ಹಿರೇಮಗಳೂರು ದೊಡ್ಡ ಕೆರೆ ಏರಿ ಕುಸಿತ: ಸಚಿವ ಸಿಟಿ ರವಿ ಭೇಟಿ

ಚಿಕ್ಕಮಗಳೂರು: ಹಿರೇಮಗಳೂರು ದೊಡ್ಡ ಕೆರೆಯ ಏರಿ ಕುಸಿದಿದೆ.
ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಏರಿ ಅಗಲೀಕರಣ ಸಂದರ್ಭದಲ್ಲಿ ಇಲ್ಲಿದ್ದ ಮರಗಳನ್ನು ಕಡಿಯಲಾಗಿತ್ತು. ಮರದ ಬೇರುಗಳು ಟೊಳ್ಳು ಬಿದ್ದ ಪರಿಣಾಮ ಹೀಗಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಸಚಿವ ಸಿಟಿ ರವಿ ಅವರು ತಿಳಿಸಿದರು.
ರಸ್ತೆ ಅಗಲೀಕರಣದ ವೇಳೆ ಮುನ್ನೆಚ್ಚರಿಕೆಯಾಗಿ ರೋಲ್ ಮಾಡಿ ಕಪ್ಪು ಮಣ್ಣನ್ನು ಹಾಕಿ ರಸ್ತೆಯನ್ನು ಮಾಡಿ ಆನಂತರ ಏರಿ ಕಟ್ಟಲಾಗಿತ್ತು ಆದರೂ ಕುಸಿದಿದೆ. ಕೆರೆಯಲ್ಲಿರುವ ನೀರನ್ನು ತೆರವುಗೊಳಿಸಿ ದುರಸ್ತಿಗೊಳಿಸಲು ಸೂಚನೆ ನೀಡಿದ್ದೇನೆ ಎಂದರು.
ಸುತ್ತಮುತ್ತಲ ನೂರಾರು ರೈತರ ಜಮೀನಿಗೆ ಜೀವಜಲ ನೀಡುತ್ತಿದ್ದ ಕೆರೆ ಈಗ ರಸ್ತೆ ಕುಸಿತದಿಂದ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಕೆರೆಯ ನೀರನ್ನು ತೂಬು ಮಾರ್ಗವಾಗಿ ಹೊರಬಿಡಲಾಗುತ್ತಿದೆ ಎಂದವರು ತಿಳಿಸಿದರು.
ದುರಸ್ತಿ ಆಗುವವರಿಗೆ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ಈ ಮಾರ್ಗದಲ್ಲಿ ಇತರೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಸಚಿವ ಸಿಟಿ ರವಿ ಅವರು ತಿಳಿಸಿದರು.