ಹಿಜಬ್ ವಿಚಾರದಲ್ಲಿ ವಿವಾದ ಸೃಷ್ಟಿಸಿದರೆ ಕಠಿಣ ಕ್ರಮ-ಬೊಮ್ಮಾಯಿ ಎಚ್ಚರಿಕೆ

ಹುಬ್ಬಳ್ಳಿ:ಹಿಜಬ್ ವಿಚಾರದಲ್ಲಿ ವಿವಾದ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುವ, ಸುಳ್ಳು ಸಂದೇಶಗಳನ್ನು ಹರಡುವವರ ಮೇಲೆ ನಮ್ಮ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದರು.

ಯಾರೇ ಸುಳ್ಳು ಸುದ್ದಿ ಹರಡಿದರೂ ಅಂತವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ  ಎಚ್ಚರಿಕೆ ನೀಡಿದರು.

ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ಹಿಜಾಬ್ ವಿವಾದದಲ್ಲಿ ಅನಗತ್ಯ ಗೊಂದಲವನ್ನು ಯಾರೂ ಸೃಷ್ಟಿಸಬಾರದು ಎಂದು ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಾಗಲಿ, ಇನ್ನಿತರ ವೇದಿಕೆಗಳಲ್ಲಾಗಲಿ ಪ್ರಚೋದನೆ ನೀಡುವ ಹಾಗೂ ಸಂದೇಶಗಳನ್ನು ರವಾನಿಸುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ಹೇಳಿದರು.

ಸಮಾಜದಲ್ಲಿ ಅಶಾಂತಿ ಉಂಟು ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.

ಹಿಜಾಬ್ ವಿವಾದಕ್ಕೆ ಸಂಬಂಸಿದಂತೆ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದೆ. ಹೈಕೋರ್ಟ್ ಆದೇಶಕ್ಕೆ ನಾವು ಬದ್ದರಾಗಿದ್ದೇವೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದು ಸಿಎಂ ಹೇಳಿದರು.

ಕಾಲೇಜುಗಳನ್ನು ಪ್ರಾರಂಭಿಸುವ ಕುರಿತು ಪ್ರಸ್ತುತ ಪರಿಸ್ಥಿತಿಯನ್ನು ಅವಲೋಕಿಸಿ ವರದಿ ನೀಡುವಂತೆ ಶಿಕ್ಷಣ ಇಲಾಖೆ ಸಚಿವರಿಗೆ ಸೂಚಿಸಿದ್ದೇನೆ. ಅವರು ಚರ್ಚೆ ನಡೆಸಿ ವರದಿ ನೀಡಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು  ಬೊಮ್ಮಾಯಿ ಹೇಳಿದರು.