ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಡಿಕೆಶಿ ಪತ್ರ

ಬೆಂಗಳೂರು: ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗುವುದೆಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಡಿಕೆಶಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಮ್ಮ ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಅದನ್ನು ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ನೀಡಲಿದ್ದೇವೆ ಎಂದರು.

ನಾವು ಮುಖ್ಯಮಂತ್ರಿಗಳ ಮನೆಗೂ ಹೋಗುತ್ತೇವೆ. ಆದರೆ ಕಾಫಿ-ಟೀ ಕುಡಿದು ನೆಂಟಸ್ಥಿಕೆ ಮಾಡಲು ಹೋಗುವುದಿಲ್ಲ. ನಾವು ಏನು ಮಾಡುತ್ತೇವೆ ಎಂದು ಹೇಳುವುದಿಲ್ಲ. ಆದರೆ ನಾವು ಸುಮ್ಮನೆ ಕೂರುವುದಿಲ್ಲ. ನಾನು ಸಿದ್ದರಾಮಯ್ಯ ಅವರಿಗಾಗಿ ಕಾಯುತ್ತಿದ್ದು, ಅವರು ಮೈಸೂರಿಗೆ ಹೋಗಿದ್ದಾರೆ. ಅವರು ಬಂದ ನಂತರ ಏನು ಮಾಡುತ್ತೇವೆ ಎಂದು ಕಾದು ನೋಡಿ ಎಂದು ಡಿಕೆಶಿ ಮಾಮಿಕವಾಗಿ ನುಡಿದರು.

ಮೇಕೆದಾಟು ಯೋಜನೆಯಿಂದ ರೈತರಿಗೆ ನೀರು ನೀಡುತ್ತೇವೆ ಎಂಬ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಹಿನ್ನಡೆಯಾಗಲಿದೆ ಎಂಬ ಆರ್. ಅಶೋಕ್ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಆರ್. ಅಶೋಕ್ ರವರಷ್ಟು ಅತಿ ಬುದ್ಧಿವಂತ ಅಲ್ಲ. ಅವರು ಸರ್ಕಾರದ ಪ್ರತಿನಿಧಿ. ನನಗೂ ರಾಜಕೀಯ, ಕಾನೂನು ಗೊತ್ತಿದೆ. ಮೇಕೆದಾಟು ಯೋಜನೆ ಕುಡಿಯುವ ನೀರಿನ ಯೋಜನೆ. ಕೋವಿಡ್ ನಿಂದ ವಿಶ್ರಾಂತಿ ಪಡೆಯುತ್ತಿದ್ದ ಅವರು ಇನ್ನಷ್ಟು ದಿನ ವಿಶ್ರಾಂತಿ ಪಡೆಯಲಿ ಎಂದರು. ಮೇಕೆದಾಟು ವಿಚಾರದಲ್ಲಿ ಬಿಜೆಪಿಯ ಒಕ್ಕಲಿಗ ನಾಯಕರು ನಿಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ‘ಎಲ್ಲ ಒಕ್ಕಲಿಗ ನಾಯಕರ ಕೈಲಿ ನಮ್ಮ ವಿರುದ್ಧ ವಾಗ್ದಾಳಿ ನಡೆಸುವುದು ಬಿಜೆಪಿಯವರ ತಂತ್ರಗಾರಿಕೆ. ಅವರು ಬೇರೆ ನಾಯಕರಿಂದ ಮಾತನಾಡಿಸುವುದಿಲ್ಲ. ಮುಖ್ಯಮಂತ್ರಿಗಳು ಬೇಕಂತಲೇ ಮಾತಾಡುತ್ತಿಲ್ಲ. ಅವರ ತಂತ್ರಗಾರಿಕೆ ಅವರು ಮಾಡಲಿ’ ಎಂದು ಉತ್ತರಿಸಿದರು.