(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ಕಳ್ಳತನ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಪೊಲೀಸ್ ಇಲಾಖೆಯ ಸಿ.ಸಿ.ಕ್ಯಾಮರಾಗಳು ಹದಗೆಟ್ಟಿದ್ದು, ಖಾಸಗಿ ಅಂಗಡಿಯವರ ಕ್ಯಾಮರಾದಲ್ಲಿ ಚಹರೆ ಸಿಕ್ಕರೂ ಕೂಡ ಪತ್ತೆಗೆ ವಿಳಂಭ ನೀತಿ ಅನುಸರಿಸಲಾಗುತ್ತಿದೆ ಎಂಬ ಆರೋಪವಿದೆ.
ಅಕ್ಟೋಬರ್ 18ರಂದು ಬಿ.ರಾಚಯ್ಯ ಜೋಡಿ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಿಬ್ಬಂದಿಯ ಗಮನವನ್ನು ಬೇರೆಡೆಗೆ ಸೆಳೆದು ಅಪರಿಚಿತ ವ್ಯಕ್ತಿಯೊಬ್ಬ ಕ್ಯಾಶ್ ಕೌಂಟರ್ ಬಳಿಯಿಂದ ₹5 ಲಕ್ಷ ನಗದನ್ನು ಎಗರಿಸಿದ್ದ.
ನಾಲ್ಕು ಜನರ ತಂಡ ಈ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಇದೂ ಕೂಡ ಬ್ಯಾಂಕ್ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ನ1 ರ ರಾತ್ರಿ ಚಿಕ್ಕ ಬೀದಿಯಲ್ಲಿರುವ ನಂದಿನಿ ಹಾಲಿನ ಕೇಂದ್ರದ ಶಟರ್ ಒಡೆದು ನುಗ್ಗಿರುವ ಅಪರಿಚಿತ ವ್ಯಕ್ತಿಯೊಬ್ಬ, ಕ್ಯಾಶ್ ಕೌಂಟರ್‌ನಲ್ಲಿದ್ದ ₹6.5 ಲಕ್ಷ ಹಣವನ್ನು ದೋಚಿದ್ದಾನೆ.
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳು, ಈ ಕೃತ್ಯದಲ್ಲಿ ಇಬ್ಬರು ಭಾಗಿಯಾಗಿರುವುದನ್ನು ತೋರಿಸುತ್ತಿವೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಮಹತ್ವದ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 16ರ ಮುಂಜಾನೆ ದೊಡ್ಡಂಗಡಿ ಬೀದಿಯಲ್ಲಿ ಜವಳಿ ಅಂಗಡಿಯೊಂದಕ್ಕೆ ನುಗ್ಗಿದ ವ್ಯಕ್ತಿ ಕ್ಯಾಶ್ ಕೌಂಟರ್‌ನಲ್ಲಿದ್ದ ₹75 ಸಾವಿರ ನಗದು ಕದ್ದೊಯ್ದಿದ್ದ.
ಇತ್ತೀಚೆಗೆ ನಗರದ ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾನಾಯಕ ಧಾರಾವಾಹಿ ಕಲಾವಿದೆಗೆ ತೊಡಿಸಲಾಗಿದ್ದ ಬೆಳ್ಳಿ ಕಿರೀಟ ವೇದಿಕೆಯಿಂದಲೇ ಕಳ್ಳತನವಾಗಿತ್ತು.
ಡಿಸೆಂಬರ್ 10 ರ ರಾತ್ರಿ ಮೆಘಾ ಕಾಂಪ್ಲೆಕ್ ಆವರಣದಲ್ಲಿ ಇರೊ ಮೂರು ಅಂಗಡಿಗಳನ್ನು ಸರಳಿನಿಂದ ಮೀಟಿದ್ದು, ಇದರಲ್ಲಿ ಒಂದು ಅಂಗಡಿಯಲ್ಲಿ ೧೨ ಸಾವಿರ ಹಣ ದೋಚಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆನರಾಬ್ಯಾಂಕ್‌ನಲ್ಲಿ ಮತ್ತು ಹಾಲಿನ ಕೇಂದ್ರದಲ್ಲಿ ನಡೆದ ಕಳ್ಳತನವನ್ನು ಸ್ಥಳೀಯರು ಮಾಡಿಲ್ಲ, ಹೊರಗಡೆಯಿಂದ ಬಂದವರು ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಎರಡೂ ಪ್ರಕರಣಗಳು ಸಂಪೂರ್ಣ ಭಿನ್ನವಾದವು. ಬ್ಯಾಂಕ್‌ನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ಗಮನ ಬೇರೆಡೆಗೆ ಸೆಳೆದು ಕಳ್ಳತನ ಮಾಡಲಾಗಿತ್ತು. ಅವರು ಆಂಧ್ರಪ್ರದೇಶದವರು. ಅವರ ಜಾಡು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ನಂದಿನಿ ಹಾಲಿನ ಕೇಂದ್ರದಲ್ಲಿ ಹಣ ಕದ್ದಿರುವ ಕಳ್ಳರೂ ಸ್ಥಳೀಯರಲ್ಲ. ಕಳ್ಳತನ ಮಾಡುವುದೇ ಅವರ ಕೆಲಸ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಕಡೆ ಇದೇ ವ್ಯಕ್ತಿಗಳು ಕಳ್ಳತನ ಮಾಡಿರುವ ಮಾಹಿತಿ ಲಭ್ಯವಾಗಿದೆ.
ಹಾಲಿನ ಕೇಂದ್ರಕ್ಕೆ ಕನ್ನ ಹಾಕುವುದಕ್ಕೂ ಮೊದಲು ಇಬ್ಬರೂ ಪಕ್ಕದಲ್ಲೇ ಇದ್ದ ಇನ್ನೊಂದು ಮಳಿಗೆಯ ಬಾಗಿಲು ಒಡೆದು ನುಗ್ಗಿದ್ದರು. ಅಲ್ಲಿ ಅವರಿಗೆ ಏನೂ ಸಿಕ್ಕಿಲ್ಲ. ಕಳ್ಳತನವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಇಂತಹವರು, ಯಾವುದೋ ಒಂದು ಅಂಗಡಿಯ ಬಾಗಿಲು ಒಡೆದು ಒಳಗೆ ಹೋಗುತ್ತಾರೆ. ಎಷ್ಟು ದುಡ್ಡು ಸಿಗುತ್ತದೋ ಅದನ್ನು ದೋಚಿ ಹೋಗುತ್ತಾರೆ ಇದೂ ಕೂಡ ಕ್ಯಾಮರಾ ಅಲ್ಲಿ ಸೆರೆಯಾಗಿದೆ.
ಜಿಲ್ಲಾ ಕೇಂದ್ರ ಬೆಳೆಯುತ್ತಿದ್ದು, ಪೊಲೀಸ್ ನಿಗಾ ವ್ಯವಸ್ಥೆ ಇನ್ನಷ್ಟು ಬಿಗಿಯಾಗಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೊಡ್ಡಂಗಡಿ, ಚಿಕ್ಕಂಗಡಿ ಬೀದಿಗಳು ನಗರದ ಪ್ರಮುಖ ರಸ್ತೆಗಳು ಅಲ್ಲೇ ಕಳ್ಳತನವಾಗುತ್ತದೆ ಎಂದರೆ ಏನರ್ಥ, ಪೊಲೀಸ್ ನಿಗಾ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಇದು ತೋರಿಸುತ್ತದೆ.
ಪೊಲೀಸ್ ಇಲಾಖೆಗೆ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ, ಪೊಲೀಸರ ಸಂಖ್ಯೆ ಹೆಚ್ಚುವುದರ ಜೊತೆಗೆ ನಿಗಾ ವ್ಯವಸ್ಥೆಯೂ ಬಲಪಡಿಸಬೇಕಿದೆ ಗಸ್ತನ್ನೂ ಹೆಚ್ಚಿಸಬೇಕಿದೆ.ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ
ಇಲಾಖಾ ಕ್ಯಾಮರಾ ದುಸ್ಥಿತಿ: ಚಾಮರಾಜನಗರ ಪ್ರಮುಖ ವೃತ್ತಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗಿದ್ದು ಅವು ದುಸ್ಥಿತಿಯತ್ತ ತಲುಲಿದಿಯೆ ಎಂಬ ಅನುಮಾನ ಮೂಡಿಸಿದೆ.
ಇನ್ನ ಘಟನಾ ಸ್ಥಳ ಆಧರಿಸಿ ಸುತ್ತಮುತ್ತ ಇರೊ ಸಿ ಸಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಆರೋಪಿಗಳ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂಬ ಸಿದ್ದ ಉತ್ತರ ಅದಿಕಾರಿಗಳು ನೀಡುತ್ತಾರೆ.
ಜಿಲ್ಲಾ ಕೇಂದ್ರದಲ್ಲಿ ಇಂತಹ ಕಳ್ಳತನ ಆರಂಭವಾಗಿದ್ದು ಉಳಿದ ನಾಲ್ಕು ತಾಲ್ಲೂಕಿನಲ್ಲಿ ಕಳ್ಳತನವಾದರೂ ಕೆಲ ಪ್ರಕರಣ ದಾಖಲಾಗೋದೇ ಇಲ್ಲ.
ಕೆಲವು ಡಕಾಯಿತಿಯಂತಹ ಪ್ರಕರಣ ದಾಖಲಾದರೂ ದರೋಡೆಯಾದ ಹಣದ ಮೊತ್ತದ ಪ್ರಮಾಣ ಕೂಡ ಸಿಗೋದಿಲ್ಲ.
ಇನ್ನೂ ಭಾರೀ ಅಪರಾಧ ಪ್ರಕರಣ ನಡೆಯುವ ಮುನ್ನ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.ರಾತ್ರಿ ಗಸ್ತು ಹೆಚ್ಚಿಸಿ ಇಲಾಖಾ ಕ್ಯಾಮರಾ ಸಿದ್ದಪಡಿಸಿ ಆರೋಪಿಗಳ ಪತ್ತೆ ಹಚ್ಚಬೇಕಾಗಿದೆ.