ಬೆಂಗಳೂರು: ಕೊರೊನಾ ನೆಪದಲ್ಲಿ ಕಠಿಣ ನಿಯಾಮಾವಳಿಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ ಆರ್ಥಿಕ ಚಟುವಟಿಕೆಗಳನ್ನು ಹಾಳು ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಎಲ್ಲಿದೆ ? ಎಲ್ಲಿ ಹೆಚ್ಚಾಗಿದೆ ಎಂಬುದನ್ನು ಸಾಬೀತುಪಡಿಸಿ ಅನಗತ್ಯವಾಗಿ ಗೊಂದಲ ಸೃಷ್ಟಿಸಬೇಡಿ, ಏರ್ಪೋರ್ಟ್ನಿಂದ ಯಾರೋ ಓಡಿ ಹೋದ, ಅಲ್ಲೇನೋ ಆಗಿದೆ ಎಂಬೆಲ್ಲ ವದಂತಿಗಳನ್ನು ಹರಡಬೇಡಿ ಎಂದು ಹೇಳಿದರು.
ಶಾಪಿಂಗ್ಮಾಲ್ ಹಾಗೂ ಇತರೆ ಕಡೆಗಳಲ್ಲಿ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಹಾಜರುಪಡಿಸಿಯೇ ಪ್ರವೇಶಿಸಬೇಕೆಂದು ಹೇಳುತ್ತಿದ್ದಾರೆ. ಯಾರು ಆ ರೀತಿ ಪ್ರಮಾಣ ಪತ್ರ ತೋರಿಸಿ ಒಳ ಹೋಗಲು ಬಯಸುತ್ತಾರೆ. ಬೆಂಗಳೂರಿನಲ್ಲಿ ಬಹುತೇಕ ಮಾಲ್ಗಳು, ಹೋಟೆಲ್ಗಳು ಹವಾನಿಯಂತ್ರಿತವಾಗಿವೆ. ಶಾಲೆಗಳಲ್ಲೂ ಹವಾ ನಿಯಂತ್ರಣ ವ್ಯವಸ್ಥೆ ಇದೆ. ಕೋವಿಡ್ ಹರಡಲಿದೆ ಎಂಬ ಕಾರಣಕ್ಕಾಗಿ ಈ ಚಟುವಟಿಕೆಗಳ ಮೇಲೆ ಕಡಿವಾಣ ಹಾಕಿದರೆ ಆರ್ಥಿಕತೆ ಕುಸಿದು ಹೋಗಲಿದೆ ಎಂದು ಎಚ್ಚರಿಸಿದರು.
ದೇಶದಲ್ಲಿ ಎಲ್ಲಿಯೂ ಇಲ್ಲದ ಕಠಿಣ ನಿಯಮಾವಳಿಗಳನ್ನು ನಮ್ಮಲ್ಲಿ ಮಾತ್ರ ಏಕೆ ಜಾರಿಗೊಳಿಸಬೇಕು, ದೇಶಾದ್ಯಂತ ಚರ್ಚೆ ನಡೆಸಿ ಒಮ್ಮತದ ನಿಯಮಾವಳಿಗಳನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದರು.
ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸುವ ಮೂಲಕ ತಮ್ಮ ವಿರೋಧಿಗಳನ್ನು ಕಂಟ್ರೋಲ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.