ಚಿಕ್ಕೋಡಿ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ದೇಶದ ರೈತರ ಸಾಲ ಮನ್ನಾ ಆಗಲಿದೆ ಎಂದು ಸಿಎಂಸಿದ್ದರಾಮಯ್ಯ ಹೇಳಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಅವರ ಪರ ಏರ್ಪಡಿಸಿದ್ದ ಪ್ರಜಾಧ್ವನಿ-2 ಜನ ಸಮಾವೇಶ ಉದ್ಘಾಟಿಸಿ ಸಿಎಂ ಮಾತನಾಡಿದರು.
ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲಾ ಪ್ರಧಾನಿ ಮೋದಿ ಭಯಾನಕ ಸುಳ್ಳು ಹೇಳಿ ಹೋಗುತ್ತಾರೆ. ಹೆಣ್ಣುಮಕ್ಕಳ ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳುವ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲಾರದು ಎಂದು ಟೀಕಿಸಿದರು.
ನಾವು ಯಾವತ್ತೂ ಶಿವಾಜಿ ಮಹಾರಾಜರನ್ನು ಅವಮಾನಿಸಿಲ್ಲ. ಆದರೆ ಮೋದಿ ಸುಳ್ಳು ಹೇಳ್ತಾರೆ ನೋಡಿ. ಕಾಂಗ್ರೆಸ್ ನವರು ರಾಣಿ ಚನ್ನಮ್ಮರಿಗೆ ಮತ್ತು ಶಿವಾಜಿ ಮಹಾರಾಜರಿಗೆ ಅವಮಾನ ಮಾಡಿದ್ದೀವಿ ಎಂದು ಸುಳ್ಳು ಹೇಳ್ತೀರಲ್ಲಾ , ಸುಳ್ಳಿಗೆ ಒಂದು ಮಿತಿಯಾದರೂ ಬೇಡ್ವಾ ಮೋದಿ ಎಂದರು.
ಈಗ ಮೋದಿ ಹಿಂದುಳಿದ ಜಾತಿ ಸಮುದಾಯಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಭಯನಾಕ ಸುಳ್ಳು ಸೃಷ್ಟಿಸಿದ್ದಾರೆ. ಹಿಂದುಳಿದವರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂಬ ಭಯಾನಕ ಸುಳ್ಳು ಹೇಳಿದ ಮೋದಿಯವರಿಗೆ ನಾಚಿಕೆ ಅನ್ನೋದೇ ಇಲ್ಲ ಎಂದು ಟೀಕಿಸಿದರು.
ಪ್ರತಿ ಭಾರತೀಯರಿಗೆ ಏನೇನು ಕಡುತ್ತೀವಿ ಎಂದು ನಂಬಿಸಿ ಮೋಸ ಮಾಡಿದ್ದಾರೆ ಎಂದು ಸಿಎಂ ದೂರಿದರು.
ಬಿಜೆಪಿ ಭಾರತೀಯರ ಭಾವನೆಗಳ ಜೊತೆ ಚೆಲ್ಲಾಟ ಆಡ್ಕೊಂಡು ಲಾಭ ಮಾಡಿಕೊಳ್ತಾರೆ. ಆದರೆ ನಾವು ಕಾಂಗ್ರೆಸ್ಸಿವರು ಜನರ ಬದುಕಿನ ಸಂಕಷ್ಟಗಳನ್ನು ಕಡಿಮೆ ಮಾಡಲು ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ, ಕೊಟ್ಟ ಮಾತನ್ನು ಈಡೇರಿಸಿದ ನೈತಿಕತೆಯಿಂದ ನಾವು ನಿಮ್ಮ ಮುಂದೆ ಬಂದು ಮತ ಕೇಳುತ್ತಿದ್ದೇವೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಪ್ರತೀ ವರ್ಷ ಮಹಿಳಾ ಯಜಮಾನಿಯ ಖಾತೆಗೆ ಒಂದು ಲಕ್ಷ ರೂಪಾಯಿ ಜಮೆ ಆಗತ್ತದೆ,
ಇಡೀ ದೇಶದ ರೈತರ ಸಾಲ ಮನ್ನಾ ಆಗತ್ತದೆ,
ನಿರುದ್ಯೋಗಿ ಯುವಕ ಯುವತಿಯರಿಗೆ ಲಕ್ಷ ರೂಪಾಯಿ ಸಿಗತ್ತದೆ,
ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿ ಆಗತ್ತದೆ, ಅದಕ್ಕಾಗಿ ಕಾಯ್ದೆ ತರುತ್ತೇವೆ ಎಂದು ಕಾಂಗ್ರೆಸ್ ನ ಭರವಸೆಗಳನ್ನು ಸಿದ್ದರಾಮಯ್ಯ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ , ಬೈರತಿ ಸುರೇಶ್, ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಹಾಗೂ ಜಿಲ್ಲೆಯ ಶಾಸಕರು ಮತ್ತು ಮುಖಂಡರು ಉಪಸ್ಥಿತರಿದ್ದರು.