ಜೆಡಿಎಸ್ ಜತೆ ಮೈತ್ರಿ: ಬಿಜೆಪಿ ದುರ್ಬಲತೆಗೆ ಸಾಕ್ಷಿ -ಡಿಕೆಶಿ

ಬೆಂಗಳೂರು -ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮುಂದಾಗಿರುವುದು ಆ ಪಕ್ಷ ಅದೆಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಜತೆ ಹೋಗುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರು ಹೇಳಿರುವುದು ಬಿಜೆಪಿಗೆ ಅದೆಂಥ ದುಸ್ಥಿತಿ ಬಂದಿದೆ ಎಂಬುದನ್ನು ತೋರಿಸುತ್ತಿದೆ ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದೆ. ಆದರೂ ಅವರಿಗೆ ಸ್ವಂತ ಬಲದ ಮೇಲೆ ನಂಬಿಕೆ ಇಲ್ಲ.   ಜೆಡಿಎಸ್ ಮೇಲೆ ಅವಲಂಬಿತ ವಾಗಲು ಮುಂದಾಗಿದೆ. ಶಿವಮೊಗ್ಗ ಸೇರಿದಂತೆ ಹಲವೆಡೆ ಅವರ ಅಭ್ಯರ್ಥಿಗಳು ಸೋಲುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂಥ ಸಾಕ್ಷಿ  ಬೇಕಿಲ್ಲ ಎಂದರು.

ನಾವು  ಮೊದಲಿಂದಲೂ ಬಿಜೆಪಿ ಜತೆ ಅಂತರ ಕಾಯ್ದುಕೊಂಡಿದ್ದೇವೆ. ಆದರೆ ಜೆಡಿಎಸ್ ಜತೆ ವಿಷಯಾಧಾರಿತವಾಗಿ ಹೊಂದಾಣಿಕೆ ಮಾಡಿಕೊಂಡಿದ್ದುದು, ವಿರೋಧ ಮಾಡಿದ್ದುದು ನಿಜ. ನಾವು, ಅವರು ಗೆದ್ದಿರಬಹುದು, ಸೋತಿರಬಹುದು, ಫೈಟ್ ಮಾಡಿರಬಹುದು ಅದೆಲ್ಲ ನಿಜ. ಈಗಲೂ ಬೆಂಗಳೂರು ಗ್ರಾಮಾಂತರ ಸೇರಿ ಕೆಲವೆಡೆ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ. ಆದರೆ ಬಿಜೆಪಿ ರೀತಿ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ‌ತಿಳಿಸಿದರು.

ಜಾತ್ಯತೀತ ಶಕ್ತಿಗಳು ಒಂದಾಗಬೇಕು ಅಂತ ನೀವೆ ಹೇಳ್ತಿರುತ್ತೀರಿ ಎಂಬ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾಸನ, ಮಂಡ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳೋಣ ಅಂತಾ ನಾನೇ ಜೆಡಿಎಸ್ ಗೆ ಹೇಳಿದ್ದೆ. ಆಗ ನಮ್ಮ ಪಕ್ಷದಿಂದ ಹೋದ ನಾಯಕರು ವಾಪಸ್ ಬಂದೇ ಇಲ್ಲ. ಹಾಗಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಫ್ರೆಂಡ್ಲಿ ಫೈಟ್ ಮಾಡುತ್ತಿದ್ದೇವೆ ಎಂದು ಡಿಕೆಶಿ ಹೇಳಿದರು.