ಬೆಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಮುಗಿಯುವ ಹಂತ ತಲುಪುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆಮಾತನಾಡಿದ ಅವರು, ಈಗಿನ ಲೆಕ್ಕಚಾರದ ಪ್ರಕಾರ ಕೊರೊನ ಹಂತ ಹಂತವಾಗಿ ಮುಗಿಯುವ ಕೊನೆಯ ದಿನಗಳು ಕಂಡುಬರುತ್ತಿವೆ ಹಾಗಂತ ಯಾರೂ ಉದಾಸೀನ ಮಾಡಬಾರದು ಎಂದು ಹೇಳಿದರು.
ಎರಡನೇ ಅಲೆ ತೀವ್ರವಾಗಿರುತ್ತದೆ. ಬಳಿಕ 3 ಮತ್ತು 4ನೇ ಅಲೆಯ ತೀವ್ರತೆ ಕಡಿಮೆ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು ಕೊನೆಗೊಳ್ಳುವ ಮುನ್ಸೂಚನೆ ಎಂದು ತಿಳಿಸಿದರು.
ಕೊರೊನಾ ಮಾರ್ಗಸೂಚಿಯ ಜೊತೆಗೆ ಮಾಸ್ಕ್ ಧರಿಸುವುದು,ಲಸಿಕೆ ಹಾಕಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಸರ್ಕಾರದ ಕ್ರಮಗಳನ್ನು ರಾಷ್ಟ್ರೀಯ ಕೋವಿಡ್ ಟಾಸ್ಕ್‍ಫೋರ್ಸ್ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ಬೇರೆ ರಾಜ್ಯಗಳು ಕರ್ನಾಟಕದ ಮಾದರಿಯನ್ನು ಪಾಲನೆ ಮಾಡಿ ಎಂದು ಹೇಳಿದ್ದಾರೆ ಎಂದರು.
ಓಮಿಕ್ರಾನ್ ಹೊಸ ತಳಿ ಆಗಿರುವುದರಿಂದ ಇದರಲ್ಲಿ ಮೃದು ಲಕ್ಷಣ ಕಾಣುತ್ತದೆ. ಯಾರಿಗೂ ಕೂಡ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಂತ ಉದಾಸೀನ ಮಾಡಬೇಡಿ ಎಂದು ಹೇಳಿದರು.
ಕ್ರಿಸ್‍ಮಸ್ ಮತ್ತು ಹೊಸ ವರ್ಷಾಚರಣೆಗೆ ಕಠಿಣ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಮಾನಿಸುತ್ತಾರೆ, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಬೆಂಗಳೂರು ಹೊರತುಪಡಿಸಿದರೆ ಬೇರೆ ಕಡೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಕೋವಿಡ್ ಸೋಂಕು ಅಲ್ಲಲ್ಲಿ ಕಾಣಿಸುತ್ತಿದೆ ಹಾಗಾಗಿ ಶಾಲಾಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸುಧಾಕರ್ ತಿಳಿಸಿದರು.