ಬಂದ್ ಮಾಡಿ ಜನತೆಗೆ ತೊಂದರೆ ಕೊಡಬೇಡಿ -ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜನರು ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತ ಬಂದ್ ಮಾಡಿ ತೊಂದರೆ ಕೊಡಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸೋಮವಾರ ಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಭಾರತ ಬಂದ್ ಮಾಡಿ ಜನರಿಗೆ ತೊಂದರೆ ನೀಡುವ ಕೆಲಸ ಮಾಡಬಾರದು. ಜನರು ಈಗಷ್ಟೆ ಕೊರೊನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಭಾರತ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ನಿಮ್ಮ ವೈಚಾರಿಕತೆಯ ಹಿನ್ನೆಲೆಯಲ್ಲಿ ಹೋರಾಟ ಮಾಡಿ ಎಂದು ಸಿಎಂ ಸಲಹೆ ನೀಡಿದರು.

ಭಾರತ ಬಂದ್ ಗೆ ಕಾಂಗ್ರೆಸ್ ಬೆಂಬಲ ಕುರಿತು ಪ್ರತಿಕ್ರಿಯಿಸಿ, ನಾನು ಅಧಿವೇಶನದಲ್ಲಿಯೂ ಹೇಳಿದ್ದೇನೆ. ಈಗಲೂ ಹೇಳುತ್ತಿದ್ದೇನೆ. ಕಾಂಗ್ರೆಸ್ ವಿಪಕ್ಷವಾಗಿ ಭಾರತ ಬಂದ್ ಗೆ ಬೆಂಬಲ ನೀಡುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷದ ನಾಯಕರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಗುಲಾಮಗಿರಿ ಪಾರ್ಟಿಯಾಗಿದೆ. ಅಲ್ಲದೇ ಬಿಜೆಪಿ ಆಡಳಿತ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. ಅವರು ಈ ಹಿಂದೆ ನಿಭಾಯಿಸಿದ ಸ್ಥಾನಕ್ಕೂ ಈಗ ನಡೆದುಕೊಳ್ಳುತ್ತುವುದಕ್ಕೂ ತಕ್ಕದಲ್ಲ ಎಂದು ಸಿಎಂ ಹೇಳಿದರು.