ಬೆಂಗಳೂರು: ಶುಕ್ರವಾರ ನಡೆಯಲಿರುವ ಸಭೆಯಲ್ಲಿ ತಜ್ಞರು ನೀಡಿರುವ ಶಿಫಾರಸ್ಸುಗಳ ಬಗ್ಗೆ ಪರಾಮರ್ಶೆ ನಡೆಸಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸರ್ಕಾರಕ್ಕೆ ಹಲವು ಸಲಹೆಗಳನ್ನು ನೀಡಿದ್ದಾರೆ ಅವುಗಳನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದರು.
ಎಲ್ಲ ಸಾಧಕಬಾಧಕಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಜನಪರವಾದ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಶುಕ್ರವಾರದಂದು ಬರಲಿರುವ ಕೋವಿಡ್ ಸೋಂಕು ಪ್ರಕರಣಗಳು ಹಾಗೂ ಪಾಸಿವಿಟಿ ದರ ನೋಡಿಕೊಂಡು ಸರ್ಕಾರ ಅಂತಿಮವಾದ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲಿಯವರೆಗೂ ಕಾದುನೋಡಿ ಎಂದರು.
ಜನರಿಗೆ ತೊಂದರೆ ಕೊಟ್ಟು ಲಾಕ್ಡೌನ್ ಇಲ್ಲವೇ ಕರ್ಫ್ಯೂ ವಿಧಿಸುತ್ತಿಲ್ಲ. ಸೋಂಕು ಒಬ್ಬರಿಂದ ಒಬ್ಬರಿಗೆ ಬೇಗನೆ ಹಬ್ಬುತ್ತಿರುವುದರಿಂದ ಕಡಿವಾಣ ಹಾಕುವ ಅಗತ್ಯ ಇದೆ ಹಾಗಾಗಿ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ವಾರಾಂತ್ಯದ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಲು ಮುಕ್ತ ಸ್ವಾತಂತ್ರ್ಯವಿದೆ. ಸರ್ಕಾರ ಒಬ್ಬರಿಗೆ ತೊಂದರೆ ಕೊಟ್ಟು ನಿಯಮಗಳನ್ನು ರೂಪಿಸುವುದಿಲ್ಲ. ಜನರ ಪ್ರಾಣ ರಕ್ಷಣೆಗಾಗಿ ಈ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.
ರಾಜ್ಯದಲ್ಲಿ ಸರ್ಕಾರ ಜಾರಿ ಮಾಡಿರುವ ಕೋವಿಡ್ ಮಾರ್ಗಸೂಚಿಗಳು ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ಜನಸಾಮಾನ್ಯರಿಗೊಂದು, ರಾಜಕಾರಣಿಗಳಿಗೊಂದು, ಬೇರೊಬ್ಬರಿಗೊಂದು ಎಂಬ ಪ್ರತ್ಯೇಕ ನಿಯಮಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಪಕ್ಷದವರೇ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವುದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕಾಂಗ್ರೆಸ್ನವರು ದೂರು ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ನಾನೇ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದೇನೆ ಎಂದರು.
ಮಾರ್ಗಸೂಚಿಗಳನ್ನು ಉಲಂಘನೆ ಮಾಡಿರುವವರು ಯಾರೇ ಅವರ ಮೇಲೆ ಕಾನೂನಿನ ಪ್ರಕಾರ ದೂರು ದಾಖಲಿಸಲು ನಾನೇ ಸೂಚಿಸಿದ್ದೇನೆ. ಕಾಂಗ್ರೆಸ್ನವರು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಕೋವಿಡ್ ನೆಗೆಟಿವ್ ವರದಿ ಬಂದಿದೆ. 10-12 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದು ಇದೀಗ ಸಂಪೂರ್ಣ ಗುಣಮುಖನಾಗಿರುವುದರಿಂದ ದೈನಂದಿನ ಕೆಲಸ ಕಾರ್ಯಗಳನ್ನು ಕಚೇರಿಯಿಂದಲೇ ಮುಂದುವರಿಸುತ್ತೇನೆ ಎಂದು ಮುಖ್ಯ ಮಂತ್ರಿಗಳು ಹೇಳಿದರು.