ಡಿಕೆ ಬ್ರದರ್ಸ್‍ಗೆ ಎಚ್ಚರಿಕೆ ಕೊಟ್ಟ ಡಿಸಿಎಂ ಅಶ್ವತ್ಥನಾರಾಯಣ

ಚನ್ನಪಟ್ಟಣ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ರಾಮನಗರವೂ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿಯ ಪರ್ವ ಆರಂಭವಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಚನ್ನಪಟ್ಟಣ ತಾಲ್ಲೂಕಿನ ಜೆ. ಬ್ಯಾಡರಹಳ್ಳಿಯ ಶಾಲೆ ಮೈದಾನದಲ್ಲಿ ಮಂಗಳವಾರ ಬಿಜೆಪಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಷ್ಟು ದಿನ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲಿದ್ದವು. ಈಗ ಅನುಷ್ಠಾನ ಆಗಿ ಕಣ್ಣಿಗೆ ಕಾಣುತ್ತಿವೆ. ಇದಕ್ಕೆ ಕಾರಣ ದೇಶ ಮತ್ತು ರಾಜ್ಯದಲ್ಲಿ ಆಗಿರುವ ರಾಜಕೀಯ ಬದಲಾವಣೆ ಎಂದರು.
ಎಪ್ಪತ್ತು ವರ್ಷಗಳಿಂದ ದೇಶವನ್ನು ಕಾಂಗ್ರಸ್ ಆಳಿತು. ರಾಜ್ಯದಲ್ಲಿಯೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಆಳ್ವಿಕೆ ನಡೆಸಿದವು. ಆದರೆ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶೌಚಾಲಯ ಕಟ್ಟಲಿಕ್ಕೂ ಆಗಲಿಲ್ಲ ಈಗ ಶೇ. 100ರಷ್ಟು ಗುರಿಯನ್ನು ಬಿಜೆಪಿ ಸಾಧಿಸಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೂ ನಡೆದ ಅಬ್ಬರದ ರಾಜಕೀಯ ಸಾಕು, ಕೌಟುಂಬಿಕ ರಾಜಕಾರಣ ಸಾಕು. ಅಭಿವೃದ್ಧಿ ಮರೆತು ಸ್ವಾರ್ಥ ರಾಜಕಾರಣ ಮಾಡಿದ ಪಕ್ಷಗಳು ಸಾಕು. ಈ ಚುನಾವಣೆಯಲ್ಲಿ ಶೇ. 80ರಷ್ಟು ಅಭ್ಯರ್ಥಿಗಳು ಬಿಜೆಪಿಯಿಂದಲೇ ಗೆಲ್ಲಬೇಕು. ಎಂದು ಡಿಸಿಎಂ ಕಾರ್ಯಕರ್ತರಿಗೆ ಕರೆ ನೀಡಿದರು.
ಡಿಸಿಎಂ ಭಾಷಣದ ನಡುವೆ ಪಕ್ಷದ ಕಾರ್ಯಕರ್ತರು, ಕನಕಪುರದಲ್ಲಿ ಹಾಗೂ ಜಿಲ್ಲೆಯ ಅನೇಕ ಕಡೆ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರ ಬೆಂಬಲಿಗರಿಂದ ಕಿರುಕುಳ ಹೆಚ್ಚಾಗಿದೆ ಎಂದು ಗಮನ ಸೆಳೆದರು.
ಈ ಮಾತು ಕೇಳಿ ಡಾ.ಅಶ್ವತ್ಥನಾರಾಯಣ ಅವರು, ಜಿಲ್ಲೆ ಯಾರೊಬ್ಬರ ಸ್ವತ್ತೂ ಅಲ್ಲ. ಯಾರಪ್ಪನ ಆಸ್ತಿಯೂ ಅಲ್ಲ. ನಿಮ್ಮ ಕರ್ತವ್ಯವನ್ನು ನೀವು ರಾಜಿ ಇಲ್ಲದೆ ಮಾಡಿ. ನಿಮಗೆ ಯಾರಾದರೂ ಅಡ್ಡಿಪಡಿಸಿದರೆ ನಮ್ಮ ಗಮನಕ್ಕೆ ತನ್ನಿ. ಅಂಥವರಿಗೆ ಹೇಗೆ ಪಾಠ ಕಲಿಸಬೇಕು ಎಂಬುದು ನಮಗೆ ಗೊತ್ತಿದೆ ಎಂದರು.
ಜಿಲ್ಲೆಯಲ್ಲಾಗಲಿ ಅಥವಾ ರಾಜ್ಯದಲ್ಲಿಯೇ ಆಗಲಿ ದಬ್ಬಾಳಿಕೆ ಮಾಡಿ ರಾಜಕಾರಣ ಮಾಡುತ್ತೇವೆ ಎನ್ನಲಾಗದು. ಆ ಕಾಲ ಹೋಯಿತು. ಅಭಿವೃದ್ಧಿಯ ಆಧಾರದಲ್ಲಿ ಚುನಾವಣೆ ನಡೆಯಬೇಕು ಇಲ್ಲವಾದರೆ, ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಆದ ಗತಿಯೇ ಇಲ್ಲಿಯೂ ಆಗುತ್ತದೆ ಎಂದು ಡಿಸಿಎಂ ಎಚ್ಚರಿಕೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಜನರೇ ಪ್ರಭುಗಳು. ಕಾನೂನು, ನಿಯಮ ಎನ್ನುವುದು ಎಲ್ಲರಿಗೂ ಒಂದೇ. ಯಾರಿಗೂ ಪಕ್ಷದ ಕಾರ್ಯಕರ್ತರು ಹೆದರಬೇಕಾಗಿಲ್ಲ. ಧೈರ್ಯವಾಗಿ ಮುನ್ನುಗಿ ಎಂದು ಅವರು ಕಾರ್ಯಕರ್ತರಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ್, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಮುಂತಾದವರು ಉಪಸ್ಥಿತರಿದ್ದರು.