ನವದೆಹಲಿ: ದಿ ಇಂಡಿಯಾ ಟುಡೇ ಗ್ರೂಪ್ ನಿಂದ ‘ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಅತ್ಯುತ್ತಮ ರಾಜ್ಯ’ ವಿಭಾಗದಡಿ ಕರ್ನಾಟಕಕ್ಕೆ ‘ಇಂಡಿಯಾ ಟುಡೇ ಹೆಲ್ತ್ ಗಿರಿ’ ಪ್ರಶಸ್ತಿ ದೊರೆತಿದೆ. ಇದು ಇನ್ನಷ್ಟು ಕೆಲಸ ಮಾಡಲು ಹುರುಪು ತಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ವಿರುದ್ಧ ಹೋರಾಟ ನಡೆಸಲು ಎಲ್ಲಾ ರಾಜ್ಯಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸುವ ಮುನ್ನವೇ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ರಾಜ್ಯದಲ್ಲಿ ಹಿಂದೆ ಏಳೆಂಟು ಸಾವಿರ ಆಕ್ಸಿಜನ್ ಹಾಸಿಗೆಗಳಿದ್ದು, 30 ಸಾವಿರ ಹಾಸಿಗೆಗಳನ್ನು ಅಳವಡಿಸಲಾಗಿದೆ. ವೆಂಟಿಲೇಟರ್ ಗಳನ್ನೂ ಹೊಸದಾಗಿ ಅಳವಡಿಸಲಾಗಿದೆ. ದಾಖಲೆಯಂತೆ 4 ಸಾವಿರ ವೈದ್ಯರನ್ನು ನೇಮಿಸಲಾಗಿದೆ. ಅರೆ ವೈದ್ಯಕೀಯ, ನರ್ಸ್ ಮೊದಲಾದ ಸಿಬ್ಬಂದಿಯನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. 5 ಟಿ ಕ್ರಮ ಅಳವಡಿಸಿಕೊಂಡು, ತಂತ್ರಜ್ಞಾನ ಬಳಸಿಕೊಂಡು ಕೋವಿಡ್ ನಿಯಂತ್ರಿಸಲಾಗಿದೆ. ಅನೇಕ ಆ್ಯಪ್ ಗಳನ್ನು ಬಳಸಿಕೊಳ್ಳಲಾಗಿದೆ. ಈ ಎಲ್ಲಾ ಕ್ರಮಗಳಿಂದ ರಾಜ್ಯಕ್ಕೆ ಈ ಗೌರವ ಬಂದಿದೆ ಎಂದರು.
ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಖಾಸಗಿ ಕಂಪನಿಯೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆದಿದೆ. ಆದಷ್ಟು ಬೇಗ ಲಸಿಕೆ ಸಿಗಬಹುದು ಎಂಬ ಆಶಾವಾದ ಇದೆ ಎಂದರು.
ಮೂರನೇ ಅಲೆ ಬರಲೇಬೇಕು ಎಂದೇನಿಲ್ಲ. ಸೆರೋ ಸರ್ವೆಯಲ್ಲಿ ಕೂಡ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದು ಕಂಡುಬಂದಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನೋಡಬೇಕಿದೆ. ಆದರೆ ಲಸಿಕೆ ನೀಡುತ್ತಿರುವುದರಿಂದ ಹೆಚ್ಚು ಸಮಸ್ಯೆಯ ಆತಂಕವಿಲ್ಲ. ಆದರೂ ಹೊಸ ವೈರಾಣು ಬಂದರೆ ಎಚ್ಚರದಿಂದ ಇರಬೇಕಾಗುತ್ತದೆ. ಸಾಂಕ್ರಾಮಿಕವನ್ನೂ ಇನ್ನೂ ಸಂಪೂರ್ಣ ಗೆದ್ದಿಲ್ಲ. ಹೀಗಾಗಿ ದೊಡ್ಡ ಸಭೆ, ಸಮಾರಂಭಕ್ಕೆ ಕಡಿವಾಣ ಹಾಕಬೇಕು ಎಂದರು.
ಶಾಲೆಗಳಲ್ಲಿ ಎಲ್ಲೂ ಆತಂಕ ಕಂಡುಬಂದಿಲ್ಲ. ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆಯೂ ನೋಡಬೇಕು. ಸಣ್ಣ ಮಕ್ಕಳಲ್ಲಿ ಕೊರೊನಾ ಸುಲಭವಾಗಿ ಬರುವುದಿಲ್ಲ. ಒಂದರಿಂದ ಐದನೇ ತರಗತಿ ಕೂಡ ಆರಂಭಿಸಬಹುದು. ಆದರೆ ಪೋಷಕರ ಅಭಿಪ್ರಾಯ ಗಮನಿಸಿ ರಾಜ್ಯ ಸರ್ಕಾರ ಹಂತಹಂತವಾಗಿ ಶಾಲೆ ಆರಂಭಿಸುತ್ತಿದೆ. ಮಕ್ಕಳಿಗೆ ತೊಂದರೆಯಾಗುವುದು ಗಮನಕ್ಕೆ ಬಂದರೆ ಸರ್ಕಾರ ತಕ್ಷಣ ತೀರ್ಮಾನ ಹಿಂತೆಗೆದುಕೊಳ್ಳುತ್ತದೆ ಎಂದರು.
ಬಿಜೆಪಿ ಶಾಸಕರು ಬೇರೆ ಪಕ್ಷಕ್ಕೆ ಹೋಗಲ್ಲ
ಚುನಾವಣೆ ಸಮಯದಲ್ಲಿ ಕೆಲ ಬದಲಾವಣೆಗಳು ನಡೆಯುತ್ತವೆ ಎಂದು ಸಹಜವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅದರಲ್ಲಿ ಆತಂಕವೇನೂ ಇಲ್ಲ. ಬಿಜೆಪಿಯ ಯಾವುದೇ ಜನಪ್ರತಿನಿಧಿ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಡಳಿತವನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅತ್ಯುತ್ತಮ ಆಡಳಿತದ ವೈಖರಿಯನ್ನೇ ಮುಂದುವರಿಸಲಾಗಿದೆ. ಶಾಸಕರಿಗೆ ಸಿಎಂ ಮೇಲೆ ವಿಶ್ವಾಸವಿದೆ .ಬಿಜೆಪಿಗೆ ಶಾಸಕರು ಪಕ್ಷ ತೊರೆಯುವ ಭಯ ಇಲ್ಲ. ಬಿಜೆಪಿ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತೆ ಎಂದು, ಯಡಿಯೂರಪ್ಪ ನಿಖರವಾಗಿ ಹೇಳಿಲ್ಲ ಎಂದರು.
ಈ ಹಿಂದೆ ಗಾಂಧಿ ಕುಟುಂಬವನ್ನು ಸಿದ್ದರಾಮಯ್ಯ ಅವರು ಟೀಕೆ ಮಾಡಿದ್ದರು. ಈಗ ಪಕ್ಷಕ್ಕೆ ಹೋಗಿ ಗಾಂಧಿ ಕುಟುಂಬ ಹೊಗಳ್ತಾರೆ. ಕಾಂಗ್ರೆಸ್ಸಲ್ಲಿ ಇರೋರೆಲ್ಲ ಕಾಂಗ್ರೆಸ್ಸಿಗರಲ್ಲ. ಜನತಾ ಪರಿವಾರದಿಂದಲೇ ಹೆಚ್ಚು ಜನ ಬಂದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಅನೈತಿಕ ಸರ್ಕಾರ ಆಗಿತ್ತು. ಅದಕ್ಕೆ ನಾನು ಕಾಂಗ್ರೆಸ್ ಬಿಟ್ಟು ಬಂದಿದ್ದೆ ಎಂದರು.