ಬೆಂಗಳೂರು: ಕೋವಿಡ್ ಮತ್ತು ಪ್ರವಾಹ ನಿರ್ವಹಣೆ ಉದ್ದೇಶದಿಂದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ.
ಈ ಸಚಿವರೇ ಎಲ್ಲ ಜಿಲ್ಲೆಗಳಲ್ಲೂ ಆ. 15ರಂದು ನಡೆಯಲಿರುವ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ಮಾಡಲಿದ್ದಾರೆ. ಈ ಸಂಬಂಧ ಸರಕಾರ ಆದೇಶವನ್ನು ಮಂಗಳವಾರ ಹೊರಡಿಸಿದೆ.
ಆದರೆ ಚಾಮರಾಜನಗರ ಮತ್ತು ಬಳ್ಳಾರಿ ಜಿಲ್ಲೆಗಳಿಗೆ ನೇರ ಉಸ್ತುವಾರಿ ಸಚಿವರಿಲ್ಲ. ಎಸ್.ಟಿ.ಸೋಮಶೇಖರ್ ಅವರಿಗೆ ಹೆಚ್ಚುವರಿಯಾಗಿ ಮೈಸೂರು ಜಿಲ್ಲೆಯೊಂದಿಗೆ ಚಾಮರಾಜನಗರ ಜಿಲ್ಲೆಯನ್ನು ಹಾಗೂ ಆನಂದ್ ಸಿಂಗ್ ಅವರಿಗೆ ವಿಜಯನಗರದ ಜತೆ ಬಳ್ಳಾರಿ ಜಿಲ್ಲೆಯನ್ನು ಹೆಚ್ಚುವರಿಯಾಗಿ ಉಸ್ತುವಾರಿ ಕೊಡಲಾಗಿದೆ. ಇವರಿಬ್ಬರು ಮೈಸೂರು, ವಿಜಯನಗರದಲ್ಲೇ ಧ್ವಜಾರೋಹಣ ಮಾಡಲಿದ್ದಾರೆ.
ಹಾಗಾಗಿ ಚಾಮರಾಜನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರೇ ಇಲ್ಲ. ನಿಯೋಜನೆ ಮಾಡಲು ಹೆಚ್ಚುವರಿ ಸಚಿವರೂ ಇಲ್ಲ. ಹೀಗಾಗಿ ಆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳೇ ಧ್ವಜಾರೋಹಣ ಮಾಡಲಿದ್ದಾರೆಂದು ಆದೇಶದಲ್ಲಿ ತಿಳಿಸಲಾಗಿದೆ.
ಇನ್ನುಳಿದ ಜಿಲ್ಲೆಗಳಲ್ಲಿ ಆ. 15ರಂದು ಧ್ವಜಾರೋಹಣ ನೆರವೇರಿಸಲು ಸರಕಾರ ಸಚಿವರನ್ನು ನೇಮಿಸಿದೆ.
ಇನ್ನು ಬಳ್ಳಾರಿಯ ಶ್ರೀರಾಮುಲು ಅವರು ಪಕ್ಕದ ಜಿಲ್ಲೆ ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದಿಂದ ಗೆದಿದ್ದು, ತಾಂತ್ರಿಕವಾಗಿ ಅವರು ಚಿತ್ರದುರ್ಗ ಜಿಲ್ಲೆಯಲ್ಲೇ ಧ್ವಜಾರೋಹಣ ಮಾಡಲಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಬೆಂಗಳೂರು ರಾಜರಾಜೇಶ್ವರಿ ನಗರವನ್ನು ಪ್ರತಿನಿಧಿಸುವ ತೋಟಗಾರಿಕೆ, ಯೋಜನೆ & ಸಾಂಖಿಕ ಖಾತೆ ಸಚಿವ ಮುನಿರತ್ನ ಅವರು ಧ್ವಜಾರೋಹಣ ನೆರೆವೇರಿಸಲಿದ್ದಾರೆ.