ಬೆಂಗಳೂರು:ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣವಾಗಬೇಕೆಂಬುದು ಜನರ ಭಾವನೆಯಾಗಿದ್ದು, ಸರ್ಕಾರ ಅದಕ್ಕೆ ಸ್ಪಂದಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಹ್ರಹಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಹೋರಾಟಗಾರರ ಕಷ್ಟಗಳಿಗೆ ಸರ್ಕಾರವೇ ಉತ್ತರ ನೀಡಬೇಕು ಎಂದು ಹೇಳಿದರು.
ಜೀವ ಇದ್ದರೆ ಜೀವನ. ಜೀವ ಎಂದರೆ ನೀರು. ಆ ನೀರನ್ನು ಸಂಗ್ರಹಣೆ ಮಾಡಲು ಅಣೆಕಟ್ಟು ನಿರ್ಮಾಣವಾಗಬೇಕು. ಇಲ್ಲಿ ವ್ಯಕ್ತಿಚಿಂತನೆ ಮುಖ್ಯವಲ್ಲ, ಜನರ ಭಾವನೆಗಳು ಮುಖ್ಯ. ಸರ್ಕಾರ ಜನರ ಭಾವನೆಯಂತೆ ಅಣೆಕಟ್ಟು ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಸಾಕಷ್ಟು ಆಸ್ತಿಗಳು ಮುಳುಗಡೆಯಾಗಲಿವೆ. ರೈತರ ಜಮೀನು ಸ್ವಾಧೀನವಾಗಲಿದೆ. ನಷ್ಟ ಅನುಭವಿಸುವವರು ನಾವು ಎಂದು ತಿಳಿಸಿದರು.
ಆದರೆ, ಸಮಗ್ರ ಹಿತದೃಷ್ಟಿಯಿಂದ ಬೆಂಗಳೂರಿಗೆ ನೀರು ತರಬೇಕಾದರೆ ಯೋಜನೆ ಅನಿವಾರ್ಯ. ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗ ಮಾಡಿ ಮೇಕೆದಾಟಿಗೆ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತರು ಅಣೆಕಟ್ಟು ಹೊರತಾದ ಮೇಕೆದಾಟಿಗೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸರ್ಕಾರವೇ ಸ್ಪಷ್ಟನೆ ನೀಡಬೇಕು. ನಾನು ಸರ್ಕಾರ ಅಲ್ಲ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಕೆರೆಕಟ್ಟೆಗಳನ್ನು ಪುನರುತ್ಥಾನ ಮಾಡಿದರೆ ನೀರಿನ ಸಮಸ್ಯೆ ನೀಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕಾಗಿ ಒಂದು ಸಮಿತಿಯನ್ನೇ ರಚನೆ ಮಾಡಲಿ ಎಂದು ಸಲಹೆ ನೀಡಿದರು.