ಬೆಂಗಳೂರು: ದೇವರ ಜಾತ್ರೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಹಿಂದೂ ಧರ್ಮದ ವ್ಯಾಪಾರಸ್ಥರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಮೋಹನ್‍ಗೌಡ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಾರ್ತಿಕ ಕಡೆ ಸೋಮವಾರ ನಗರದ ಬಸವನಗುಡಿಯಲ್ಲಿ ನಡೆದ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಅನ್ಯ ಧರ್ಮಿಯರು ವ್ಯಾಪಾರ ವಹಿವಾಟುಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈಗ ಧರ್ಮ ದಂಗಲ್ ಭೀತಿ ಎದುರಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಸ್ಥಾನಗಳ ಆವರಣದಲ್ಲಿ ಕೇವಲ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿರುವುದು ಧರ್ಮ ದಂಗಲ್‌ಗೆ ಪುಷ್ಟಿ ನೀಡಿದೆ.
2002 ರ ಧಾರ್ಮಿಕ ದತ್ತಿ ಇಲಾಖೆ ಕಾಯ್ದೆಯಲ್ಲಿಯೂ ಈ ಬಗ್ಗೆ ಉಲ್ಲೇಖವಿದ್ದು ಸರ್ಕಾರ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮೋಹನ್‍ಗೌಡ ಆಗ್ರಹಿಸಿದ್ದಾರೆ.
ಇದೇ ತಿಂಗಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಕ ಷಷ್ಠಿ ಆಚರಣೆಯ ಸಂದರ್ಭದಲ್ಲಿ ಅನ್ಯ ಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದ್ದಾರೆ.
ಚಂಪಕ ಷಷ್ಟಿಯಲ್ಲಿ ಅನ್ಯ ಧರ್ಮಿಯರು ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಬಾರದು ಎಂದು ಆಗ್ರಹಿಸಿರುವ ಹಿಂದೂ ಸಂಘಟನೆಗಳ ಆಗ್ರಹಕ್ಕೆ ಮುಸಲ್ಮಾನ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ ತಪ್ಪು ಮಾಡಿದರೆ ಅದು ನಮ್ಮ ಸಮುದಾಯದ ಎಲ್ಲರಿಗೂ ಅನ್ವಯಿಸುವುದಿಲ್ಲ ಹಾಗಾಗಿ ಸರ್ಕಾರ ಧರ್ಮ ದಂಗಲ್‍ಗೆ ಅವಕಾಶ ನೀಡಬಾರದು ಎಂದು ಮುಸ್ಲಿಂ ಮುಖಂಡ ಮಹಮ್ಮದ್ ಖಾಲಿದ್ ಮನವಿ ಮಾಡಿದ್ದಾರೆ.
ಮುಸ್ಲಿಂರಿಗೆ ವ್ಯಾಪಾರ ವಿರೋಧ ಮಾಡುವಿರಾದರೆ ಮುಸ್ಲಿಂ ರಾಷ್ಟ್ರಗಳಿಂದ ನೀವು ಯಾವುದನ್ನು ಖರೀದಿ ಮಾಡಬೇಡಿ.
ಒಂದು ಸಮಾಜ ಶಾಂತಿಯಿಂದ ಇರಬೇಕೆಂದರೆ ಎಲ್ಲ ಧರ್ಮಿಯರು ಸಹೋದರರಂತೆ ಬಾಳುವುದರಿಂದ ಮಾತ್ರ ಸಾಧ್ಯ ಎಂದು ಖಾಲಿದ್ ಹೇಳಿದ್ದಾರೆ.
ಈ ಧರ್ಮ ದಂಗಲ್ ಎಲ್ಲಿಗೆ ಹೋಗಿ ನಿಲ್ಲುವುದೋ ಕಾದು ನೋಡಬೇಕಿದೆ.