ಕೊರೊನಾ ಪರೀಕ್ಷೆ ಹೆಚ್ಚಳಕ್ಕೆ ಸೂಚನೆ -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಿಸಲು ಪ್ರತಿ ದಿನ 1 ಲಕ್ಷ ಪರೀಕ್ಷೆ ಮಾಡಲು ಹಾಗೂ ಒಂದು ಪ್ರಕರಣಕ್ಕೆ 20 ಸಂಪರ್ಕಿತರ ಪತ್ತೆಗೆ ಸೂಚಿಸಲಾಗಿದೆ. ಜೊತೆಗೆ ಮನೆಮನೆ ಭೇಟಿ ವ್ಯವಸ್ಥೆ ತರಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬಿಬಿಎಂಪಿ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಸಚಿವರು ನಂತರ ಮಾತನಾಡಿದರು.
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚಿರುವುದರಿಂದ ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ. ಅಧಿಕಾರಿಗಳು ಜನರ ಮನೆಗೆ ಬಂದು ಕೊರೊನಾ ಪರೀಕ್ಷೆ ಮಾಡಿದರೆ ಸಹಕರಿಸಬೇಕು. ಯಾರೂ ಗಲಾಟೆ ಮಾಡಬಾರದು ಎಂದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 8,500 ಬೂತ್ ಇದ್ದು, ಪ್ರತಿ ಕಡೆ ತಂಡ ರಚಿಸಲಾಗುವುದು. ಈ ತಂಡ ಪ್ರತಿ ಮನೆಗೆ ಹೋಗಿ ಪರೀಕ್ಷೆ ಮಾಡಲಿದೆ. ಕೊರೊನಾ ರೋಗಿಗಳಿಗೆ ಸಹಾಯ, ಐಸೋಲೇಟ್ ಆದವರ ಸಂಚಾರ, ಅವರಿಗೆ ಆರೋಗ್ಯ ರಕ್ಷಣೆ, ಮುದ್ರೆ ಹಾಕುವುದು, ಆರೋಗ್ಯ ಪರೀಕ್ಷೆ, ಸೋಂಕಿಗೊಳಗಾದವರಿಗೆ ಆಕ್ಸಿಜನ್ ವ್ಯವಸ್ಥೆ ಹೇಗಿದೆ ಎಂಬ ಮೊದಲಾದ ಕೆಲಸಗಳನ್ನು ಈ ತಂಡ ಮಾಡಲಿದೆ ಎಂದರು.