವು ಏರಿತು ಮತ್ತು ಪೌಂಡ್ ಮತ್ತಷ್ಟು ಕುಸಿತ ಕಂಡಿತ್ತು.
ದೇಶದಲ್ಲಿ ಬರೋಬ್ಬರಿ ಅಂದಾಜು ಜಿಬಿಪಿ 45 ಶತಕೋಟಿ ಮೌಲ್ಯದ ತೆರಿಗೆ ಕಡಿತಗಳು ಅವುಗಳನ್ನು ಮರುಪೂರೈಕೆ ಮಾಡಲು ವಿವರವಾದ ನಿಧಿಯ ಯೋಜನೆ ಇಲ್ಲದೆ ಹಣದುಬ್ಬರವು ಈಗಾಗಲೇ ಗಗನಕ್ಕೇರುತ್ತಿರುವ ಸಮಯದಲ್ಲಿ ಬ್ರಿಟನ್ ಆರ್ಥಿಕತೆಗೆ ಹಾನಿಕಾರಕವಾಯಿತು.
ಹಣಕಾಸು ಸಚಿವರಾದ ಕ್ವಾಸಿ ಕ್ವಾರ್ಟೆಂಗ್ ಲಿಜ್ ಟ್ರಸ್ನೊಂದಿಗೆ ಸಮಾನ ಮನಸ್ಕರಂತೆ ಕಾಣುತ್ತಿದ್ದರು. ಮುಂದಿನ ಆರು ತಿಂಗಳಲ್ಲಿ 67 ಶತಕೋಟಿ ಡಾಲರ್ ಮೌಲ್ಯದ ಇಂಧನ ಯೋಜನೆಯ ಬೆಲೆಯನ್ನು ವಿವರಿಸುವ ಮಿನಿ ಬಜೆಟ್ ಅನ್ನು ಘೋಷಿಸಿದ್ದರು. ಆದರೆ ನಿಧಿ ಸಂಗ್ರಹಿಸುವ ಕ್ರಮ ಅವರ ಬಳಿ ಇರಲಿಲ್ಲ.
ಬದಲಾಗಿ, ಆಗಿನ ಹಣಕಾಸು ಸಚಿವರು ಹೆಚ್ಚಿನ ಆದಾಯವನ್ನು ಹೊಂದಿರುವವರು ಸೇರಿದಂತೆ ಬ್ಯಾಂಕರ್ಗಳ ಬೋನಸ್ಗಳ ಮೇಲಿನ ಮಿತಿಯನ್ನು ರದ್ದುಗೊಳಿಸುವುದರೊಂದಿಗೆ ವ್ಯಾಪಕವಾದ ತೆರಿಗೆ ಕಡಿತವನ್ನು ಪಾವತಿಸಲು ಬೃಹತ್ ಪ್ರಮಾಣದ ಹೊಸ ಸಾಲವನ್ನು ಘೋಷಿಸಿದ್ದರು
ಲಿಜ್ ಟ್ರಸ್ ಅವರು ಸಂಸತ್ತಿನಲ್ಲಿ ಹೋರಾಟಗಾರ್ತಿ ಮತ್ತು ವಿರೋಧ ಪಕ್ಷದ ಸಂಸದರ ಹೆದರಿಕೆಗೆ ಎದರುವವರಲ್ಲ ಎಂದು ಘೋಷಿಸಿದ ಒಂದು ದಿನದ ನಂತರ ಅವರ ರಾಜೀನಾಮೆ ನೀಡಿದ್ದಾರೆ.
ಕಾಕತಾಳಿಯವೆಂಬಂತೆ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಜ್ ರಾಜೀನಾಮೆಯು ಸುಯೆಲ್ಲಾ ಬ್ರಾವರ್ಮನ್ ಅವರು ಗೃಹ ಸಚಿವ ಸ್ಥಾನವನ್ನು ತ್ಯಜಿಸಿದ ದಿನವೇ ನೀಡಿದ್ದರು. ಲಿಜ್ ಟ್ರಸ್ ಅವರು 45 ದಿನಗಳ ಅಧಿಕಾರದ ನಂತರ ರಾಜೀನಾಮೆ ನೀಡಿದ್ದಾರೆ. ಇದು ಬ್ರಿಟಿಷ್ ಪ್ರಧಾನಿಯೊಬ್ಬರ ಕಡಿಮೆ ಅವಧಿಯಾಗಿದೆ. ಅವರು ರಿಷಿ ಸುನಕ್ ಅವರ ಮೇಲೆ ಗೆಲುವು ಪಡೆದು ನೇಮಕಗೊಂಡರು.
ಯಾರಿದು ರಿಷಿ ಸುನಕ್? : 42 ವರ್ಷ ಪ್ರಾಯದ ರಿಷಿ ಸುನಕ್ ಮೇ 12ರ 1980ರಲ್ಲಿ ಯುಕೆಯ ಸೌತಾಂಪ್ಟನ್ ಎಂಬಲ್ಲಿ ಜನಿಸಿದರು. ರಿಷಿ ಸುನಾಕ್ ಅವರ ಅಜ್ಜ-ಅಜ್ಜಿ(ಅಪ್ಪನ ಪೋಷಕರು) ಭಾರತ ಮೂಲದವರಾಗಿದ್ದ ಹಿನ್ನೆಲೆ ಅವರಿಗೆ ಕೂಡ ಭಾರತ ಮೂಲದ ವ್ಯಕ್ತಿ ಎಂಬ ಪಟ್ಟ ಸಿಕ್ಕಿದೆ. ರಿಷಿ ಸುನಕ್ ಅಜ್ಜ ಹಾಗೂ ಅಜ್ಜಿ ಭಾರತದ ಪಂಜಾಬ್ ನಲ್ಲಿ ಜನಿಸಿದ್ದರು. ಕೆಲಸದ ನಿಮಿತ್ತ 1960ರಲ್ಲಿ ಪೂರ್ವ ಆಫ್ರಿಕಾಕ್ಕೆ ವಲಸೆ ಹೋಗಿದ್ದರು.
ಅಲ್ಲಿ ಆಡಳಿತಾತ್ಮಕ ಉದ್ಯೋಗಗಳಲ್ಲಿ ಇವರ ಅಜ್ಜ-ಅಜ್ಜಿ ಕೆಲಸ ಮಾಡಿದ್ದರು. ಇನ್ನು ಇದಾದ ಬಳಿಕ ರಿಷಿ ಸುನಾಕ್ ಪೋಷಕರು ಯುಕೆಗೆ ಬಂದಿದ್ದರು. ತಂದೆ ಯಶ್ವೀರ್, ಆಕ್ಸ್ ಫರ್ಡ್ ಮತ್ತು ಸ್ಟ್ಯಾನ್ಫೋರ್ಡ್ ಪದವೀಧರರು. ಇಂಗ್ಲೆಂಡಿನ ಆರೋಗ್ಯ ಸಂಸ್ಥೆ ರಾಷ್ಟ್ರೀಯ ಆರೋಗ್ಯ ಸೇವೆ (NHS)ನೊಂದಿಗೆ ಸಾಮಾನ್ಯ ವೈದ್ಯರಾಗಿದ್ದಾರೆ.
ತಾಯಿ ಸ್ಥಳೀಯವಾಗಿ ಫಾರ್ಮಸಿ ವಿಭಾಗದಲ್ಲಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ರಿಷಿ ಸುನಾಕ್ ಸೇರಿ ಇವರ ಪೋಷಕರಿಗೆ ಒಟ್ಟು ಮೂರು ಮಕ್ಕಳಿದ್ದಾರೆ. ರಿಷಿ ಸುನಕ್ ಅಜ್ಜ-ಅಜ್ಜಿ ಭಾರತದಲ್ಲಿ ಜನಿಸಿದ್ದರಿಂದ ರಿಷಿ ಕೂಡ ಭಾರತ ಮೂಲದವರಾಗಿದ್ದಾರೆ. ಇದಲ್ಲದೆ ಇವರಿಗೆ ಪತ್ನಿ ಮೂಲಕವು ಭಾರತದ ನಂಟಿದೆ.
ನಾರಾಯಣ ಮೂರ್ತಿ ಸುಧಮೂರ್ತಿ ಅಳಿಯ ರಿಷಿ ಸುನಕ್ : ರಿಷಿ ಸುನಕ್ ಅವರು ತಮ್ಮ ಬಾಲ್ಯವನ್ನು ಇಂಗ್ಲೆಂಡಿನಲ್ಲಿ ಕಳೆದಿದ್ದರು. ವಿಂಚೆಸ್ಟರ್ ಕಾಲೇಜಿನಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರ ಅಧ್ಯಯನ ಮಾಡಿದ್ದರು. ನಂತರ ಆಕ್ಸ್ಫರ್ಡ್ನ ಲಿಂಕನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದರು.
ಬಳಿಕ ಎಂಬಿಎಗಾಗಿ ಕ್ಯಾಲಿಫೋರ್ನಿಯಾ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಸೇರಿದರು. ಇಲ್ಲಿಯೇ ಅವರಿಗೆ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಪರಿಚಯವಾಗಿತ್ತು. ಬಳಿಕ ಇವರಿಬ್ಬರು ಪ್ರೀತಿಸಿ 2009ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಸುನಕ್ ಮತ್ತು ಅಕ್ಷತಾ ಮೂರ್ತಿ ದಂಪತಿಗೆ ಕೃಷ್ಣಾ ಮತ್ತು ಅನುಷ್ಕಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಆಗಾಗ ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು ತಮ್ಮ ಅತ್ತೆಯನ್ನು ಭೇಟಿಯಾಗುತ್ತಿರುತ್ತಾರೆ.
ರಿಷಿ ಸುನಕ್ ಆಗಾಗ್ಗೆ ಅವರ ಪರಂಪರೆಯ ಬಗ್ಗೆ ಮಾತನಾಡುತ್ತಾರೆ. ಅವರ ಕುಟುಂಬವು ಮೌಲ್ಯಗಳು ಮತ್ತು ಸಂಸ್ಕೃತಿಯ ಬಗ್ಗೆ ನೆನಪಿಸುತ್ತದೆ ಅಂತಾರೆ ಅವರು.
ಹೆಚ್ಚಿನ ಭಾರತೀಯ ಮನೆಗಳಂತೆ, ಸುನಕ್ ಮನೆಯಲ್ಲಿ ಶಿಕ್ಷಣ ಪ್ರಮುಖ ಅಂಶವಾಗಿದೆ. ರಿಷಿ ಸುನಕ್ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪದವೀಧರ ಮತ್ತು ಮಾಜಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್.
ರಿಷಿ ಸುನಕ್ ಅವರು 700 ಮಿಲಿಯನ್ ಪೌಂಡ್ಗಳಿಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಯುಕೆಯಲ್ಲಿನ ಹೆಚ್ಚಿನ ಆಸ್ತಿ ಹೊಂದಿದ್ದಾರೆ . ಯಾರ್ಕ್ಷೈರ್ನಲ್ಲಿ ಮಹಲು ಹೊಂದಿದ್ದಲ್ಲದೆ, ರಿಷಿ ಮತ್ತು ಅವರ ಪತ್ನಿ ಅಕ್ಷತಾ ಮಧ್ಯ ಲಂಡನ್ನ ಕೆನ್ಸಿಂಗ್ಟನ್ನಲ್ಲಿ ಆಸ್ತಿ ಹೊಂದಿದ್ದಾರೆ.
ಫಿಟ್ ಆಗಿರಲು ರಿಷಿ ಸುನಕ್ ಕ್ರಿಕೆಟ್ ಆಡಲು ಇಷ್ಟಪಡುತ್ತಾರೆ.
2022 ಪ್ರಧಾನಿ ಚುನಾವಣೆ ಪ್ರಚಾರದ ಸಮಯದಲ್ಲಿ, ರಿಷಿ ಸುನಕ್ ಅವರ ಅದ್ದೂರಿ ಮನೆ, ದುಬಾರಿ ಸೂಟುಗಳು ಮತ್ತು ಬೂಟುಗಳು ಸೇರಿದಂತೆ ವಿವಿಧ ಟೀಕೆಗಳನ್ನು ಎದುರಿಸಿದರು. ಒತ್ತಡದ ಸಂದರ್ಭಗಳಲ್ಲಿ ಭಗವದ್ಗೀತೆಯು ಆಗಾಗ್ಗೆ ನನ್ನನ್ನು ರಕ್ಷಿಸುತ್ತದೆ ಮತ್ತು ಕರ್ತವ್ಯನಿಷ್ಠರಾಗಿರಲು ನೆನಪಿಸುತ್ತದೆ ಎಂದು ರಿಷಿ ಹೇಳಿದ್ದರು.
ರಾಜಕೀಯ ಪ್ರವೇಶ: ರಾಜಕೀಯಕ್ಕೆ ಸೇರುವ ಮೊದಲು ರಿಷಿ ಸುನಕ್ ತಮ್ಮ ತಾಯಿಯ ಫಾರ್ಮಸಿ ವ್ಯವಹಾರಕ್ಕೆ ಸಹಾಯ ಮಾಡುತ್ತಿದ್ದರು. ಈ ಫಾರ್ಮಸಿ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ರಿಷಿ ತೆಗೆದುಕೊಂಡು ಹೋದರು.
ಹಲವಾರು ಬ್ಯುಸಿನೆಸ್ ಮಾಡುತ್ತ, ಹಲವಾರು ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಪಡೆಯುವ ಮೂಲಕ ಪ್ರಸಿದ್ದಿ ಹೊಂದಿದ್ದರು ರಿಷಿ ಸುನಕ್.
ಹೀಗಿರುವಾಗ ಸುನಕ್ 2015ರಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದರು. ಕನಸರ್ವೇಟಿವ್ ಪಕ್ಷದ ಸಂಸದನಾಗಿ 2015ರಲ್ಲಿ ರಿಷಿ ಸುನಾಕ್ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದರು. ಇನ್ನು ಅದು ಬ್ರೆಕ್ಸಿಟ್ ಆಂದೋಲನ ಸಮಯವಾಗಿದ್ದರಿಂದ, ರಿಷಿ ರಾಜಕೀಯಕ್ಕೆ ಸೇರುವ ಮುನ್ನ ಬ್ರೆಕ್ಸಿಟ್ ಆಂದೋಲನದಲ್ಲಿ ಸಕ್ರಿಯರಾಗಿದ್ದರು.
ಹೀಗಾಗಿ ಅವರಿಗೆ ಅಂದಿನ ಪ್ರಧಾನಿಯಾಗಿದ್ದ ತೇರೆಸಾ ಮೇ ಸರ್ಕಾರದಲ್ಲಿ ಜೂನಿಯರ ಮಂತ್ರಿಯಾಗಿ ಆಯ್ಕೆಯಾದರು. 2019ರಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಚುನಾವಣೆಯಲ್ಲಿ ರಿಷಿ ಬೋರಿ ಜಾನ್ಸನ್ ರನ್ನು ಬೆಂಬಲಿಸಿದ್ದರು. ಇದಕ್ಕೆ ಪ್ರತಿಯಾಗಿ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಆಯ್ಕೆಯಾದ ನಂತರ ರಿಷಿಗೆ ಹಣಕಾಸು ಇಲಾಖೆ ಮುಖ್ಯ ಕಾರ್ಯದರ್ಶಿಯ ಜವಾಬ್ದಾರಿ ನೀಡಲಾಯಿತು. ಸುನಕ್ ಕಾರ್ಯಕ್ಷಮತೆ ಶ್ಲಾಘಿಸಿದ ಜಾನ್ಸನ್ ಸಂಪುಟ ವಿಸ್ತರಣೆ ವೇಳೆ 2020ರ ಫೆಬ್ರವರಿಯಲ್ಲಿ ಪೂರ್ಣ ಕ್ಯಾಬಿನೆಟ್ ಸಚಿವ ಸ್ಥಾನಕ್ಕೆ ಅಂದರೆ ಚಾನ್ಸಲರ್ ಆಗಿ ನೇಮಕ ಮಾಡಲಾಗಿತ್ತು.
ಇದು ಬೋರಿಸ್ ಜಾನ್ಸನ್ ಸರ್ಕಾರದ ನಂಬರ್ ತ್ರಿ ಹುದ್ದೆಯಾಗಿದೆ. ಇನ್ನು ರಿಷಿ ಬ್ರಿಟನ್ನ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ಜನಪ್ರಿಯತೆ ಪಡೆದುಕೊಂಡಿದ್ದರು. ಇದು ಮುಂದಿನ ದಿನಗಳಲ್ಲಿ ಅವರಿಗೆ ವರವಾಗಲಿದೆ ಎಂದು ಹೇಳಲಾಗಿತ್ತು.
ರಿಷಿ ಸುನೆಕ್ ಮುಂದಿರುವ ಸವಾಲುಗಳು: ಬ್ರಿಟನ್ನಲ್ಲಿ ಆರ್ಥಿಕ ಹಿಂಜರಿತ ಕಂಡುಬಂದಿದ್ದು, ಬಡ್ಡಿದರ ಸತತವಾಗಿ ಏರಿಕೆಯಾಗುತ್ತಿದೆ. ಬ್ರಿಟನ್ನ ಕೇಂದ್ರ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ಎರಡಂಕಿ ಹಣದುಬ್ಬರವನ್ನು ಇಲಿಸಲು ಹರಸಾಹಸ ಪಡುತ್ತಿದೆ.
ಇದರಿಂದಾಗಿ ಬೆಲೆಗಳು ಗಗನಕ್ಕೇರುತ್ತಿದ್ದು, ಜನರ ನೈಜ ಆದಾಯದಲ್ಲಿ ಇಳಿಕೆಯಾಗುತ್ತಿದೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ದಿನೇ ದಿನೇ ಪೌಂಡ್ ಮೌಲ್ಯ ಕುಸಿಯತೊಡಗಿದೆ. ಹಿಂದಿನ ಪ್ರಧಾನಿ ಲಿಜ್ ಟ್ರಸ್ ತೆರಿಗೆ ಕಡಿತದ ನೀತಿಗಳಿಂದಾಗಿ ಸರ್ಕಾರಿ ಬಾಂಡುಗಳ ಮೌಲ್ಯ ಕುಸಿದಿದೆ. ಇಂಧನದ ಬೆಲೆಯು ಗಗನಕ್ಕೇರಿದೆ.
ನಾಗರಿಕರ ಜೀವನ ವೆಚ್ಚವು ಗರಿಷ್ಠವಾಗಿದ್ದು, ಇದು ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಕಳೆದ ವರ್ಷ ಮನೆಯೊಂದರ ಸರಾಸರಿ ವಿದ್ಯುತ್ ಬಿಲ್ 1,200 ಪೌಂಡ್ ಇದ್ದರೆ, ಈಗ ಅದು 3 ಸಾವಿರ ಪೌಂಡ್ ದಾಟಿದೆ. ಇಂತಹ ಹಲವು ರೀತಿಯ ಬಿಲ್ಗಳು ಜನರನ್ನು ಬಾಧಿಸುತ್ತಿವೆ.
ಈ ನಿಟ್ಟಿನಲ್ಲಿ ರಿಷಿ ಸುನಕ್ ಚುನಾವಣಾ ಪ್ರಚಾರ ನಡೆಸುವಾಗ ಬ್ರಿಟನ್ನ ಹಣದುಬ್ಬರ ನಿಯಂತ್ರಣಕ್ಕೆ ಬಂದ ಬಳಿಕ ತೆರಿಗೆ ಕಡಿತ ಮಾಡುವುದಾಗಿ ಹೇಳಿದ್ದರು. ಅಲ್ಲದೇ 2029ರವರೆಗೆ ಹಂತ ಹಂತವಾಗಿ ಶೇ.20ರಷ್ಟಿದ್ದ ಆದಾಯ ತೆರಿಗೆಯನ್ನು ಶೇ.16ಕ್ಕೆ ಇಳಿಸುವ ಯೋಜನೆಯನ್ನು ಘೋಷಿಸಿದ್ದರು. ಬ್ಯಾಂಕ್ ಆಫ್ ಇಂಗ್ಲೆಂಡ್ ಜತೆಯಲ್ಲೇ ಸರ್ಕಾರಿ ನೀತಿಗಳನ್ನು ಕೈಗೊಂಡು ಹಣದುಬ್ಬರಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ್ದರು. ಇದನ್ನು ರಿಷಿ ಸುನಕ್ ಶೀಘ್ರ ಕಾರ್ಯಗತಗೊಳಿಸಬೇಕಾಗಿದೆ.
ರಾಜಕೀಯ ಸವಾಲುಗಳು: ಸಂಸತ್ತಿನಲ್ಲಿ ಬಹುಮತ ಪಡೆದ ಕನ್ಸರ್ವೇಟಿವ್ ಪಕ್ಷವನ್ನು ತನ್ನ ನಿಯಂತ್ರಣದಲ್ಲಿ ತಂದು ಪಕ್ಷದಲ್ಲಿರುವ ಬಣಗಳನ್ನು ಒಗ್ಗೂಡಿಸುವುದು ರಿಷಿ ಮುಂದಿರುವ ಮಹತ್ವದ ಸವಾಲಾಗಿದೆ.
ಬ್ರೆಕ್ಸಿಟ್, ಆರ್ಥಿಕ ವ್ಯವಸ್ಥೆ ಹಾಗೂ ದೇಶದಲ್ಲಿ ಹೆಚ್ಚುತ್ತಿರುವ ವಲಸಿಗರ ಸಂಖ್ಯೆ ಮೊದಲಾದವುಗಳ ವಿಚಾರವಾಗಿ ಪಕ್ಷದಲ್ಲೇ ಭಿನ್ನಾಭಿಪ್ರಾಯಗಳಿವೆ. ಪಕ್ಷದಲ್ಲಿ ಕೆಲವರು ಅಧಿಕ ತೆರಿಗೆಯನ್ನು ವಿರೋಧಿಸಿದರೆ ಇನ್ನು ಕೆಲವು ಆರೋಗ್ಯ, ರಕ್ಷಣೆ ಮೊದಲಾದ ಮಹತ್ವದ ಕ್ಷೇತ್ರಗಳಲ್ಲಿ ವೆಚ್ಚ ಇಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಣಗಳ ಆಂತರಿಕ ಭಿನ್ನಾಭಿಪ್ರಾಯವನ್ನು ದೂರವಾಗಿಸಿ ಒಗ್ಗಟ್ಟು ಮೂಡಿಸುವ ಸವಾಲು ರಿಷಿ ಮುಂದಿದೆ.
ಬ್ರೆಕ್ಸಿಟ್ ನಂತರದ ಸವಾಲುಗಳು: 2016ರಲ್ಲಿ ರಿಷಿ ಬ್ರೆಕ್ಸಿಟ್ ಬೆಂಬಲಿಸಿದ್ದರು. ಆದರೆ ಬ್ರೆಕ್ಸಿಟ್ ಯಶಸ್ಸಿನ ನಂತರವೂ ಬ್ರಿಟನ್ ಭಾರತ ಸೇರಿ ಇತರೆ ದೇಶಗಳೊಂದಿಗೆ ಯಾವುದೇ ಮುಕ್ತ ವ್ಯಾಪಾರದ ಮಹತ್ವಪೂರ್ಣ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಬ್ರಿಟನ್-ಉತ್ತರ ಐರ್ಲೆಂಡ್ ನಡುವಿನ ಒಪ್ಪಂದ ಇನ್ನೂ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ರಿಷಿ ಸುನಕ್ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ. ದೇಶದ ಆರ್ಥಿಕತೆಯನ್ನು ಸುಧಾರಿಸಬೇಕಾಗಿದೆ
ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಜನ ಎರಡು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನೂತನ ಪ್ರಧಾನಿ ಆಯ್ಕೆಯಾದರೂ ನಮ್ಮ ಜೀವನಮಟ್ಟ ಸುಧಾರಿಸುವುದಿಲ್ಲ ಎಂದು ಈಗಾಗಲೇ ನಾಗರಿಕರು ಹೇಳುತ್ತಿದ್ದಾರೆ. ಜನರ ಆಕ್ರೋಶವನ್ನು ಶಮನ ಮಾಡುವುದು ಸವಾಲಾಗಿದೆ.
ಸಂಸದರೊಬ್ಬರ ಹಗರಣ, ಆ ಸಂಸದರನ್ನು ರಕ್ಷಿಸಿದ ಆರೋಪದಿಂದಲೇ ಬೋರಿಸ್ ಜಾನ್ಸನ್ ಅಧಿಕಾರ ಕಳೆದುಕೊಳ್ಳುವಂತಾಯಿತು. ಹೀಗೆ, ಹಗರಣಗಳನ್ನು ಮೆಟ್ಟಿ, ಪಾರದರ್ಶಕ ಆಡಳಿತ ನೀಡುವುದು. ಸಂಸದರ ವಿಶ್ವಾಸ ಗಳಿಸಿ, ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಮೆಟ್ಟಿ, ಉತ್ತಮ ಆಡಳಿತ ನೀಡುವ ಸವಾಲು ರಿಷಿಯ ಎದುರಿಗಿದೆ.
ಮುಂದಿನ ದಿನಗಳಲ್ಲಿ ಬ್ರೆಕ್ಸಿಟ್ ವಿಚಾರದಲ್ಲಿ ಸ್ಪಷ್ಟ ನಿಲುವು, ಉಕ್ರೇನ್ ಬಿಕ್ಕಟ್ಟು, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ ವಿಚಾರದಲ್ಲಿ ಜಾಗತಿಕವಾಗಿ ಸಮನ್ವಯ ಸಾಧಿಸುವುದು ನೂತನ ಪ್ರಧಾನಿ ಮುಂದಿರುವ ಪ್ರಮುಖ ಸವಾಲುಗಳಾಗಿವೆ.