ಎಲ್ಲ ಪಂಗಡದವರು ಆಚರಿಸುವ ಪುರಾತನ ಹಬ್ಬ ದೀಪಾವಳಿ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ನಮ್ಮ ಭಾರತೀಯ ಪರಂಪರೆಯಲ್ಲಿ “ಅಸತೋಮಾ ಸದ್ಗಮಯಾ, ತಮಸೋ ಮಾ ಜ್ಯೋತಿರ್ಗಮಯ”, ಎಂಬ ಮಾತಿದೆ.

ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ.

ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುವ ಬೆಳಕಿನ ಹಬ್ಬ ದೀಪಾವಳಿ, ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬವಾಗಿದೆ.

ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬ. ಐದು ದಿನಗಳಲ್ಲಿ ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ , ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಆಚರಣೆಯಿರುತ್ತದೆ.

ಬೌದ್ಧರಲ್ಲಿರುವ ಹಲವಾರು ಪಂಗಡಗಳು ದೀಪಾವಳಿಯ ಮೂರು ದಿನ ಪೂಜೆ ಮಾಡುತ್ತಾರೆ. ಸಿಖ್ಖರು ಕೂಡ ಆಚರಿಸುತ್ತಾರೆ. ಜೈನರು, ಬೌದ್ಧರು ಸಿಖ್ಖರು, ಹಿಂದೂಗಳು, ಕಾಡಿನಿಂದ ಹಿಡಿದು ನಾಡಿನ ಜನರವರೆಗೂ ಆಚರಿಸುವ ಪುರಾತನ ಹಬ್ಬ.
ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು.

ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ ಮೂಲಕವೇ ಯಾವುದೇ ಕೆಲಸವನ್ನು ಆರಂಭಿಸುವುದು. ನಂದಾದೀಪವನ್ನು ಹಚ್ಚಿ ಪೂಜೆ ಪ್ರಾರಂಭಿಸುತ್ತೇವೆ. ದೀಪಗಳನ್ನೇ ಇಟ್ಟು ದೀಪದಿಂದಲೇ ಬೆಳಗುತ್ತೇವೆ.

ಈ ಹಬ್ಬವು ಅಸುರಿ ಗುಣಗಳ ಮೇಲೆ ದೇವತ್ವದ ವಿಜಯದ ಪ್ರತೀಕವಾಗಿದೆ. ದೀಪಾವಳಿಯಂದು ಎಲ್ಲರೂ ತಮ್ಮ-ತಮ್ಮ ಮನೆಗಳನ್ನು, ಗಲ್ಲಿಗಳನ್ನು, ಅಂಗಡಿಗಳನ್ನು ದೀಪಗಳಿಂದ ಬೆಳಗಿಸುತ್ತಾರೆ. ಇದರ ಜೊತೆ-ಜೊತೆಗೆ ಮನಸ್ಸಿನ ಅಜ್ಞಾನದ ಕತ್ತಲನ್ನು ದೂರಮಾಡುವಂತಹ ಜ್ಞಾನದೀಪವನ್ನು ಬೆಳಗಿಸಿಕೊಳ್ಳುವುದು ಸಹ ಅವಶ್ಯಕವಾಗಿದೆ.

ಇಲ್ಲಿ ಅಮಾವಾಸ್ಯೆಯು ಅಜ್ಞಾನ ಅಂಧಕಾರದ ಪ್ರತೀಕವಾಗಿದೆ. ಆಧ್ಯಾತ್ಮಿಕ ಭಾಷೆಯಲ್ಲಿ ಕತ್ತಲನ್ನು ಅಜ್ಞಾನವೆಂದು ಕರೆಯುತ್ತಾರೆ. ಹಾಗಾಗಿ ಭಕ್ತರು ಭಗವಂತನಲ್ಲಿ ಈ ರೀತಿ ಮೊರೆ ಇಡುತ್ತಾರೆ – ‘ದೇವರೇ, ನಮ್ಮನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗು, ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗು, ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದುಕೊಂಡು ಹೋಗು.’ ಯಾರು ಈ ದೀಪಾವಳಿಯಂದು ದೀಪದಾನ ಮಾಡುತ್ತಾರೆಯೋ ಅವರು ಅಕಾಲ-ಮೃತ್ಯುವಿನಿಂದ ದೂರವಾಗುತ್ತಾರೆ ಎಂಬ ಪ್ರತೀತಿಯೂ ಸಹ ಇದೆ. ದೀಪದಾನ ಮಾಡುವುದೆಂದರೆ ಜ್ಞಾನ-ದಾನ ಮಾಡುವುದು.

ಇಂದಿಗೂ ಸಹ ಸಾಧಕರು ದೀಪೆÇೀತ್ಸವದ ರಾತ್ರಿಯನ್ನು ಸಾಧನೆಯ ದೃಷ್ಟಿಕೋನದಿಂದ ‘ಮಹಾರಾತ್ರಿ’ಯೆಂದು ಕಾಣುತ್ತಾರೆ.

ಅವರ ಪ್ರಕಾರ ಈ ರಾತ್ರಿಯು ಸಾಧಕರಿಗೆ ಇನ್ನೂ ಹೆಚ್ಚಿನ ಶಕ್ತಿ ಮತ್ತು ಯುಕ್ತಿಯನ್ನು ತಂದುಕೊಡುತ್ತದೆ. ಆದ್ದರಿಂದ ಸಾಧಕರು ಈ ರಾತ್ರಿಯಂದು ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ. ಈ ಮಾನ್ಯತೆಯು ಕಲಿಯುಗದ ಘೋರ ಅಜ್ಞಾನರಾತ್ರಿಯ ಪ್ರತೀಕವಾಗಿದೆ. ಕಲಿಯುಗದ ಈ ತಮೋಪ್ರಧಾನ ಅಂತಿಮ ಚರಣದಲ್ಲಿ ಯಾರು ಪರಮಾತ್ಮನ ಮಾರ್ಗದಲ್ಲಿ ಅವನು ಹೇಳಿದಂತೆ ನಡೆಯುತ್ತಾರೆಯೋ ಅವರಿಗೆ ಸರ್ವಸಿದ್ಧಿಗಳು ದೊರೆಯುತ್ತವೆ. ದೀಪ ಹೇಗೆ ತನ್ನನ್ನು ತಾನು ಉರಿದುಕೊಂಡು ಸುತ್ತಲಿಗೆ ಬೆಳಕು ಕೊಡುತ್ತದೋ ಮನುಷ್ಯ ಕೂಡ ತಾನು ತ್ಯಾಗ ಮಾಡಿ ಸುತ್ತಲಿನವರ ಬಾಳಿಗೆ ಬೆಳಕಾಗಬೇಕು.