ಬೆಳಗಾವಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಶತಸಿದ್ಧ. ತಂದೇ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ವಿಶ್ವಹಿಂದೂಪರಿಷತ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿರುವವರೇ ಈ ಹಿಂದೆ ಕಾಯ್ದೆ ಜಾರಿಗೆ ಮುಂದಾಗಿದ್ದರು ಎಂದು ಪ್ರತಿಪಕ್ಷ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.
2016ರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿದ್ದ ಕಾಂಗ್ರೆಸ್ ರಾಜಕೀಯ ಕಾರಣದಿಂದ ಕಾಯ್ದೆ ಜಾರಿಗೆ ತಂದಿರಲಿಲ್ಲ. ಆದರೆ,ಈಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುವ ಮೂಲಕ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಸವಣ್ಣನವರ ಕಾಲದಿಂದ ಹಿಡಿದು ಶಂಕರಾಚಾರ್ಯರವರೆಗೂ ಭಕ್ತಿಯ ಚಳವಳಿ ಇದೆ. ಪಾಶ್ಚಿಮಾತ್ಯ ದೇಶಗಳಲ್ಲಿ ವೈಚಾರಿಕತೆ ಬೇರೆ, ಜೀವನ ಶೈಲಿಯೂ ಬೇರೆ. ನಾವು ಮಾನವೀಯತೆಯನ್ನು ನಮ್ಮ ಧರ್ಮದಲ್ಲಿ ಪರಿಪಾಲನೆ ಮಾಡುತ್ತೇವೆ. ಬೌದ್ಧ ಧರ್ಮದಿಂದ ಸ್ವಲ್ಪ ಸಂಕಷ್ಟಕ್ಕೀಡಾಗಿದ್ದೆವು. ರಾಜ್ಯದಲ್ಲಿ ಗುಪ್ತವಾಗಿ ಮತಾಂತರ ನಡೆಯುತ್ತಿದೆ. ಈ ರಹಸ್ಯ ಮತಾಂತರಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶದಿಂದಲೇ ನಮ್ಮ ಸರ್ಕಾರ ಕಾಯ್ದೆ ಜಾರಿಗೆ ತರಲು ತೀರ್ಮಾನಿಸಿದೆ ಎಂದು ಹೇಳಿದರು.
ಯಾವ ಧರ್ಮದಲ್ಲಿ ಹುಟ್ಟಿ ಆ ಧರ್ಮದ ಸಂಸ್ಕೃತಿಯನ್ನು ಅನುಸರಿಸುತ್ತಾರೋ ಅವರನ್ನು ಮತಾಂತರದಿಂದ ಬದಲಾವಣೆ ಮಾಡುವುದು ಅನ್ಯಾಯ. ಯಾವುದೇ ಕಾರಣಕ್ಕೂ ನಮ್ಮ ಅಸ್ಮಿತೆ ಬಿಡಬಾರದು. ನಮ್ಮಲ್ಲಿರುವ ಬಡತನ, ಅಸಹಾಯಕತೆಯ ದುರಪಯೋಗ ಮಾಡುವ ಕೆಲಸಗಳು ಆಗುತ್ತಿವೆ ಎಂದು ಸಿಎಂ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉತ್ತರ ಕರ್ನಾಟಕ ಭಾಗದ ಬಹುತೇಕ ಸ್ವಾಮಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಮನವಿ ಮಾಡಿದರು.