ಬೆಂಗಳೂರು: ಅಪ್ಪು ಅಭಿನಯದ ಗಂಧದ ಗುಡಿ ಚಿತ್ರವನ್ನು ವಿಶ್ವದಾದ್ಯಂತ ಅಭಿಮಾನಿಗಳು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ ಶೋಗಳು ಹೌಸ್ ಫುಲ್ ಆಗಿ ಪ್ರದರ್ಶನ ಕಾಣುತ್ತಿವೆ.
ರಾಜ್ಯಾದ್ಯಂತ ಅಪ್ಪು ಫ್ಯಾನ್ಸ್ ಸಾವಿರಾರು ಟಿಕೆಟ್ಗಳನ್ನು ಕೊಂಡು ಎಲ್ಲರಿಗೂ ಹಂಚುತ್ತಿದ್ದಾರೆ.
ಅಭಿಮಾನಿಗಳು ಥಿಯೇಟರ್ ಗಳ ಮುಂದೆ ದೊಡ್ಡ ದೊಡ್ಡ ಕಟೌಟ್ ಹಾಕಿ ಆನಂದಿಸಿ, ಅನ್ನಸಂತರ್ಪಣೆ ಮತ್ತಿತರ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದರು.
ಒಂದು ವಾರದ ಹಿಂದಿನಿಂದಲೇ ಆನ್ ಲೈನ್ ನಲ್ಲಿ ಟಿಕೆಟ್ ಬುಕಿಂಗ್ ಆಗಿದ್ದು ತಮ್ಮ ನೆಚ್ಚಿನ ನಾಯಕ ನಟನನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.
ಸಿನಿಮಾ ನೋಡಿದ ಪ್ರೇಕ್ಷಕ ಚಿತ್ರವನ್ನು ಆನಂದಿಸುವುದು ಒಂದು ಕಡೆಯಾದರೆ ನೆಚ್ಚಿನ ನಾಯಕನನ್ನು ಕಳೆದುಕೊಂಡು ದುಃಖಿಸುತ್ತಿದ್ದುದೂ ಹೌದು.
ಕನ್ನಡ ನಾಡಿನ ಅರಣ್ಯ ಸಂಪತ್ತು ಮತ್ತು ಸಂಸ್ಕೃತಿ, ಕಲೆ ಕುರಿತು ಪುನೀತ್ ರಾಜಕುಮಾರ್ ಅವರಿಗೆ ಇದ್ದ ಕಾಳಜಿ, ಅಭಿಮಾನ, ಪ್ರೀತಿ, ಗೌರವ ಇವೆಲ್ಲವೂ ಗಂಧದಗುಡಿಯಲ್ಲಿ ಗೋಚರವಾಗುತ್ತದೆ.
ಪರಿಸರ ಪ್ರೇಮಿ ಅಮೋಘ ವರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಅಪ್ಪು ಅವರ ಸಮಾಜಮುಖಿ ಚಿಂತನೆಗಳು ಅನಾವರಣಗೊಂಡಿದೆ.
ಪರಿಸರವನ್ನು ಉಳಿಸಿ ಬೆಳೆಸಿ ಎಂದು ಸಾರುವ ಈ ಚಿತ್ರ ಇಂದಿನ ಸಮಾಜಕ್ಕೆ ದೊಡ್ಡ ಸಂದೇಶವಾಗಿ ನಿಲ್ಲುತ್ತದೆ.
ಡಾ. ರಾಜಕುಮಾರ್ ಅವರ ಹುಟ್ಟೂರಾದ ಗಾಜನೂರು, ನಾಗರಹೊಳೆ ಅರಣ್ಯ, ಮಲೆನಾಡು,ಮಂಗಳೂರು, ಕಾಳಿ ನದಿ ಹೀಗೆ ಕರ್ನಾಟಕದ ನಾಲ್ಕು ದಿಕ್ಕುಗಳ ವನ್ಯ ಸಂಪತ್ತು,ಸಮುದ್ರ ಸಂಪತ್ತು ಈ ಚಿತ್ರದಲ್ಲಿ ಭವ್ಯವಾಗಿ ಅನಾವರಣಗೊಂಡಿವೆ.
ಅಶ್ವಿನಿ ಪುನೀತ್ ರಾಜಕುಮಾರ್ ತನ್ನ ಪ್ರೀತಿಯ ಪತಿಗಾಗಿ ನಿರ್ಮಾಣ ಮಾಡಿದ ಚಿತ್ರ ಇದು.
ಗುರುವಾರ ರಾತ್ರಿ ಸಿನಿ ಪ್ರಮುಖರಿಗೆ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು.
ಚಿತ್ರ ವೀಕ್ಷಿಸಿದ ಸಿನಿ ತಾರೆಯರು, ಗಂಧದ ಗುಡಿ ಅದ್ಭುತವಾಗಿ ಮೂಡಿಬಂದಿದೆ, ಆದರೆ ಅದನ್ನು ನೋಡಲು ಅಪ್ಪು ಇಲ್ಲ ಎಂದು ದುಃಖವನ್ನು ತೋಡಿಕೊಂಡರು.
ಕೆಲವರಂತೂ ದುಃಖ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತರು. ಚಿತ್ರದಲ್ಲಿ ಕೆಲವು ಸನ್ನಿವೇಶಗಳನ್ನು ನೋಡಿದಾಗ,ಅಪ್ಪು ಅವರಿಗೆ ಮೊದಲೇ ಸಾವಿನ ಸೂಚನೆ ಇತ್ತೇ ಎಂಬಂತೆ ಕಾಡಿಬಿಡುತ್ತದೆ.
ಕ್ರಿಕೆಟಿಗರಾದ ವಿ ವಿ ಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಶ್ರೀನಾಥ್, ದ್ರಾವಿಡ್ ಸೇರಿದಂತೆ, ಭಾರತದ ಅನೇಕ ಸಿನಿ ತಂತ್ರಜ್ಞರು ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದ ಗುಡಿಗೆ ಶುಭಕೋರಿದ್ದಾರೆ.
ಅಪ್ಪು ಅಭಿನಯದ ಗಂಧದಗುಡಿ ಚಿತ್ರವನ್ನು ಹೃದಯ ಭಾರ ಮಾಡಿಕೊಂಡು ವೀಕ್ಷಿಸಿದ ರಾಘಣ್ಣ ನರ್ತಕಿ ಚಿತ್ರಮಂದಿರದ ಮುಂದೆ ಅಭಿಮಾನಿಗಳೊಂದಿಗೆ ಮೈಮರೆತು ಕುಣಿಯುತ್ತಲೇ ಕಂಬನಿ ಮಿಡಿದರು.