ಬೆಂಗಳೂರು: ಪರಿಹಾರ ಪ್ಯಾಕೇಜ್ ಎಷ್ಟೆಷ್ಟು ತಲುಪಿದೆ ಎಂಬುದರ ಅಂಕಿ-ಅಂಶ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶನಿವಾರ ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಹಾಗೂ ಅವರ ಸ್ನೇಹಿತರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಡಿ.ಕೆ. ಶಿವಕುಮಾರ್ ಮಾತನಾಡಿದರು.
ಕೊರೊನಾ ಅವಧಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜ್ ನಿಂದ ರಾಜ್ಯದ ಎಷ್ಟು ಜನರಿಗೆ ಪ್ರಯೋಜನವಾಗಿದೆ ಎಂಬುದರ ಬಗ್ಗೆ ಅಂಕಿಅಂಶಗಳ ದಾಖಲೆ ನೀಡಿ ಎಂದು ಡಿ.ಕೆ.ಶಿ ಒತ್ತಾಯಿಸಿದರು.
ಕೇಂದ್ರ ಸರಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ನಲ್ಲಿ ರಾಜ್ಯಕ್ಕೆ ಎಷ್ಟು ಬಂದಿದೆ. ಈ ಪ್ಯಾಕೇಜ್ ನಿಂದ ರಾಜ್ಯದಲ್ಲಿ ಯಾರಿಗೆ ಎಷ್ಟು ಹಣ ನೀಡಲಾಗಿದೆ ಎಂಬುದರ ಲೆಕ್ಕ ನೀಡಿ ಎಂದರು.
1610 ಕೋಟಿ ರೂಪಾಯಿ ಪ್ಯಾಕೇಜ್ ಹಾಗೂ ನಂತರದ ದಿನಗಳಲ್ಲಿ ಘೋಷಿಸಿದ ಪ್ಯಾಕೇಜ್ ಗಳಿಂದ ಎಷ್ಟು ಚಾಲಕರಿಗೆ, ಸವಿತಾ ಸಮಾಜದವರಿಗೆ, ದರ್ಜಿಗಳಿಗೆ, ಮಾಡಿವಾಳರಿಗೆ ಪರಿಹಾರ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿವೇಶನದ ಆರಂಭದ ದಿನದಲ್ಲೇ ಕೊಡಬೇಕು ಡಿಕೆಶಿ ಹೇಳಿದ್ದಾರೆ.