ಮಲಪ್ರಭ ನದಿ ಒತ್ತುವರಿ ತೆರವಿಗೆ ಹಾಗೂ ಆಲಮಟ್ಟಿ ಜಲಾಶಯ ಎತ್ತರಕ್ಕೆ ಕ್ರಮ -ಸಿಎಂ

ಬಾಗಲಕೋಟೆ: ಮಲಪ್ರಭ ನದಿ ಪಾತ್ರದಲ್ಲಿ ಆದ ಒತ್ತುವರಿಯಿಂದ ಪದೇ ಪದೇ ಪ್ರವಾಹ ಉಂಟಾಗುತ್ತಿದ್ದು, ನದಿಯ ಮೂಲ ಸ್ವರೂಪ ಕಾಯ್ದುಕೊಳ್ಳಲು ಒತ್ತುವರಿ ತೆರವಿಗೆ ಸರಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಆಲಮಟ್ಟಿ ಕೃಷ್ಣೆಯ ಜಲದಿಗೆ ಬಾಗಿನ ಅರ್ಪಿಸಿ ನಂತರ ಅತಿವೃಷ್ಠಿಗೆ ಸಂಬಂಧಿಸಿದಂತೆ ಕೆ.ಜಿ.ಎನ್.ಎಲ್ ಸಭಾಭವನದಲ್ಲಿ ನಡೆದ ವಿಜಯಪುರ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಸಚಿವರು, ಶಾಸಕರು, ಸಂಸತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಲಪ್ರಭ ನದಿಯ ಮೂಲ ಸ್ವರೂಪ 135 ಮೀಟರ್ ಇದ್ದು, ಈಗ 10 ಮೀಟರ್ ನಷ್ಟಾಗಿದೆ. ಇದರಿಂದ ಕೇವಲ 2 ಸಾವಿರ ಕ್ಯೂಸೆಕ್ಸ್ ನೀರು ಮಾತ್ರ ಹರಿದು ಹೋಗುತ್ತಿರುವುದರಿಂದ ಪ್ರವಾಹ ಉಂಟಾಗುತ್ತಿದೆ. ಮೂಲ ಸ್ವರೂಪದಲ್ಲಿ ತೆರವಿಗೆ ಕ್ರಮಕೈಗೊಳ್ಳಲು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಾಗ ಸಿಎಂ ಇದಕ್ಕೆ ಒಪ್ಪಿಗೆ ಸೂಚಿಸಿದರು.
ಈ ಕಾರ್ಯ ತುರ್ತಾಗಿ ನಡೆದಲ್ಲಿ 10-15 ವರ್ಷಗಳ ಕಾಲ ಪ್ರವಾಹದಿಂದ ಮುಕ್ತವಾಗಬಹುದಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ಉತ್ತರ ಕರ್ನಾಟಕದ ಮಹತ್ವದ ವಿಷಯವಾದ ಆಲಮಟ್ಟಿ ಜಲಾಶಯವನ್ನು 254.256 ಮೀಟರ್ ಎತ್ತರಿಸಲು ಕ್ರಮಕೈಗೊಂಡು ಈ ಭಾಗದ ಜನರಿಗೆ ನೀರಿನ ಬಳಕೆಗೆ ಅನುಕೂಲ ಮಾಡಿಕೊಡಲಾಗುವುದೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.
ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಿಂದ ಕಲಬುರ್ಗಿ, ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಕೃಷ್ಣಾ ಮೇಲ್ದಂಡ ಯೋಜನೆ ಇದಾಗಿದ್ದು, ಈ ಜಲಾಶಯದ ಹಿನ್ನೀರಿನಿಂದ ಬರುವ ಏತ ನೀರಾವರಿ ಯೋಜನೆಯಡಿ ನಿರಾವರಿ ಮತ್ತು ಕೆರ ತುಂಬಿಸುವ ಯೋಜನೆ 900 ಕ್ಯೂಸೆಕ್ಸ್ ನೀರು ಬಳಸಬೇಕಾಗುತ್ತದೆ. ಕೃಷ್ಣಾ ನ್ಯಾಯಾಧಿಕರಣ ತೀರ್ಪಿನಿ ಅನ್ವಯ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದಿಂದ ಒಟ್ಟು 130 ಟಿ.ಎಂಸಿ ನೀರು ಹಂಚಿಕೆಗೆ ಆಲಮಟ್ಟಿ ಜಲಾಶಯದ ನೀರಿನ ಗರಿಷ್ಠ ಮಟ್ಟ ಹೆಚ್ಚಿಸುವ ಅಗತ್ಯವಿದೆ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದರು.
ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಸಾಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕೃಷ್ಣೆಯ ಜಲದಿಗೆ ಬಾಗಿನ ಅರ್ಪಿಸಿದರು.