ಪ್ರಹ್ಲಾದ್ ಜೋಷಿ ತಮ್ಮ ಪಕ್ಷದವರ ಆಸ್ತಿ ಬಹಿರಂಗ ಪಡಿಸಲಿ -ಡಿ.ಕೆ. ಶಿವಕುಮಾರ್

ಬೆಂಗಳೂರು: ಪ್ರಹ್ಲಾದ್ ಜೋಷಿ ಅವರು ತಮ್ಮ ಪಕ್ಷದವರ ಆಸ್ತಿ ಬಹಿರಂಗ ಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಶಿವಕುಮಾರ್ ಅವರು ಮಾತನಾಡಿದರು.
ಪ್ರಹ್ಲಾದ ಜೋಷಿ ಅವರು ದೊಡ್ಡವರು. ತಮ್ಮ ಮನೆಯನ್ನು ಮೊದಲು ಶುದ್ಧ ಮಾಡಿಕೊಳ್ಳಲಿ ಎಂದು ಡಿಕೆಶಿ ಹೇಳಿದರು.
ನಮ್ಮ ಆಸ್ತಿ ಮುಂಚೆ ಎಷ್ಟಿತ್ತು, ಈಗ ಎಷ್ಟಿದೆ ಎಂದು ಪ್ರಹ್ಲಾದ ಜೋಷಿ ಅವರು ಕೇಳುವ ಮುನ್ನ ತಮ್ಮ ಪಕ್ಷದ ನಾಯಕರ ಆಸ್ತಿ ವಿವರಗಳನ್ನು ಬಹಿರಂಗಪಡಿಸಲಿ ಎಂದರು.
ಈ ದಾಳಿಗಳು ರಾಜಕೀಯ ಪ್ರೇರಿತ ಎಂಬುದನ್ನು ತಿಳಿಯಬೇಕಾದರೆ, ಎಫ್ ಐಆರ್ ಪ್ರತಿ ನೋಡಿ. ಪ್ರಾಥಮಿಕ ತನಿಖೆ ನಡೆದಿದ್ದು ಯಾವಾಗ? ನಾನು ಪಕ್ಷದ ಅಧ್ಯಕ್ಷ ಆಗಿದ್ದು ಯಾವಾಗ? ಎಫ್ ಐಆರ್ ದಾಖಲಿಸಿದ್ದು ಯಾವಾಗ? ಎಂಬುದನ್ನು ನೋಡಿ. ಆಗ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಡಿಕೆಶಿ ತಿಳಿಸಿದರು.
ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ಅ. 10ರಂದು ಮಂಡ್ಯದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಎಐಸಿಸಿ ಆದೇಶದಂತೆ ರಾಜ್ಯ ಮಟ್ಟದ ರೈತರ ಸಮ್ಮೇಳನವನ್ನು ದಾವಣಗೆರೆಯಲ್ಲಿ ಮಾಡಲು ನಿರ್ಧರಿಸಿದ್ದೆವು. ಆದರೆ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಅ. 10ರ ಬೆಳಗ್ಗೆ 11 ಗಂಟೆಗೆ ನಡೆಸಲಾಗುವುದೆಂದರು.
ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಆರಂಭಿಸುತ್ತಿದ್ದೇವೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನಿರ್ದೇಶನದಂತೆ 2 ಕೋಟಿ ಸಹಿ ಸಂಗ್ರಹಿಸಲಾಗುವುದು ಎಂದವರು ತಿಳಿಸಿ, ಈ ಸಹಿಗಳುಳ್ಳ ಪತ್ರವನ್ನು ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಅವರಿಗೆ ಸಲ್ಲಿಸಿ ರೈತ ವಿರೋಧಿ ಕಾಯ್ದೆಗಳ ರದ್ದತಿಗೆ ಮನವಿ ಮಾಡಲಿದ್ದಾರೆಂದರು.