ಬೆಂಗಳೂರು: ಕಾಂಗ್ರೆಸ್ ನವರು ಮಾಡುತ್ತಿರುವ ಮೇಕೆದಾಟು ಪಾದಯಾತ್ರೆ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ಈ ಪಾದಯಾತ್ರೆ ಬುಧವಾರ 4ನೇ ದಿನಕ್ಕೆ ಕಾಲಿಡುತ್ತಿದ್ದಂತೆ ಪಾದಯಾತ್ರೆ ವಿರುದ್ಧದ ಕೇಸು ಹೈಕೋರ್ಟ್ ಅಂಗಳ ತಲುಪಿದೆ.
ಈ ಕುರಿತು ತುರ್ತು ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯದಲ್ಲಿ ಕೋವಿಡ್ ಸೋಂಕು ದಿನೇದಿನೇ ಹೆಚ್ಚಾಗುತ್ತಿರುವುದರ ಮಧ್ಯೆ ಪಾದಯಾತ್ರೆ ನಡೆಸುವ ಅಗತ್ಯವೇನಿದೆ ಎಂದು ತಪರಾಕಿ ಹಾಕಿದೆ.
ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಾಮನಗರ ಜಿಲ್ಲಾಡಳಿತ, ಬಿಬಿಎಂಪಿ ಹಾಗೂ ಕೆಪಿಸಿಸಿಗೆ ಕೋರ್ಟ್ ನೋಟಿಸ್ ನೀಡಿದೆ.
ಪಾದಯಾತ್ರೆ ವಿರುದ್ಧ ಸಾಮಾಜಿಕ ಕಾರ್ಯಕರ್ತ ನಾಗೇಂದ್ರ ಪ್ರಸಾದ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಕೊರೋನಾ ಕೇಸ್ ಹೆಚ್ಚುತ್ತಿರುವಾಗ ಪಾದಯಾತ್ರೆ ಬೇಕಿತ್ತಾ ಎಂದು ಅವರು ಅರ್ಜಿಯಲ್ಲಿ ಪ್ರಶ್ನಿಸಿದ್ದರು.
ಪಾದಯಾತ್ರೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ, ಜನವರಿ 14 ರಂದು ಉತ್ತರ ಕೊಡುವಂತೆ ಎ ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮೂರನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ಆದರೆ ಕಾಂಗ್ರೆಸ್ ನಾಯಕರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಬೇಕು ಎಂದು ಹೈಕೋರ್ಟ್ ಗೆ ವಕೀಲ ಶ್ರೀಧರ್ ಪ್ರಭು ಎಂಬುವವರು ಕೂಡ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.
ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪಕ್ಷಕ್ಕೆ ಪಾದಯಾತ್ರೆ ನಡೆಸಲು ಅನುಮತಿ ನೀಡಿಲ್ಲ ಎಂದಾದ ಮೇಲೆ ಪಾದಯಾತ್ರೆ ತಡೆಯಲು ಹಿಂಜರಿಕೆ ಏಕೆ. ಸರ್ಕಾರ ಅಷ್ಟೊಂದು ಅಸಮರ್ಥವಾಗಿದೆಯೆ, ನ್ಯಾಯಾಲಯ ನೆರವಿಗೆ ಬರಬೇಕು ಎಂದು ಸರ್ಕಾರ ನಿರೀಕ್ಷಿಸುತ್ತಿದೆಯಾ? ಎಂದು ಹೈಕೋರ್ಟ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಈ ಅಪಾಯಕಾರಿ ಸಂದರ್ಭದಲ್ಲಿ ಜನ ಸೇರುವ ರ್ಯಾಲಿ, ಧರಣಿ, ಪ್ರದರ್ಶನ, ಮೆರವಣಿಗೆಗಳಿಗೆ ನಿರ್ಬಂಧ ಹೇರಿದ್ದರೂ, ಅವುಗಳಿಗೆ ಅವಕಾಶ ನೀಡುತ್ತಿರುವುದು ಏಕೆ, ಕಾಂಗ್ರೆಸ್ ಪಕ್ಷ ಪಾದಯಾತ್ರೆ ಹೇಗೆ ಮುಂದುವರಿಸಿದೆ, ಅದನ್ನು ತಡೆಯಲು ಕ್ರಮ ಕೈಗೊಂಡಿಲ್ಲವೇಕೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಬುಧವಾರ ತುರ್ತು ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠ, ಕೋವಿಡ್ ಹೆಚ್ಚುತ್ತಿರುವಾಗ ನೀವು ಹೇಗೆ ಪಾದಯಾತ್ರೆ ನಡೆಸುತ್ತೀರಿ, ಪಾದಯಾತ್ರೆ ನಡೆಸಲು ಸರ್ಕಾರದ ಅನುಮತಿ ತೆಗೆದುಕೊಂಡಿದ್ದೀರಾ, ಸರ್ಕಾರದ ಮಾರ್ಗಸೂಚಿ ಪಾಲಿಸಲು ನಿಮ್ಮ ಕ್ರಮವೇನು, ನೀವು ಪಾಲಿಸುತ್ತಿರುವ ಕೊರೋನಾ ನಿಯಮಗಳೇನು ಎಂಬ ಬಗ್ಗೆ ಗುರುವಾರದೊಳಗೆ ಉತ್ತರಿಸಿ ಎಂದು ಕೆಪಿಸಿಸಿಗೆ ನೊಟೀಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಕೋರ್ಟ್ ಜ.14ಕ್ಕೆ ಮುಂದೂಡಿದೆ.