ಕ್ಲಬ್ ಹೌಸ್ ಗೆ ಮನಸೋತ ಭಾರತೀಯರು

ಡಾ. ಗುರುಪ್ರಸಾದ ಎಚ್. ಎಸ್.

ಲೇಖಕರು ಮತ್ತು ಉಪನ್ಯಾಸಕರು

dr.guruhs@gmail.com

ಇಂದು ಪ್ರತಿಯೊಂದನ್ನು ಪಡೆಯಲು,ಗಳಿಸಲು, ನೋಡಲು, ಕೇಳಲು, ಕಾರ್ಯನಿರ್ವಹಿಸಲು, ಬದುಕಿನ ದಿನನಿತ್ಯದಲ್ಲಿ   ಹಾಸುಹೊಕ್ಕಾಗಿ ಮನುಷ್ಯ ಸಂಬಂಧವನ್ನು ಹತ್ತಿರವಾಗಿಸುತ್ತಾ, ದೂರವಾಗಿಸುತ್ತಾ, ತನ್ನ ಕಬಂಧ ಬಾಹುವನ್ನು ಚಾಚುತ್ತಾ ಇಡೀ ವಿಶ್ವವೇ ಡಿಜಿಟಲ್ ತಂತ್ರಜ್ಞಾನದ ಮಾಯೆಗೆ ಮಾರು ಹೋಗುವಂತೆ, ತಂತ್ರಜ್ಞಾನವಿಲ್ಲದ   ಜೀವನವೇ ಇಲ್ಲವೇನು ಎಂಬಷ್ಟರ ಮಟ್ಟಿಗೆ ನಮ್ಮಲ್ಲರನ್ನು ಅವರಿಸಿದೆ.

ಹಾಗದರೆ  ಈ ಡಿಜಿಟಲ್ ಯುಗದ ಸೋಷಿಯಲ್ ಮೀಡಿಯಾ ಗಳ ಬಗ್ಗೆ ಏನು ಗೊತ್ತಿಲ್ಲದೆ ಬದುಕ ಬಹುದೇ ಎಂದು ಕೇಳಿದರೆ ಖಂಡಿತವಾಗಿ ಜೀವಿಸ ಬಹುದು, ಆದರೆ ನಾವು  ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸುವ ಬದಲು ಅದುವೇ ಜೀವನ  ಸೋಷಿಯಲ್ ಮೀಡಿಯಾ ಇಲ್ಲದೇ ಇರುವವರು ನಾಗರಿಕರೇ ಅಲ್ಲ ಎಂಬ ಹಂತಕ್ಕೆ ಬಂದುಬಿಟ್ಟಿದ್ದಾರೆ. ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಆ್ಯಪ್ ಗಳಲ್ಲಿ  ವಿಶಿಷ್ಟ ವಾಗಿರುವ ಹೆಚ್ಚು ಜನಪ್ರಿಯವಾಗುತ್ತಿರುವ ಕ್ಲಬ್ ಹೌಸ್  ಫೇಸ್ ಬುಕ್, ಇನ್ ಸ್ಟಾಗ್ರಾಂ, ಟ್ವಿಟ್ಟರ್ ನಂತಹ ಸಾಮಾಜಿಕ ಜಾಲತಾಣಗಳಿಗೆ ತೀವ್ರ ಪೈಪೋಟಿ ನೀಡುತ್ತಿರುವ ಈ ಮೂಲಕ ಹೆಚ್ಚು ಸುದ್ದಿಯಾಗುತ್ತಿದೆ.

ದಿನದಿಂದ ದಿನಕ್ಕೆ ಹೆಚ್ಚಿನ ಬಳಕೆದಾರರನ್ನು ಹೊಂದುತ್ತಿರುವ ಕ್ಲಬ್ ಹೌಸ್ ಆ್ಯಪ್ ವಿಭಿನ್ನ ರೀತಿಯ ಸಾಮಾಜಿಕ ಜಾಲತಾಣವಾಗಿದೆ.

ಈ ಹಿಂದೆ ಕೇವಲ ಫೋಟೊ, ವಿಡಿಯೋ, ಮೆಸೇಜ್ ಗಳ ಮೂಲಕ ಸಂಪರ್ಕಿಸಲು ಹಲವು ಸಾಮಾಜಿಕ ಜಾಲತಾಣಗಳಿದ್ದವು, ಆದರೆ ಲೈವ್ ಆಗಿ ಸಾವಿರಕ್ಕೂ ಹೆಚ್ಚು ಜನರು ವಾಯ್ಸ್ ಚಾಟ್ ನಡೆಸಲು ಯಾವುದೇ ಆ್ಯಪ್ ಗಳಿರಲಿಲ್ಲ.

ಈಗ ಬಂದಿರುವ ಕ್ಲಬ್ ಹೌಸ್ ಆ್ಯಪ್ ನಲ್ಲಿ  ನಾವು ಬಳಸುವ ಇನ್ನಿತರೆ ಸಾಮಾಜಿಕ ಜಾಲತಾಣಗಳಂತೆ ಪೋಸ್ಟ್ ಹಾಗೂ ಟೈಪ್ ಮಾಡಲು ಯಾವುದೇ ಆಯ್ಕೆಗಳಿಲ್ಲ, ಬದಲಾಗಿ ವಾಯ್ಸ್ ಚಾಟ್ ಮುಖಾಂತರ ಮಾತನಾಡಬಹುದು.ಇದರಲ್ಲಿರುವ ಡ್ರಾಪ್ ಇನ್ ಆಡಿಯೋ ಎನ್ನುವ ಸಾಲು ಹೆಚ್ಚು ಕ್ರಿಯೇಟಿವ್ ಆಗಿದೆ.

ಕ್ಲಬ್‌ಹೌಸ್ ಬಿಡುಗಡೆಯಾಗಿ ಸುಮಾರು 15 ತಿಂಗಳುಗಳೇ ಕಳೆದಿವೆ. ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ಗಳಿಗೆ ಈ ಆ್ಯಪ್ ಲಭ್ಯವಾದ ಬಳಿಕವಷ್ಟೇ ಗೊತ್ತಾಗಿದ್ದು, ಉಳಿದಂತೆ ಫೇಸ್‌ಬುಕ್‌ನಲ್ಲಿ ಲೈವ್ ಚಾಟ್ ರೂಮ್ಸ್ ಈಗಷ್ಟೇ ಬಿಡುಗಡೆಯಾಗಿದ್ದರೆ, ಟ್ವಿಟರ್‌ನಲ್ಲಿ ಟ್ವಿಟರ್ ಸ್ಪೇಸಸ್ ಕೂಡ ಕೆಲವು ದಿನಗಳಿಂದ ಕಾಣಿಸಿದೆ. ಈ ರೀತಿಯ ಆ್ಯಪ್ ಗಳಾದ ವಾಟ್ಸ್ಆ್ಯಪ್, ಗೂಗಲ್ ಮೀಟ್, ಝೂಮ್ ಮುಂತಾದ ಸಂವಹನ ವ್ಯವಸ್ಥೆಯಲ್ಲಿಯೂ ವಿಡಿಯೊ ಆಫ್ ಮಾಡಿ, ಹಲವರೊಂದಿಗೆ ಹರಟುವ ಅವಕಾಶಗಳು ಮೊದಲು ಲಭ್ಯ ವಿದ್ದವು  ಈಗಲೂ ಇವೆ.

ಸ್ಪಾಟಿಫೈ ಆ್ಯಪ್‌ನಲ್ಲಿ ಗ್ರೀನ್‌ರೂಮ್ ಚಾಟಿಂಗ್ ವ್ಯವಸ್ಥೆಯಿದೆ. ಉಳಿದಂತೆ ಲಿಂಕ್ಡ್ ಇನ್, ಸ್ಲ್ಯಾಕ್, ರೆಡಿಟ್ ಕೂಡ ಈ ವ್ಯವಸ್ಥೆಯನ್ನು ಪರಿಚಯಿಸುವ ಪ್ರಯತ್ನದಲ್ಲಿವೆ.

ಇದರ ಮೂಲಕವಾಗಿ ಚಾಟ್​ ರೂಮ್​ಗಳಲ್ಲಿ ಬಳಕೆದಾರರು ಧ್ವನಿಯ ಮೂಲಕ ಸಂವಹನ ನಡೆಸಲು ಸುಮಾರು 5000 ಜನರು ಏಕಕಾಲದಲ್ಲಿ  ಒಂದು ಗುಂಪಾಗಿ ಚಾಟಿಂಗ್​ಗೆ ಅವಕಾಶ ಇದೆ.

ಇದು ಆಡಿಯೋ- ಓನ್ಲಿ ಆ್ಯಪ್. ನೇರ ಮಾತುಕತೆಗಳನ್ನು ಆಯೋಜಿಸುವುದಕ್ಕೆ ಈ ಪ್ಲಾಟ್​ಫಾರ್ಮ್ ಬಳಸಿಕೊಳ್ಳಬಹುದು. ಮಾತನಾಡುವ ಹಾಗೂ ಕೇಳಿಸಿಕೊಳ್ಳುವ ಮೂಲಕ ಇದರಲ್ಲಿ ಭಾಗವಹಿಸಬಹುದು. ಈ ಆ್ಯಪ್​ನಲ್ಲಿ ನಡೆಯುವ ಸಂಭಾಷಣೆಗಳ ರೆಕಾರ್ಡ್ ಮಾಡುವುದಕ್ಕೆ, ದಾಖಲಿಸುವುದಕ್ಕೆ, ಮತ್ತೊಮ್ಮೆ ಪ್ರಸಾರ ಮಾಡುವುದಕ್ಕೆ ಅವಕಾಶ ಇಲ್ಲ. ​

ಕ್ಲಬ್‌ಹೌಸ್‌ನಲ್ಲಿ ಖಾತೆ ತೆರೆಯಲು, ನಮ್ಮ ಫೋನ್ ನಂಬರನ್ನು ಅದಕ್ಕೆ ಕೊಟ್ಟು, ನಮಗೆ ಬೇಕಾದ ಒಂದು ಹೆಸರಿಟ್ಟುಕೊಂಡು,  ಪ್ರಸಿದ್ಧ ವ್ಯಕ್ತಿಗಳನ್ನು ನಿಮ್ಮ  ಸ್ನೇಹಿತರನ್ನು ಫಾಲೋ ಮಾಡಬಹುದು. ಈ ಆ್ಯಪ್ ಆಂಡ್ರಾಯ್ಡ್  ಮೊಬೈಲ್ ಗಳಲ್ಲಿ  ಸುಮಾರು 2 ಮಿಲಿಯನ್ ಗಿಂತಲೂ ಹೆಚ್ಚು ಡೌನ್ ಲೋಡ್ ಆಗಿದೆ. ಸ್ಟಾರ್ ನಟ-ನಟಿಯರು, ಉದ್ಯಮಿಗಳು, ವಿದ್ಯಾರ್ಥಿಗಳು ಕೂಡ ಈ ಆ್ಯಪ್ ಬಳಸುತ್ತಿದ್ದಾರೆ.

ಈ ಆ್ಯಪಿನಲ್ಲಿ ತಮ್ಮದೇ ಚಾಟಿಂಗ್ ರೂಮ್ ಕ್ರಿಯೇಟ್ ಮಾಡಿಕೊಳ್ಳುವ ಅವಕಾಶವಿದ್ದು, ಸಮಾನ ಮನಸ್ಕರು ತಮ್ಮ ಆಸಕ್ತಿಗೆ ಅನುಗುಣವಾಗಿ ಚಾಟಿಂಗ್ ರೂಮ್ ಕ್ರಿಯೇಟ್ ಮಾಡಿಕೊಳ್ಳುತ್ತಾರೆ. ಇಲ್ಲಿ ಕೇವಲ ಹರಟುವುದಕ್ಕೂ ರೂಂ ಕ್ರಿಯೇಟ್ ಮಾಡಿಕೊಳ್ಳುವವರಿದ್ದಾರೆ. ಹಾಗಾಗಿ ಹೆಚ್ಚು ಹೊಸ ವಿಚಾರಗಳನ್ನು ತಿಳಿಸುವ ರೂಮಿಗೆ ಸೇರಿಕೊಳ್ಳುವುದು ಸೂಕ್ತವೆನಿಸುತ್ತದೆ.

ಕ್ಲಬ್​ಹೌಸ್​ನಿಂದ ಕ್ಲಬ್​ಗಳು ಮತ್ತು ಸ್ಪೀಕರ್​ಗಳು ನೇರವಾಗಿ ತಮ್ಮ ರೂಮ್​ಗಳಿಂದ ಫಾಲೋ ಮಾಡಲು ಸುಲಭವಾಗುತ್ತದೆ. ಕೆಲವು ನಿಮಿಷಗಳ ಕಾಲ ರೂಮ್​ನಲ್ಲಿ ಇದ್ದ ಮೇಲೆ ಕ್ಲಬ್ ಅಥವಾ ಸ್ಪೀಕರ್​ಗಳನ್ನು ರೂಮ್​ನಲ್ಲಿ ಫಾಲೋ ಮಾಡುವುದಕ್ಕೆ ನೆನಪಿಸಲಾಗುತ್ತದೆ. ಸ್ಕ್ರೀನ್​ನ ಕೆಳಭಾಗದಲ್ಲಿ ಇದು ಕಾಣಿಸುತ್ತದೆ. “Follow” ಎಂಬುದರ ಮೇಲೆ ಒತ್ತಿದರೆ ಭವಿಷ್ಯದ ರೂಮ್​ಗಳನ್ನು ನೋಡಬಹುದು ಮತ್ತು ಅವರು ಯಾವಾಗೆಲ್ಲ ಲೈವ್ ಹೋಗುತ್ತಾರೆ ಆಗ ನೋಟಿಫಿಕೇಷನ್ ಬರುತ್ತದೆ.

ಈಗಂತೂ ಒಂದಕ್ಕೂ ಹೆಚ್ಚಿನ ಕಾರ್ಯಕ್ರಮ ಇದ್ದಲ್ಲಿ ಸುಲಭವಾಗಿ ಕಂಡುಹಿಡಿಯಬಹುದು. ಕ್ಲಬ್ ಪೇಜ್​ಗೆ ಹೋಗಿ, ಎಲ್ಲ ಮುಂಬರುವ ಕಾರ್ಯಕ್ರಮಗಳನ್ನು ನೋಡಬಹುದು. ಒಂದಕ್ಕಿಂತ ಹೆಚ್ಚಿದ್ದಲ್ಲಿ ಸ್ಕ್ರಾಲ್ ಮಾಡಬಹುದು. ಒಂದು ವೇಳೆ ಕಾರ್ಯಕ್ರಮ ಆಸಕ್ತಿಕರವಾಗಿ ಇದ್ದಲ್ಲಿ ಗಂಟೆಯ ಗುರುತಿನ ಮೇಲೆ ಒತ್ತಿದರೆ, ಆ ಕಾರ್ಯಕ್ರಮ ಶುರುವಾಗುತ್ತಿದ್ದಂತೆಯೇ ಆ ಬಗ್ಗೆ ಮಾಹಿತಿ ಬರುತ್ತದೆ.

ಕ್ಲಬ್​ಹೌಸ್ ಪ್ರೊಫೈಲ್​ಗೆ ಟ್ವಿಟ್ಟರ್ ಮತ್ತು ಇನ್​ಸ್ಟಾಗ್ರಾಮ್ ಖಾತೆ ಸೇರ್ಪಡೆ ಮಾಡುವುದಕ್ಕೆ ಆ್ಯಪ್​ನಲ್ಲಿ ಇರುವಂಥ “Add Twitter” ಅಥವಾ “Add Instagram” ಆಯ್ಕೆಯ ಮೇಲೆ ಒತ್ತಬೇಕು. ಕಂಪೆನಿ ಹೇಳಿರುವಂತೆ, ನಾವು ತುಂಬ ಸ್ಪಷ್ಟವಾಗಿ ಹಾಗೂ ಗಟ್ಟಿಯಾಗಿ ಹೇಳುತ್ತಿದ್ದೇವೆ. ಇದು ಬಹಳ ಬೇಡಿಕೆಯಲ್ಲಿನ ಆಂಡ್ರಾಯಿಡ್ ಫೀಚರ್ ಹಾಗೂ ಅದೀಗ ಇಲ್ಲಿದೆ. ಸೋಷಿಯಲ್ ಖಾತೆಗಳನ್ನು ಪ್ರೊಫೈಲ್​ಗಳನ್ನು ಸೇರ್ಪಡೆ ಮಾಡುವುದರಿಂದ ಕ್ಲಬ್​ಹೌಸ್​ನಲ್ಲಿ ಜನರು ನಿಮ್ಮನ್ನು ತಿಳಿಯಲು ಹೆಚ್ಚು ಅನುಕೂಲ ಆಗುತ್ತದೆ. ನಿಮ್ಮ ಇತರ ಅಕೌಂಟ್​ಗಳನ್ನು ಅನುಸರಿಸಲು ಸಹಾಯ ಆಗುತ್ತದೆ . ಹಾಗೇ ಸುತ್ತಾಡುತ್ತಾ ಬಂದರೆ, ಸಾಕಷ್ಟು ಕೊಠಡಿ (ರೂಮ್)ಗಳು ನಮಗೆ ಸಿಗುತ್ತವೆ.

ಸಂವಾದ, ಅಲದಮರ,  ಹರಟೆಕಟ್ಟೆ, ಯುವ ಸಮುದಾಯ ಗ್ರೂಪ್ ಗಳು, ಆಧ್ಯಾತ್ಮ, ದೇವರು ದೆವ್ವ, ಬದುಕು, ಆಪ್ತ ಸಲಹೆ ನೀಡುವರು, ಆರೋಗ್ಯದ ಬಗ್ಗೆ ಚರ್ಚೆ,  ಅರಳಿಕಟ್ಟೆ, ಪ್ರೇಮಿಗಳ ತಾಣ, ನಾಟಕದ ಬಗ್ಗೆ ಚರ್ಚೆ, ಬೆಂಗಳೂರು ಕ್ಲಬ್, ನೈಟ್ ಕ್ಲಬ್, ಕ್ರಿಪ್ಟೋಕರೆನ್ಸಿ ಕ್ಲಬ್, ಕಾಡುಹರಟೆ, ಪ್ರವಾಸ, ,ಕವನ ಕಾವ್ಯ ಗೀತೆ,ಕಾದಂಬರಿ ಸಂಗೀತ, ನಾಟಕ,  ಉದ್ಯಮಿಗಳ ಬಳಗ, ಸಂಡೇ ಫನ್‌ಡೇ, ಇಂಗ್ಲಿಷ್ ಕಲಿಕೆ, ಸ್ಟಾರ್ಟಪ್ ಗೈಡ್, ತುಳುನಾಡು ರಾಜ್ಯ – ಬಲಪಂಥ,ಎಡಪಂಥ, ನಡುಪಂಥ, ದೇಶಭಿಮಾನ ಭಾಷಾಭಿಮಾನ, ಮುಂತಾದ  ವಿಭಿನ್ನ ಹೆಸರಿನ ರೂಮ್‌ಗಳು ಕಾಣಿಸುತ್ತವೆ.

ಜೊತೆಗೆ ರಾಜ್ಯದ ಪ್ರಮುಖ ದಿನ ಪತ್ರಿಕೆಗಳು ತಮ್ಮದೇ ಓದುಗರ ಜೊತೆ ಆತ್ಮೀಯತೆ ವಿಷಯ ವಿಚಾರ ಚರ್ಚಿಸಲು ಕ್ಲಬ್ ಗಳನ್ನು ರಚಿಸಿಕೊಂಡಿದ್ದಾರೆ. ಪತ್ರಿಕೆಯ ಕ್ಲಬ್ ಹೆಚ್ಚು ಜನಪ್ರಿಯವಾಗಿದೆ ಕಾರಣ ಪ್ರತಿನಿತ್ಯ ನಾಡಿನ  ಪ್ರಸಿದ್ದ ರಾಜಕಾರಣಿಗಳು, ಸಿನಿಮಾ, ನಾಟಕ, ಉದ್ಯಮ ಸಮಾಜ ಸೇವಕರು ವಿವಿಧ ಕ್ಷೇತ್ರದ ತಜ್ಞರು ಮುಂತಾದ  ವಿಶೇಷ ಗಣ್ಯ ಅತಿಥಿಗಳನ್ನು ಕರೆಸಿ ಕೇಳುಗರ ಜೊತೆಗೆ ಸಂವಾದ ನಡೆಸುವ ಕಾರ್ಯ ಮಾಡುತ್ತಿದ್ದಾರೆ.

ನಾವು ಸದಸ್ಯರೇ ಅಲ್ಲದ ಕ್ಲಬ್‌ನೊಳಗೂ ತೂರಿಕೊಂಡುಬಿಡಬಹುದು, ಅವರೇನು ಮಾತಾಡುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳಬಹುದು, ನಾವು ಕೂಡ ಸಮಾನ ಮನಸ್ಕರು ಜೊತೆಯಲ್ಲಿ, ತಮಗೆ ಬೇಕಾದಂತೆ ಹೆಸರಿಟ್ಟುಕೊಂಡು ರೂಮ್  create  ಮಾಡಬಹುದು.

ಕ್ಲಬ್ ಹೌಸನ್ನು ಒಳಿತಿಗಾಗಿಯೂ ಬಳಸಿಕೊಳ್ಳಬಹುದು. ತರಗತಿಯಲ್ಲಿ ಪಾಠವನ್ನು ಗಮನವಿಟ್ಟು ಕೇಳಿದರೆ ಅಥವಾ ಹಿರಿಯರು ಹೇಳುವುದನ್ನು ಏಕಾಗ್ರತೆಯಿಂದ ಆಲಿಸಿದರೆ ನಮಗೆ ಆ ವಿಷಯ ಎಷ್ಟು ಬೇಗ ಮನದಟ್ಟಾಗಿ, ಶಾಶ್ವತವಾಗಿ ನೆನಪುಳಿಯುತ್ತದೆಯಲ್ಲವೇ? ಅದೇ ರೀತಿ, ಯಾವುದೇ ಚಿತ್ರ ಅಥವಾ ವಿಡಿಯೊಗಳ ಡಿಸ್ಟ್ರಾಕ್ಷನ್ ಇಲ್ಲದೆ ಗಮನವಿಟ್ಟು ಕೇಳಿದರೆ, ಜ್ಞಾನ ವೃದ್ಧಿಯಾಗಲು, ವಿದ್ಯಾರ್ಥಿಗಳಿಗೆ ಏಕಾಗ್ರತೆ ಸುಧಾರಿಸಲು ಒಳ್ಳೆಯ ಟೂಲ್ ಆಗಿಯೂ ಇದನ್ನು ಉಪಯೋಗಿಸಬಹುದು.

 ಹರಟೆ , ಜ್ಞಾನವನ್ನು ಹಂಚಿಕೊಳ್ಳುವುದು, ಬೋಧನೆ, ದುರ್ಬೋಧನೆ ಮಾಡಲೂ ಬಹುದು, ಒಳಿತನ್ನು ಬೋಧಿಸಬಹುದು, ಪಾಠ ಮಾಡಬಹುದು ಯಕ್ಷಗಾನ, ತಾಳಮದ್ದಳೆ, ಬಯಲಾಟ ದೊಡ್ಡಾಟ,ಸಣ್ಣಾಟ,  ಧಾರ್ಮಿಕ ಪ್ರವಚನ, ಅಂತ್ಯಾಕ್ಷರಿ ಆಟ, ಭಾಷಣ ಸ್ಫರ್ಧೆ ಏರ್ಪಡಿಸಬಹುದು.

ಆಗಷ್ಟೇ ಬಿಡುಗಡೆಯಾದ ಚಲನಚಿತ್ರ, ಹೊಸ ಉತ್ಪನ್ನದ ಬಗ್ಗೆ ಚರ್ಚಿಸಿವುದು, ಪರಿಸರ, ಕಾಡು, ಬೆಳೆ, ರೈತ ಮುಂತಾದವುದರ ಕುರಿತ   ಹೆಚ್ಚು ಜ್ಞಾನ ಪಡೆಯಬಹುದು.

ಅಷ್ಟೇ ಅಲ್ಲ, ಈ ಕೋವಿಡ್ ಸಂದರ್ಭದಲ್ಲಿ ನಮ್ಮ ದೇಶ,ರಾಜ್ಯದಆರೋಗ್ಯ ಆರ್ಥಿಕತೆ, ಸಾಮಾಜಿಕ ಪರಿಹಾರ ಗಳ ಬಗ್ಗೆ, ಚರ್ಚಿಸಬಹುದು   ರಾಜಕೀಯ ಮುಖಂಡರನ್ನು ನಿರ್ದಯವಾಗಿ ನಿಂದಿಸಬಹುದು ಅಂತ ತಿಳಿದುಕೊಂಡವರೂ ತಮ್ಮದೇ ಕ್ಲಬ್ ಮಾಡಿಕೊಂಡು ಇಲ್ಲಿ ಸಮಯ ಕಳೆಯುತ್ತಾರೆ. ಎಷ್ಟೇ ಆಕ್ರೋಶ ಹೊರಗೆಡಹಿದರೂ, ಎಷ್ಟೇ ಪ್ರೀತಿಯಿಂದ ಮಾತನಾಡಿದರೂ – ಇಲ್ಲಿ ಮುಖಭಾವವನ್ನು ನೋಡಲಾಗುವುದಿಲ್ಲವಲ್ಲ, ಅಷ್ಟರ ಮಟ್ಟಿಗೆ ಸೇಫ್! ಯಾಕೆಂದರೆ ಧ್ವನಿ ಮಾತ್ರ ಇರುತ್ತದೆ. ಈ ಕ್ಲಬ್‌ನಲ್ಲಿ ಸಮಯ ಮಿತಿ ಇಲ್ಲ, ಸದಸ್ಯರ ಮಿತಿಯೂ ಇಲ್ಲ. ಆಕಾಶವಾಣಿಯಲ್ಲಿ ತಾಳಮದ್ದಳೆ, ಸಂಗೀತ ಮುಂತಾದವನ್ನು ಕೇಳಿದಂತೆಯೇ ಇಲ್ಲಿ ಧ್ವನಿ ಸ್ಪಷ್ಟ, ಆದರೆ ಯಾರೆಂಬುದು ಕಾಣಿಸುವುದಿಲ್ಲ. ಅಷ್ಟೆ.

ನಮ್ಮ ಇಷ್ಟಗಳನ್ನು ಕ್ಲಬ್‌ಹೌಸ್‌ಗೆ ತಿಳಿಸಿರುತ್ತೇವೆ, ಅದರ ಅಧಾರದಲ್ಲಿ ಈ ರೀತಿಯ ಚರ್ಚಾ ಕೊಠಡಿಗಳು ನಮಗೆ ಗೋಚರಿಸುತ್ತವೆ.

40ವರ್ಷ ಗಳ ಹಿಂದೆ ನಾವು ಶ್ರವಣರಾಗಿದ್ದವು ರೇಡಿಯೋ ನಮ್ಮ ಮನರಂಜನೆಯ ಸಾಧನವಾಗಿತ್ತು ಅದು ಏಕ ಮುಖವಾಗಿ ಕೇವಲ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಾ ಇತ್ತು ಅದರೆ ಇಂದು ಕೇಳಲು ನೋಡಲು ಸಮಯ ಕಳೆಯಲು ಅನೇಕ ಮನೋರಂಜನೆಯ ಹಲವು ದಾರಿಗಳಿವೆ.

ಹೇಳುವವರು ಮಾತ್ರ ಜಾಸ್ತಿ ಆಗಿ,  ಕೇಳುವುದನ್ನೇ  ಮರೆತಿರುವ ದಿನಮಾನದಲ್ಲಿ ಮತ್ತೆ  ನಾವು ಮರೆತಿರುವ ಶ್ರವಣ ಸುಖವನ್ನು ಈ ಕ್ಲಬ್‌ಹೌಸ್ ನಮಗೆ ಒದಗಿಸುತ್ತದೆ.

ಒಂದು ಆ್ಯಪ್ ಅಂದ ಮೇಲೆ ಅದರಲ್ಲಿ ಒಳಿತು ಕೆಡಕು ಎರಡು ಇರುತ್ತವೆ. ಅದು ನಾವು ಹೇಗೆ ಆ್ಯಪ್ ಬಳಸುತ್ತವೆ ಎನ್ನುವುದರ ಮೇಲಿರುತ್ತದೆ.

ಒಳ್ಳೆಯದನ್ನಷ್ಟೇ  ಕೇಳಿಸಿಕೊಳ್ಳುತ್ತಾ, ಜೊತೆಗೆ ಮನುಷ್ಯ ಸಂಬಂಧಗಳನ್ನು ಮರೆಯದೇ ಮಾನವೀಯತೆಯ ಮೌಲ್ಯವನ್ನು ಎತ್ತಿ ಹಿಡಿಯೋಣ.