ಸಹಕಾರ ಸಂಸ್ಥೆಗಳು ಬೆಳೆಯಲು ಬದ್ಧತೆ ಬೇಕು -ಸಚಿವ ಸೋಮಶೇಖರ್

ಚಾಮರಾಜನಗರ: ಸಹಕಾರ ಸಂಸ್ಥೆ ಎಂದರೆ ಒಬ್ಬರಿಗೊಬ್ಬರು ಸಹಕಾರ ಕೊಡುವುದು. ಎಲ್ಲಿ ಅಸಹಕಾರವಿರುತ್ತದೋ, ಅಲ್ಲಿ ಸಂಸ್ಥೆಗಳು ಬೆಳೆಯುವುದಿಲ್ಲ. ಎಲ್ಲಿ ಆಡಳಿತ ಮಂಡಳಿಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಬದ್ಧತೆ ಇದ್ದರೆ ಅಂತಹ ಸಹಕಾರ ಸಂಸ್ಥೆಗಳು ಬೆಳೆಯುತ್ತವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ತೆಂಗು ಸಂಸ್ಕರಣಾ ಘಟಕದಿಂದ ತಯಾರಿಸಲಾದ ಉತ್ಪನ್ನಗಳನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಬಿಡುಗಡೆಗೊಳಿಸಿ ಮಾತನಾಡಿ, ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಸರ್ಕಾರ ಹಮ್ಮಿಕೊಂಡಿದ್ದು, ಈ ಯೋಜನೆಯಡಿ 39 ಸಾವಿರ ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗುತ್ತದೆ. 4 ವಿಭಾಗಗಳಲ್ಲಿ ಸಾಲ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈಗಾಗಲೇ ಬೆಂಗಳೂರು ವಿಭಾಗದಲ್ಲಿ ಚಾಲನೆ ನೀಡಲಾಗಿದೆ. ಇದೇ ಅ. 2ರಂದು ಮೈಸೂರು ವಿಭಾಗದಲ್ಲಿ ವಿತರಣೆ ಮಾಡುತ್ತೇವೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಆರ್ಥಿಕ ಸ್ಪಂದನ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದ ಯಾರೆಲ್ಲ ಇದ್ದಾರೋ ಅಂಥವರಿಗೆ ಸಾಲವನ್ನು ಕೊಟ್ಟು ಅವರಿಗೆ ಆರ್ಥಿಕ ಬಲವನ್ನು ಕೊಡಲಾಗುವುದು. ಈ ಯೋಜನೆಯಿಂದ 2 ರಿಂದ 8 ಲಕ್ಷ ರೂ. ಹಾಗೂ ಇನ್ನೂ ಹೆಚ್ಚಿನ ಸಾಲವನ್ನು ಒಬ್ಬೊಬ್ಬರು ಪಡೆಯುತ್ತಿದ್ದಾರೆ. ಅಗತ್ಯ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.
ಯಾರಿಗೇ ಆದರೂ ನಾನು ಸಹಕಾರ ಸಚಿವನಾಗಿ ಸಂಪೂರ್ಣ ಸಹಕಾರ ಕೊಡುತ್ತೇನೆ. ನಾನು ಸಹಕಾರಿ ಕ್ಷೇತ್ರದಲ್ಲಿದ್ದಾಗ ಅನೇಕ ತೊಂದರೆ ಕೊಟ್ಟರು. ಆದರೆ, ನಾನು ಸಚಿವನಾಗಿ ಅಂತಹ ಕೆಲಸವನ್ನು ಎಂದೂ ಮಾಡುವುದಿಲ್ಲ. ರೈತರ ಶಕ್ತಿಗೆ ಪ್ರೇರಕವಾಗಿ ಸಹಕಾರ ಸಂಘ ಇರುತ್ತದೆ ಎಂದು ಸಹಕಾರ ಸಚಿವರಾದ ಸೋಮಶೇಖರ್ ತಿಳಿಸಿದರು.

ಸಹಕಾರ ಸಂಸ್ಥೆ ಲಾಭಕ್ಕೆ ಆಡಳಿತ ಮಂಡಳಿ ಬದ್ಧತೆ ಕಾರಣ -ಸಚಿವ ಎಸ್ ಟಿ ಎಸ್
ಚಾಮರಾಜನಗರ: ಸಹಕಾರ ಸಂಸ್ಥೆ ಲಾಭದಲ್ಲಿದೆ ಎಂದರೆ ಅದರ ಆಡಳಿತ ಮಂಡಳಿಯ ಬದ್ಧತೆ ಕಾರಣವಾಗಿರುತ್ತದೆ. ಈ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಚಾಮರಾಜನಗರ ಜಿಲ್ಲೆಯ ರಂಗಸಂದ್ರದಲ್ಲಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದಡಿ ಆಹಾರ ಮಾರಾಟ ಮಳಿಗೆ ಕಟ್ಟಡವನ್ನು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿ ಮಾತನಾಡಿ, ಈ ಗ್ರಾಮದಲ್ಲಿ ಸಂಘವನ್ನು ಮಾಡಿ, ಕಟ್ಟಡ ಕಟ್ಟಿಸಿ ಕೃಷಿ ಉತ್ಪನ್ನ ಹಾಗೂ ಕಾಡು ಉತ್ಪನ್ನಗಳನ್ನು ಖರೀದಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಆರ್ಥಿಕ ಸ್ಪಂದನ ಯೋಜನೆಗಳಡಿ 39 ಸಾವಿರ ಕೋಟಿ ರೂ. ಸಾಲ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚಾಲನೆ ಕೊಡಲಾಗಿದೆ. ಇನ್ನು ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಮೂಲಕ ಬಡವರ ಬಂಧು, ಎಸ್ ಸಿ ಎಸ್ ಟಿ ಗಳಿಗೆ ಸಾಲ ವಿತರಣೆ ಮಾಡುತ್ತಿದ್ದು, 10 ಸಾವಿರ, 20-25 ಸಾವಿರ ರೂ. ಹೀಗೆ ಅಗತ್ಯಕ್ಕೆ ತಕ್ಕಂತೆ ಸಾಲವನ್ನು ಸಹಕಾರ ಇಲಾಖೆ ವತಿಯಿಂದ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್, ಶಾಸಕರಾದ ನಿರಂಜನ್ ಕುಮಾರ್, ಪುಟ್ಟರಂಗಶೆಟ್ಟಿ ಉಪಸ್ಥಿತರಿದ್ದರು.