ಗಡಿ ಜಿಲ್ಲೆ ಚಾಮರಾಜನಗರ ಸ್ತಬ್ಧ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವ ಹಿನ್ನಲೆಯಲ್ಲಿ ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ತಮಿಳುನಾಡು ಗಡಿಭಾಗ ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.

ಚಾಮರಾಜನಗರ ಜಿಲ್ಲೆಯ ಐದು ತಾಲ್ಲೂಕುಗಳಲ್ಲೂ ಬೆಳಗ್ಗೆಯಿಂದಲೇ ಕನ್ನಡ ಪರ ಹೋರಾಟಗಾರರು, ರೈತರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ರಸ್ತೆಗಿಳಿದರು.

ಹೆದ್ದಾರಿ ತಡೆಯೊಡ್ಡಿ,ಉರುಳು ಸೇವೆ ಮಾಡಿ ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರ, ತಮಿಳುನಾಡು ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಚಾಮರಾಜನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಮುಂಭಾಗ ಹೋರಾಟಗಾರರು ಧರಣಿ ನಡೆಸಿದರೆ, ಕಾವೇರಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪಾದಯಾತ್ರೆ ಮೂಲಕ ಕಿವಿಯಲ್ಲಿ ಗುಲಾಬಿ ಹೂವಿಟ್ಟುಕೊಂಡು ಬಂದ್ ಸಹಕರಿಸುವಂತೆ ಸಾರ್ವಜನಿಕರಲ್ಲಿ ಹಾಗೂ ವರ್ತಕರಲ್ಲಿ ಮನವಿ ಮಾಡುತ್ತಿದ್ದು‌ ಕಂಡು‌ ಬಂದಿತು.

ಶ್ರೀ ಭುವನೇಶ್ವರಿ ವೃತ್ತದ ಮೂಲಕ ತಮಿಳುನಾಡಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟಗಾರರು ಅರೆ ಬೆತ್ತಲೆ ಉರುಳು ಸೇವೆ ಮಾಡಿದರು.

ಕೆ.ಎಸ್.ಆರ್. ಟಿ.ಸಿ ಬಸ್ ಗಳು ಸಂಚರಿಸದೆ ಬಸ್ ನಿಲ್ದಾಣದಲ್ಲೇ ಇದ್ದವು.ಬಿಗಿ ಪೊಲೀಸ್ ಪಹರೆ ಮಾಡಲಾಗಿತ್ತು.

ಅಂತರಾಜ್ಯ ಗಡಿಯಲ್ಲಿ ಭದ್ರತೆ:

ಕರ್ನಾಟಕ ತಮಿಳುನಾಡು ಗಡಿ ಭಾಗವಾಗಿರುವ ಕಾರ್ಯಪಾಳ್ಯಂ ಬಳಿ ತಮಿಳುನಾಡು ಪೊಲೀಸರನ್ನು ನಿಯೋಜಿಸಲಾಗಿದ್ದು, ಗಡಿಯಿಂದ ಕರ್ನಾಟಕದೊಳಗೆ ಯಾವುದೇ ವಾಹನವನ್ನು ಬಿಡದೇ ತಮಿಳುನಾಡು ಪೊಲೀಸರು ಕಾವಲು ಕಾಯುತ್ತಿದ್ದರು.

ತಮಿಳುನಾಡಿನಿಂದ ತಾಳವಾಡಿಗೆ ಹೋಗುವ ವಾಹನಗಳನ್ನು ದಿಂಬಂ ತಲೈಮಲೆ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.

ಚಾಮರಾಜನಗರ ತಾಲ್ಲೂಕಿನ ಪುಣಜನೂರು ಚಕ್ ಪೋಸ್ಟ್ ಬಳಿ ಕರ್ನಾಟಕ ಪೊಲೀಸರನ್ನು ನಿಯೋಜನೆ ಮಾಡಿದ್ದರಿಂದ ಎರಡೂ ರಾಜ್ಯಗಳ ನಡುವೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಅಂಗಡಿಗಳು ಬಂದ್: ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು.

ಜನಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಚಿತ್ರಮಂದಿರ,ಪೆಟ್ರೊಲ್ ಬಂಕ್, ಆಟೊ, ,ಬಸ್ ಚಾಲಕರು ಮಾಲೀಕರು ಬಂದ್ ಗೆ ಕೈ ಜೋಡಿಸಿದ್ದರು.

ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು,ಹಾಗಾಗಿ ಪೋಷಕರಿಗೆ ಆತಂಕವಿರಲಿಲ್ಲ.

ವಿವಿದ ಪ್ರಗತಿ ಪರ ಸಂಘಟನೆಗಳು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭುವನೇಶ್ವರಿ ವೃತ್ತದಲ್ಲಿ ಕುಳಿತು ಸರ್ಕಾರದ ವಿರುದ್ದ ದಿಕ್ಕಾರದ ಆಕ್ರೋಶ ವ್ಯಕ್ತಪಡಿಸಿದರು

ಬಣ್ಣಾರಿ ಚಕ್ ಪೋಸ್ಟ್ ನಲ್ಲೇ ವಾಹನಗಳಿಗೆ ತಡೆ: ತಮಿಳುನಾಡಿನ ಬಣ್ಣಾರಿ ಚಕ್ ಪೋಸ್ಟ್ ನಲ್ಲಿ ಕರ್ನಾಟಕಕ್ಕೆ ತೆರಳುವ ವಾಹನಗಳಿಗೆ ತಡೆ ಮಾಡಿ, ತಮಿಳುನಾಡು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು

ದಿಂಬಂ ತಲೈಮಲೆ ಮೂಲಕ ತಾಳವಾಡಿಯತ್ತ ಸಾಗುವ ವಾಹನಗಳಿಗೆ ಮಾತ್ರ ಬಣ್ಣಾರಿ ಚಕ್ ಪೋಸ್ಟ್ ನಲ್ಲಿ ಅವಕಾಶ ನೀಡಲಾಗಿತ್ತು. ಇದರಿಂದಾಗಿ ಬಣ್ಣಾರಿ ಚಕ್ ಪೋಸ್ಟ್ ನಲ್ಲಿ ಕಿಲೋ ಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.