ಪ್ರಧಾನ ಮಂತ್ರಿ ಆವಾಸ್ ಯೋಜನೆ ರಾಷ್ಟ್ರೀಯ ಪುರಸ್ಕಾರಕ್ಕೆ ಚಾಮರಾಜನಗರ ಪಟ್ಟಣ ಫಲಾನುಭವಿ ಆಯ್ಕೆ

ಚಾಮರಾಜನಗರ: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅತ್ಯುತ್ತಮ ಮನೆ ನಿರ್ಮಾಣ ವರ್ಗದ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಲಾಗುವ ರಾಷ್ಟ್ರೀಯ ಪುರಸ್ಕಾರಕ್ಕಾಗಿ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಮೂವರು ಫಲಾನುಭವಿಗಳ ಪೈಕಿ ಚಾಮರಾಜನಗರ ಜಿಲ್ಲೆಯ ಓರ್ವರೂ ಸಹ ಇದ್ದು ಈ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅನುಷ್ಠಾನದಲ್ಲಿ ವಾರ್ಷಿಕ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದೆ.
ಪ್ರತೀ ರಾಜ್ಯದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಗರ ಪಟ್ಟಣಗಳ ವ್ಯಾಪ್ತಿಯಲ್ಲಿ ಅತ್ಯುತ್ತಮವಾಗಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳನ್ನು ಅತ್ಯುತ್ತಮ ಮನೆ ನಿರ್ಮಾಣ ವರ್ಗ ಅಡಿಯಲ್ಲಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಕರ್ನಾಟಕ ರಾಜ್ಯದಿಂದ ಮೂವರು ಫಲಾನುಭವಿಗಳು ಈ ಮಹತ್ತರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಇವರಲ್ಲಿ ಚಾಮರಾಜನಗರ ಪಟ್ಟಣದಲ್ಲಿ ಮನೆ ನಿರ್ಮಿಸಿಕೊಂಡಿರುವ ರಾಚಮ್ಮ ಕೂಡ ಒಬ್ಬರಾಗಿದ್ದು ರಾಜ್ಯದ ಗಮನಸೆಳೆದಿದ್ದಾರೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 2016-17ನೇ ಸಾಲಿನಲ್ಲಿ ರಾಚಮ್ಮರವರು ವಾಜಪೇಯಿ ನಗರ ವಸತಿ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಯಾಗಿ ಆಯ್ಕೆಯಾಗಿದ್ದರು.
ಇವರು ತಮ್ಮ ಸ್ವಂತ ನಿವೇಶನದಲ್ಲಿ ರಾಜ್ಯ ಸರ್ಕಾರದ ಸಹಾಯಧನ 149800 ರೂ ಮತ್ತು ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ 150000 ರೂ ಸೇರಿದಂತೆ ಒಟ್ಟು 298800 ರೂ ಸಹಾಯಧನ ಪಡೆದು ಪಕ್ಕಾ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
ರಾಮಸಮುದ್ರದ ಹಳೇ ಬಡಾವಣೆ ನಿವಾಸಿಯಾಗಿರುವ ರಾಚಮ್ಮ ವಸತಿ ಯೋಜನೆಯಡಿ ಆಯ್ಕೆಯಾಗಿ ಪಕ್ಕಾ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ.
ಸಂಬಂಧಿಗಳೊಂದಿಗೆ ಸೇರಿ ಅವರೇ ತಮ್ಮ ಸ್ವಂತ ವಿವೇಚನೆಯಿಂದ ಮನೆಯನ್ನು ನಿರ್ಮಿಸಿ ಕೊಂಡಿದ್ದು ಮನೆಯ ಹೊರಾಂಗಣವು ಉತ್ತಮವಾಗಿದೆ.
ಫಲಾನುಭವಿಯ ಆಯ್ಕೆಗಾಗಿ ಯೋಜನೆಯಡಿ ಮಾನದಂಡವಾಗಿ ಮನೆ ನಿರ್ಮಾಣದ ಪ್ರಗತಿ, ಮನೆಯ ಹೊರಾಂಗಣ, ಯೋಜನೆಯ ಚಿಹ್ನೆ ಬರವಣಿಗೆ, ಜಾಗೃತಿ ಚಟುವಟಿಕೆ ಹಾಗು ಇತರೆ ವಿಷಯಗಳನ್ನು ಪರಿಗಣಿಸಲಾಗಿದೆ. ಇದರಿಂದಾಗಿ ರಾಚಮ್ಮ ಅವರು ಪ್ರಧಾನಮಂತ್ರಿ ಅವಾಸ್ ಯೋಜನೆಯ ಅತ್ಯುತ್ತಮ ಮನೆ ನಿರ್ಮಾಣ ವರ್ಗದ ಅಡಿಯಲ್ಲಿ ಪುರಸ್ಕಾರಕ್ಕಾಗಿ ಆಯ್ಕೆಯಾಗಿದ್ದಾರೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆ ವತಿಯಿಂದ ಜನವರಿ 1 ರಂದು ಪ್ರಧಾನ ಮಂತ್ರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ವಸತಿ ಯೋಜನೆಗಳ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವ ಮತ್ತು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಅತ್ಯುತ್ತಮ ಮನೆ ನಿರ್ಮಾಣ ವರ್ಗ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಿದ್ದಾರೆ.
ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಯಡಿ ಅತ್ಯುತ್ತಮ ಮನೆ ನಿರ್ಮಾಣ ವರ್ಗದ ಅಡಿಯಲ್ಲಿ ನೀಡಲಾಗುತ್ತಿರುವ ಪ್ರತಿಷ್ಠಿತ ಗೌರವಕ್ಕೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿರುವ ಮೂವರಲ್ಲಿ ಚಾಮರಾಜನಗರ ಪಟ್ಟಣದ ಫಲಾನುಭವಿಯು ಒಬ್ಬರಾಗಿರುವುದು ನಿಜಕ್ಕೂ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಚಾಮರಾಜನಗರದ ಪಟ್ಟಣದ ಫಲಾನುಭವಿ ರಾಚಮ್ಮ ಅವರನ್ನು ಅಭಿನಂದಿಸುತ್ತೇನೆ. ಮುಂದೆಯೂ ವಸತಿ ಯೋಜನೆಗಳಲ್ಲಿ ಇನ್ನಷ್ಟು ಪ್ರಶಸ್ತಿ ಗೌರವವನ್ನು ಜಿಲ್ಲೆಯ ಫಲಾನುಭವಿಗಳು ಪಡೆಯುವಂತಾಗಲಿ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಹೇಳಿದ್ದಾರೆ.