ಬೆಳಗಾವಿ: ಮುಂದಿನ ವಾರ ದೆಹಲಿಗೆ ತೆರಳಿ ಹೆಚ್ವಿನ ಪರಿಹಾರ ಬಿಡುಗಡೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಅತಿವೃಷ್ಟಿಗೆ ಸಂಬಂಧಿಸಿದಂತೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಿಎಂ ಅವರು ಮಾತನಾಡಿದರು.
ಶೀಘ್ರ ಎಲ್ಲ ಶಾಸಕರ ಸಭೆ ಕರೆದು ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಸಮರ್ಪಕ ಪರಿಹಾರ ನೀಡಲು ಯೋಜನೆ ರೂಪಿಸಲಾಗುವುದು. ನಂತರ ಎಲ್ಲ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು ಎಂದು ಸಿಎಂ ಹೇಳಿದರು.
ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಕೋವಿಡ್-19 ಇರುವುದರಿಂದ ಎನ್.ಡಿ.ಆರ್.ಎಫ್. ಅನುದಾನದಡಿ ತುರ್ತು ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ಜಿಲ್ಲೆಯಲ್ಲಿ ಆಗಿರುವ ಹಾನಿ ಮತ್ತು ಅಗತ್ಯವಿರುವ ಅನುದಾನದ ಮಾಹಿತಿಯನ್ನು ತಕ್ಷಣ ಸರ್ಕಾರಕ್ಕೆ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು.
ಪ್ರವಾಹ ನಿರ್ವಹಣೆ ಮತ್ತಿತರ ತುರ್ತು ಕೆಲಸಕ್ಕೆ ಬೆಳಗಾವಿ ಜಿಲ್ಲೆಯಲ್ಲಿ 412 ಕೋಟಿ ರೂಪಾಯಿ ಅನುದಾನ ಲಭ್ಯವಿದೆ.
ಹೆಚ್ಚಿನ ಹಣ ಬೇಕಾದರೆ ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪನವರು ತಿಳಿಸಿದರು.
ಜಿಲ್ಲೆಯಲ್ಲಿ ಮನೆ ನಿರ್ಮಾಣಕ್ಕೆ 174 ಕೋಟಿ ರೂಪಾಯಿ ಇದೆ. ಇದಲ್ಲದೇ ಉಳಿದಿರುವ ಅನುದಾನದಲ್ಲಿ ರಸ್ತೆ ದುರಸ್ತಿ ಮತ್ತಿತರ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಿದರು.
ಇದೇ ರೀತಿ ಇತರೆ ಜಿಲ್ಲೆಗಳಲ್ಲಿ ಸಾಕಷ್ಟು ಹಣ ಲಭ್ಯವಿದೆ. ಮನೆ ಕಳೆದುಕೊಂಡಿರುವ ಬೆಳಗಾವಿಯ 44156 ಫಲಾನುಭವಿಗಳಿಗೆ 488 ಕೋಟಿ ಪರಿಹಾರ ಬಿಡುಗಡೆಯಾಗಿದೆ ಎಂದರು.
ಬೆಳಗಾವಿ-ಧಾರವಾಡ ಸಮಸ್ಯೆಗಳನ್ನು ಗಮನಕ್ಕೆ ಬಂದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಆಧರಿಸಿ ಮನೆ ಹಾಗೂ ಬೆಳೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.