ಗಂಗಾ ಆರತಿ ಮಾದರಿಯಲ್ಲೇ
ಶ್ರೀರಂಗಪಟ್ಟಣದಲ್ಲಿ ಕಾವೇರಿ ಮಾತೆಗೆ ಆರತಿ

ಶ್ರೀರಂಗಪಟ್ಟಣ: ಗಂಗಾ ಆರತಿ ಮಾದರಿಯಲ್ಲೇ ತಾಯಿ ಕಾವೇರಿ ಮಾತಿಗೆ ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಆರತಿ ಮಾಡಿ ಪೂಜೆ ಸಲ್ಲಿಸಲಾಯಿತು.

ಮೊದಲು ಕಾವೇರಿ ಮಾತೆಗೆ ಸಂಕಲ್ಪ ಮಾಡಿ ಆರತಿಯನ್ನು ಬೆಳಗಲಾಯಿತು.

ಕಳೆದ ವಾರ ಯುವ ಬ್ರಿಗೇಡ್ ಸದಸ್ಯ ಕಾವೇರಿ ನದಿಯಲ್ಲಿದ್ದ ಬಟ್ಟೆಬರೆ, ಮಡಿಕೆ ಕುಡಿಕೆ, ದೇವರ ಪೋಟೋ, ಪ್ಲಾಸ್ಟಿಕ್ ಚೀಲಗಳು ಇತ್ಯಾದಿ ತ್ಯಾಜ್ಯಗಳನ್ನು ಟನ್ ಗಟ್ಟಲೆ ನದಿಯಿಂದ ತೆಗೆದು ಸ್ವಚ್ಛ ಪಡಿಸಿದ್ದರು.

ಸ್ವಚ್ಛಗೊಂಡ ಕಾವೇರಿ ನದಿಯ ಮಧ್ಯದಲ್ಲಿ ವೇದಿಕೆ ನಿರ್ಮಾಣ ಮಾಡಿ, ಉತ್ತರದ ಗಂಗಾ ಆರತಿ ಮಾದರಿಯಲ್ಲೇ ಪುಣ್ಯದಿನವಾದ ಭಾನುವಾರ ರಾತ್ರಿ ಪೂಜೆ ಮಾಡಲಾಯಿತು.

ತಲಕಾವೇರಿಯಲ್ಲಿ ತೀರ್ಥೋದ್ಭವದ ರೂಪದಲ್ಲಿ ಪ್ರಕಟಗೊಳ್ಳುವ ಕಾವೇರಿ ಮಾತೆಗೆ ಆದಿರಂಗನ ಕ್ಷೇತ್ರವಾದ ಶ್ರೀರಂಗಪಟ್ಟಣದಲ್ಲಿ ಅದ್ದೂರಿ ಆರತಿ ಮತ್ತು ಲಕ್ಷ ದೀಪೋತ್ಸವ ಮಾಡಿ ಭಕ್ತರು ಪುನೀತರಾದರು.

ರೈತಾಪಿ ವರ್ಗದವರಿಗೆ ಮತ್ತು ಈ ಭಾಗದ ಜನರಿಗೆ ಸದಾ ತಂಪು ಎರೆದು ಜನರ ಜೀವನಾಡಿಯಾದ ಮಹಾ ಪವಿತ್ರ ನದಿಗೆ ತುಲಾಸಂಕ್ರಮಣದ ಅಂಗವಾಗಿ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ, ಶ್ರೀರಂಗಪಟ್ಟಣದ ಖ್ಯಾತ ಜ್ಯೋತಿಷಿಗಳಾದ ವೇದ ಬ್ರಹ್ಮಶ್ರೀ ಡಾ. ಭಾನುಪ್ರಕಾಶ್ ಶರ್ಮಾ, ಪಶ್ಚಿಮ ವಾಹಿನಿಯ ಚಂದ್ರವನ ಆಶ್ರಮದ ಪೀಠಾಧಿಪತಿಗಳಾದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಮಹಾ ಸ್ವಾಮಿಗಳ ಅವರ ನೇತೃತ್ವದಲ್ಲಿ ಗಂಗಾ ಆರತಿಯು ಜರುಗಿತು.

ಗಂಗಾ ಆರತಿಯನ್ನು ಶ್ರೀರಂಗಪಟ್ಟಣ ಸುತ್ತಮುತ್ತಲಿನ ಜನತೆ ಕಣ್ತುಂಬಿಕೊಂಡು ಆನಂದಿಸಿದರು.

ನಾವು ನದಿಯನ್ನು ಮಲ್ಲಿನ ಮಾಡಿದರೆ ನಮಗೆ ನಾವು ಮಾಡಿಕೊಂಡಂತ ಮಹಾ ಮೋಸ ನಾವು ಯಾವ ರೀತಿ ತಾಯಿಯನ್ನು ಪೋಷಿಸುತ್ತೇವೆಯೋ ನದಿಯನ್ನು ಕೂಡ ನಮ್ಮ ತಾಯಿ ಎಂದು ತಿಳಿದು ಪೋಷಿಸಬೇಕು ಎಂದು ಈ ವೇಳೆ ಗಣ್ಯರು ಸಲಹೆ ನೀಡಿದರು.