ಚೆಕ್ ಬೌನ್ಸ್ ಪ್ರಕರಣ: ಮಧು ಬಂಗಾರಪ್ಪ ರಾಜೀನಾಮೆಗೆ ಅಶೋಕ್ ಒತ್ತಾಯ

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೂಡಲೇ ರಾಜೀನಾಮೆ ನೀಡಬೇಕೆಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,

ಶಿಕ್ಷಣ ಸಚಿವರ ಪಾಡೇ ಹೀಗಾದರೆ ಹೇಗೆ, ಚೆಕ್ ಬೌನ್ಸ್ ಅಂದ್ರೆ ಮೋಸ ಮಾಡಿದ್ದಾರೆ  ಅಂತ ಅರ್ಥ. ಕೋರ್ಟ್  ಶಿಕ್ಷೆ ವಿಧಿಸಿದರೂ  ಸಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಟೀಕಿಸಿದರು.

ಕೂಡಲೇ ಮಧು ಬಂಗಾರಪ್ಪ ಅವರ ರಾಜೀನಾಮೆ ಪಡೆಯಬೇಕು ಎಂದು ಮುಖ್ಯ ಮಂತ್ರಿಗಳನ್ನು ಅವರು ಆಗ್ರಹಿಸಿದರು.

ಚೆಕ್ ಬೌನ್ಸ್ ಪ್ರಕರಣದಲ್ಲಿ ಸಚಿವ ಮಧು ಬಂಗಾರಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್  6,96, 70,000 ರೂ. ದಂಡ ವಿಧಿಸಿದೆ.

ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುತ್ತಿದ್ದಂತೆ ಅಲ್ಪಸಂಖ್ಯಾತರನ್ನು  ಓಲೈಕೆ ಮಾಡುತ್ತಾ

ರೈತರ ಕುತ್ತಿಗೆಗೆ ಕುಣಿಕೆ ಹಾಕುತ್ತಿದ್ದಾರೆ ಎಂದು ಇದೇ‌ ವೇಳೆ ಟೀಕಾಪ್ರಹಾರ ನಡೆಸಿದರು.

ಬರದಿಂದ ಹೈರಾಣಾಗಿರುವ ರೈತರಿಗೆ 2,000 ರೂಪಾಯಿ ಪರಿಹಾರ ಕೊಡಲು ಮೀನ-ಮೇಷ ಎಣಿಸುತ್ತಿರುವ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ 1,000 ಕೋಟಿ ನೀಡಲು ಹೊರಟಿದೆ ಎಂದು ಕಿಡಿಕಾರಿದರು.

ತಮ್ಮ ಕಲ್ಲು ಹೃದಯ ಕರಗಲು ಇನ್ನೆಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು ಮುಖ್ಯ ಮಂತ್ರಿಗಳೆ ಎಂದು ಅವರು ಕಾರವಾಗಿ ಪ್ರಶ್ನಿಸಿದರು.