ಕೊರೊನಾಗೆ ಲಸಿಕೆ ಲಭ್ಯವಾಗುವ ತನಕ ಶಾಲೆ ಆರಂಭಿಸದಿರಲು ಜಿ.ಪಂ. ಸಭೆಯಲ್ಲಿ ನಿರ್ಣಯ

ಮಡಿಕೇರಿ: ಕೋವಿಡ್-19ಗೆ ಲಸಿಕೆ ಕಂಡು ಹಿಡಿಯುವ ತನಕ ಶಾಲೆಗಳನ್ನು ಆರಂಭಿಸದಿರಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಗಳವಾರ ನಿರ್ಧರಿಸಲಾಯಿತು.
ನಗರದ ಜಿ.ಪಂ.ಸಭಾಂಗಣದಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಕೋವಿಡ್-19ಗೆ ಲಸಿಕೆ ಲಭಿಸುವವರೆಗೆ ಶಾಲೆಗಳನ್ನು ಆರಂಭಿಸುವುದು ಬೇಡ ಎಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ವ್ಯಕ್ತವಾಯಿತು.
ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಸಹ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ಕಡಿವಾಣ ಹಾಕಬೇಕಿದೆ ಎಂದು ಸದಸ್ಯ ಸಿ.ಕೆ.ಬೋಪಣ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.
ಖಾಸಗಿ ಶಾಲೆಗಳಲ್ಲಿ ಪ್ರಥಮ ಹಂತದ ಶುಲ್ಕ ಪಡೆಯಲಾಗಿದ್ದರೂ ಸಹ ದ್ವಿತೀಯ ಹಂತದ ಶುಲ್ಕ ಪಾವತಿಸುವಂತೆ ಪೆÇೀಷಕರಲ್ಲಿ ಒತ್ತಾಯ ಮಾಡುತ್ತಿರುವುದು ಸರಿಯಲ್ಲ ಎಂದು ಸಿ.ಕೆ.ಬೋಪಣ್ಣ ಅವರು ಪ್ರಶ್ನಿಸಿದರು.
ಈ ಕುರಿತು ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಅವರು ಕೆಲವು ಖಾಸಗಿ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ನೇರವಾಗಿ ಬರುವುದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಇದ್ದು, ಈ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನಿಸಬೇಕಿದೆ. ಈ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.