ಮೈಸೂರು: ನನಗೆ ಶಾಸಕ ಸ್ಥಾನ ಕ್ಕಿಂತ ದೇಶ ಮುಖ್ಯ, ಹಾಗಾಗಿ ನಾನು ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ವಿದ್ಯಾರಣ್ಯಪುರಂ ನಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮದಾಸ್, ನನಗೆ ವ್ಯಕ್ತಿಗಿಂತ ದೇಶ ಮುಖ್ಯ. ಹಾಗಾಗಿ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಪಕ್ಷದ ಟಿಕೆಟ್ ಕೈತಪ್ಪಿದ ಮೇಲೆ ನನಗೆ ಎರಡು ಆಯ್ಕೆಗಳಿತ್ತು ಒಂದು ಸ್ವತಂತ್ರವಾಗಿ ಸ್ಪರ್ಧಿಸುವುದು ಮತ್ತೊಂದು ಈಗ ಕೊಟ್ಟಿರುವ ತೀರ್ಮಾನವನ್ನು ಒಪ್ಪಿಕೊಳ್ಳುವುದು. ಹಾಗಾಗಿ ನಾನು ಪಕ್ಷಕ್ಕೆ ಬದ್ಧನಾಗಿ ಪಕ್ಷ ಹೇಳಿದಂತೆ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ನನಗೆ ಶಾಸಕ ಸ್ಥಾನಕ್ಕಿಂತ ದೇಶ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಒಡನಾಟಕ್ಕೆ ಮನಸೋತು ಪಕ್ಷದ ನಿರ್ಧಾರ ಸ್ವೀಕರಿಸಿ ಇಲ್ಲೇ ಮುಂದುವರೆಯುತ್ತೇನೆ ಎಂದು ರಾಮದಾಸ್ ಈ ವೇಳೆ ಭಾವನಾತ್ಮಕವಾಗಿ ನುಡಿದರು.
ಇದೇ 20ರಂದು ಕೃಷ್ಣರಾಜ ಕ್ಷೇತ್ರದಲ್ಲಿ ಅಭ್ಯರ್ಥಿ ಶ್ರೀವತ್ಸ ಅವರು ನಾಮಪತ್ರ ಸಲ್ಲಿಸಲಿದ್ದಾರೆ ಅದರಲ್ಲಿ ನಾನು ಭಾಗಿಯಾಗುವೆ ಮತ್ತು 22 ರಿಂದ ನಾನು ಮತ್ತು ನನ್ನ ಬೆಂಬಲಿಗರು ಕ್ಷೇತ್ರಾದ್ಯಂತ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತೇವೆ ಎಂದು ಅವರು ತಿಳಿಸಿದರು.
ನಾನು ಪಕ್ಷದ ತೀರ್ಮಾನ ವಿರೋಧಿಸಿ ರಾಜೀನಾಮೆ ನೀಡಬಹುದಿತ್ತು ಆದರೆ ನಾನೊಬ್ಬ ಸೈನಿಕನ ಮಗ. ಹಾಗಾಗಿ ವ್ಯಕ್ತಿಗಿಂತ ದೇಶವೇ ನನಗೆ ಮುಖ್ಯ ಎಂದು ನಂಬಿದ್ದೇನೆ ಅದಕ್ಕಾಗಿ ರಾಜ್ಯಕ್ಕೆ ಒಬ್ಬ ಮಾದರಿ ವ್ಯಕ್ತಿಯಾಗಿ ನಾನು ಪಕ್ಷದಲ್ಲಿ ಮುಂದುವರೆಯುವೆ ಎಂದು ರಾಮದಾಸ್ ಸ್ಪಷ್ಟಪಡಿಸಿದರು.
ನಿಮಗೆ ಟಿಕೆಟ್ ಕೈತಲು ಕಾರಣ ಯಾರು ಎಂಬ ವರದಿಗಾರರ ಪ್ರಶ್ನೆಗೆ, ಈ ಕುರಿತು ನಾನು ಪೋಸ್ಟ್ ಮಾರ್ಟಂ ಮಾಡುವುದಿಲ್ಲ ಪ್ರತಿ ಬಾರಿಯೂ ಟಿಕೆಟ್ ಕೊಡುವಾಗ ಸಮಸ್ಯೆ ಆಗುತ್ತಲೇ ಇತ್ತು. ಆದರೆ ಈ ಬಾರಿ ಟಿಕೆಟ್ ಕೈತಪ್ಪಿ ಹೋಗಿದೆ.
ಹಾಗಾಗಜ ಯಾರಿಂದ ಹೇಗೆ ಟಿಕೆಟ್ ಕೈತಪ್ಪಿದೆ ಎಂದು ನಾನು ದೂಷಿಸಲು ಹೋಗುವುದಿಲ್ಲ ಎಂದು ಉತ್ತರಿಸಿದರು.
ಪಕ್ಷ ಕೊಟ್ಟ ಎಲ್ಲಾ ಕಾರ್ಯವನ್ನು ಮಾಡಿದ್ದೇನೆ, ಮೋದಿಯವರ ಪ್ರತಿ ಯೋಜನೆಗಳನ್ನು ಇಡೀ ಕ್ಷೇತ್ರದಲ್ಲಿ ಜಾರಿಗೆ ತಂದಿದ್ದೇನೆ, ಈ ಬಾರಿ ಮಹತ್ತರವಾದ ಸಾಧನೆ ಮಾಡಬೇಕೆಂಬ ಕನಸು ಇಟ್ಟುಕೊಂಡಿದ್ದೆ ಆದರೆ ಅದು ಸಾಧ್ಯ ಆಗುತ್ತಿಲ್ಲ.
ನಮ್ಮ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ ಮುಂದೆ ಬರುವ ಶಾಸಕರು ಅದನ್ನು ಮುಂದುವರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ರಾಮದಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಓಂ ಶ್ರೀನಿವಾಸ್, ರವಿ, ಶಂಭು ಹಾಗೂ ಚುನಾವಣಾ ವೀಕ್ಷಕರಾದ ರಾಜು ಭಂಡಾರಿ ಉಪಸ್ಥಿತರಿದ್ದರು.