ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಹಾಡುಹಗಲೆ ಎರಡು ಲಕ್ಷ ದೋಚಿದ ಘಟನೆ ಚಾಮರಾಜನಗರ ಪಟ್ಟಣದಲ್ಲಿ ನಡೆದಿದೆ.
ಹೌಸಿಂಗ್ ಬೋರ್ಡ್ ಕಾಲೋನಿಯ ಶಿವಕುಮಾರ್ ಎಂಬುವವರೆ ಹಣ ಕಳೆದುಕೊಂಡವರಾಗಿದ್ದಾರೆ.
ಇವರು ಕಾಳನಹುಂಡಿ ಗ್ರಾಮದ ಶಾಲೆಯಲ್ಲಿ ಸಹಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದು ಇವರು ನಂಜನಗೂಡಿನ ದೇವಿರಮ್ಮನಹಳ್ಳಿಯಲ್ಲಿ ಮನೆ ಕಟ್ಟಿಸುತ್ತಿದ್ದು ಮನೆ ಕಟ್ಟಡ ಸಾಮಾಗ್ರಿ ಹಾಗೂ ಕೂಲಿಯಾಳುಗಳಿಗೆ ಹಣ ನೀಡಲು ಮನೆಯಲ್ಲಿದ್ದ 50 ಸಾವಿರ, ತಮ್ಮನಿಂದ ಪಡೆದ 50 ಸಾವಿರ ಹಾಗೂ ಕೆನರಾ ಬ್ಯಾಂಕಿನಿಂದ ಡ್ರಾ ಮಾಡಲಾದ ಒಂದು ಲಕ್ಷ ಹಣವನ್ನ ಬ್ಯಾಗ್ ಅಲ್ಲಿ ತೆಗೆದುಕೊಂಡು ನಂಜನಗೂಡಿನ ಬಸ್ ಹತ್ತಲು ಪಚ್ಚಪ್ಪ ವೃತ್ತದ ಬಳಿ ಬಂದು ನಿಂತಿದ್ದಾಗ ಕಿಡಿಗೇಡಿಗಳು ಉರಿಬರುವ ದ್ರವರೂಪವನ್ನಇವರ ಮೇಲೆ ಚಿಮುಕಿಸಿದ್ದಾರೆ.
ಇದರಿಂದ ಚರ್ಮ ಉರಿಬಂದು ಕೆರೆಯುವ ಸಂದರ್ಭದಲ್ಲಿ ಸಹಾಯ ಮಾಡುವ ನೆಪದಲ್ಲಿ ಗಮನ ಬೇರೆಡೆ ಸೆಳೆದು ಮೂರ್ನಾಲ್ಕು ಜನರ ತಂಡ ಹಣ ದೋಚಿ ಪರಾರಿಯಾಗಿದ್ದಾರೆ.
ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಚಾಮರಾಜನಗರ ಪಟ್ಟಣದ ಪ್ರಮುಖ ವೃತ್ತವಾದ ಭುವನೇಶ್ವರಿ ವೃತ್ತದ ಬಳಿಯೇ ಪೊಲೀಸ್ ಇಲಾಖೆಗೆ ಸೇರಿದ ಸಿ.ಸಿ.ಕ್ಯಾಮೆರಾ ಇದ್ದು ಘಟನೆ ನಡೆದು ಮದ್ಯಾಹ್ನವಾದರೂ ಆರೋಪಿಗಳ ಪತ್ತೆಯಾಗದಿರುವುದು ನೋಡಿದರೆ ಇಲಾಖೆ ಅಳವಡಿಸಿರೊ ಕ್ಯಾಮೆರಾ ದುಸ್ಥಿತಿಗೆ ತಲುಪಿದಿಯೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿಸಿದೆ.