ಮೈಸೂರು: ಏಕರೂಪ ನಾಗರಿಕ ಕಾಯ್ದೆಗೆ ನಮ್ಮ ವಿರೋಧವಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಶನಿವಾರ ಭಾನುವಾರ ಹಮ್ಮಿಕೊಂಡಿರುವ ವಕೀಲರ ಸಮಾವೇಶ ಉದ್ಘಾಟನೆ ನೆರವೇರಿಸಲು ಆಗಮಿಸಿದ ಸಿಎಂ, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಕಾಯ್ದೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇರಳದಲ್ಲೂ ಈಗಾಗಲೇ ಇದಕ್ಕೆ ವಿರೋಧ ವ್ಯಕ್ತಪಡಿಸಲಾಗಿದೆ, ನಾವೂ ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಬಿಬಿಎಂಪಿಯಲ್ಲಿ ಬೆಂಕಿ ಬಿದ್ದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದೇನೆ. 40% ಗಿಂತ ಕಡಿಮೆ ಗಾಯವಾಗಿರುವವರಿಗೆ ತೊಂದರೆ ಇಲ್ಲ.ಒಂದಿಬ್ಬರಿಗೆ ಹೆಚ್ಚು ಗಾಯವಾಗಿದೆ ಎಂದು ತಿಳಿಸಿದರು.
ಎಲ್ಲಾ ಗಾಯಾಳುಗಳಿಗೂ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಯಾವಾಗ ಎಂಬ ಪ್ರಶ್ನೆಗೆ ಇದಕ್ಕಾಗಿ ಒಂದು ಸಮಿತಿ ಮಾಡಿದ್ದೇವೆ.
ಶಾಸಕರಿಗೂ ಇದರಲ್ಲಿ ಸ್ಥಾನ ಕೊಡಬೇಕಿದೆ. ಯಾವ ಅನುಪಾತದಲ್ಲಿ ಇದನ್ನ ಹಂಚಿಕೆ ಮಾಡಬೇಕು ಎಂಬ ಬಗ್ಗೆ ಸಮಿತಿ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ವಾರ್ಡ್‌ಗಳ ಪುನರ್ವಿಂಗಡಣೆ ವಿಚಾರದಲ್ಲಿ ನ್ಯಾಯಾಲಯ ಕೇಲವೊಂದು ಗಡುವು ನೀಡಿದೆ ಎಂದು ಹೇಳಿದರು.
ಆ ಗಡುವಿನ ಆಧಾರದಲ್ಲಿ ವರದಿಗಳು ಸಿದ್ಧವಾಗುತ್ತಿವೆ,ಅದನ್ನು ಕೋರ್ಟಿಗೆ ನೀಡುತ್ತೇವೆ,ಚುನಾವಣೆ ವಿಚಾರದಲ್ಲಿ ನಾವು ಯಾವುತ್ತು ಹಿಂದೆ ಬಿದ್ದಿಲ್ಲ.
ಬಿಜೆಪಿಯವರು ಚುನಾವಣೆಗಳನ್ನ ಮುಂದುಡೂತ್ತಿದ್ದರು.ನಾವೂ ಹಾಗೆ ಮಾಡುವುದಿಲ್ಲ ನ್ಯಾಯಾಲಯದ ನಿರ್ದೇಶನದಂತೆ ನಡೆಯುತ್ತೇವೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಟ್ಟು ಚುನಾವಣಾ ಆಯುಕ್ತರ ನೇಮಕ ಮಾಡಲು ಹೊರಟಿರುವುದು ಒಂದು ಷಡ್ಯಂತ್ರ ಎಂದು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಹೊರಗಿಟ್ಟು ತಮಗೆ ಬೇಕಾದವರನ್ನು ಆಯುಕ್ತರನ್ನಾಗಿ ಮಾಡಿಕೊಳ್ಳಲು ಹೊರಟಿದ್ದಾರೆ,
ಐಪಿಸಿ ಸೇರಿದಂತೆ ಕಾನೂನುಗಳ ತಿದ್ದುಪಡಿ ಮಾಡಲು ಹೊರಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಐಪಿಸಿ 1861ರಲ್ಲಿ ರಚನೆಯಾದ ಕಾನೂನು. ಏನು ಮಾಡುತ್ತಾರೋ ನೋಡೋಣ ಎಂದು ಹೇಳಿದರು.
ಆಗಸ್ಟ್ 12 ನಿಮ್ಮ ಹುಟ್ಟಿದ ದಿನವಲ್ಲವೆ ಎಂದು ಶುಭಾಶಯ ಹೇಳಲು ಹೊರಟ ಮಾಧ್ಯಮ ಪ್ರತಿನಿಧಿಗಳಿಗೆ ಸಿದ್ದರಾಮಯ್ಯ ನಯವಾಗಿಯೇ ಬೇಡವೆಂದರು.
ಏಕೆಂದರೆ ಆಗಸ್ಟ್ 3, ಆಗಸ್ಟ್ 12 ಎರಡೂ ಕೂಡ ತಪ್ಪು ದಿನಾಂಕಗಳು. ಒಂದು ನನ್ನ ಮೇಷ್ಟ್ರು ಬರೆಸಿರೋದು.
ಇನ್ನೊಂದ ನಮ್ಮ ಅಪ್ಪ ಯಾವುದೋ ಒಂದು ಡೇಟ್ ಬರೆಸಿರೋದು.
ಹೀಗಾಗಿ ಎರಡೂ ದಿನಾಂಕವೂ ತಪ್ಪು, ನನಗೆ ಜನ್ಮ ದಿನಾಂಕ ಸರಿಯಾಗಿ ಗೊತ್ತಿಲ್ಲ, ಹಾಗಾಗಿ ನನಗೆ ಹುಟ್ಟುಹಬ್ಬ ಆಚರಣೆಗರ ಯಾವ ಆಸಕ್ತಿ ಇಲ್ಲ ಎಂದು ನಗುತ್ತಾ ಹೇಳಿದರು.