ಮೈಸೂರು ಜಿಲ್ಲಾಧಿಕಾರಿಗಳ ವರ್ಗಾವಣೆಯಲ್ಲಿ ಯಾವುದೇ ಗೊಂದಲ ಇಲ್ಲ -ಸಚಿವ ಎಸ್.ಟಿ.ಎಸ್.

ಮೈಸೂರು: ಮೈಸೂರು ಜಿಲ್ಲಾಧಿಕಾರಿಗಳ ವರ್ಗಾವಣೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೊಮಶೇಖರ್ ಹೇಳಿದರು.
ನಗರದಲ್ಲಿ ಸಚಿವರು ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇದು ಸರ್ಕಾರದ ನಿರ್ಧಾರವಾಗಿದ್ದು, ನಾವು ಆ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದವರು ತಿಳಿಸಿದರು.
ಈಗಿನ ಜಿಲ್ಲಾಧಿಕಾರಿಗಳೂ ಸಹ ಕರ್ನಾಟಕದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಕನ್ನಡಿಗರೇ ಬೇಕು ಎಂದು ಐಎಎಸ್ ಅಧಿಕಾರಿಗಳ ವಿಷಯದಲ್ಲಿ ಹೇಳಲಾಗದು ಎಂದು ಸಚಿವ ಸೋಮಶೇಖರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಅವರಿಗೇ ಬಿಜೆಪಿ ಟಿಕೆಟ್ ನೀಡಬೇಕೆಂದು ನಾವು ಮನವಿ ಮಾಡಿದ್ದೇವೆ. ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆಂದರು.
ಬಿಜೆಪಿಯಲ್ಲಿ ಎರಡು ಅಭ್ಯರ್ಥಿಗಳ ಹೆಸರು ಕೇಳಿಬರುವುದು ಸಹಜ. ಹಿಂದಿನ ಪರಾಜಿತ ಅಭ್ಯರ್ಥಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಪಕ್ಷದಲ್ಲಿ ತೀರ್ಮಾನವಾಗುತ್ತದೆ ಎಂದು ಅವರು ತಿಳಿಸಿದರು.