ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸಿನ ಕೂಸು
ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಕ್ಟೋಬರ್ 28ರಂದು ಬಿಡುಗಡೆ ಮಾಡುವುದಾಗಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಅಪ್ಪು ಅವರ ಕೊನೆಯ ಚಿತ್ರ ಇದು.
ಅವರು ಅವರಾಗಿಯೇ ಕಾಣಿಸಿಕೊಂಡಿರುವ ವಿಶಿಷ್ಟ ಕಥನ,ಕರ್ನಾಟಕದ ಅದ್ಭುತ ಜಗತ್ತನ್ನು ಅನ್ವೇಷಿಸುವ ಪಯಣ, ಅವರಿಗೆ ಅಪಾರ ಪ್ರೀತಿಯನ್ನು ಕೊಟ್ಟ ನಾಡಿಗೆ ಅವರ ಪ್ರೀತಿಯ ಕಾಣಿಕೆ ಇದು ಎಂದು ಅಶ್ವಿನಿ ಬರೆದಿದ್ದಾರೆ.
ಈ ಸಾಕ್ಷ್ಯ ಚಿತ್ರದ ಬಗ್ಗೆ ಪುನೀತ್ ರಾಜ್ ಕುಮಾರ್ ಅಪಾರ ಕನಸು ಕಟ್ಟಿಕೊಂಡಿದ್ದರು. ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಸುಮ್ಮನೆ ಮನೆಯಲ್ಲಿ ಕೂರದೇ ಪುನೀತ್ ಅವರು ಕಾಡು ಮೇಡು ಸುತ್ತಿ ಶೂಟಿಂಗ್ ಮಾಡಿರುವ ಸಿನಿಮಾವಿದು.
ನಮ್ಮ ನಾಡಿನ ಕಾಡಿನ ಸಂಪತ್ತನ್ನು ಈ ಸಾಕ್ಷ್ಯ ಚಿತ್ರದಲ್ಲಿ ಪರಿಚಯಿಸುವ ಕೆಲಸ ಮಾಡಿದ್ದಾರಂತೆ ಪುನೀತ್ ರಾಜ್ ಕುಮಾರ್.
ಅಂದುಕೊಂಡಂತೆ ಆಗಿದ್ದರೆ, ಅಪ್ಪು ಬದುಕಿದ್ದಾಗಲೇ ಈ ಸಿನಿಮಾದ ಟೀಸರ್ ರಿಲೀಸ್ ಆಗಬೇಕಿತ್ತು. ಅದಕ್ಕೆ ಸಮಯವನ್ನೂ ನಿಗಧಿ ಮಾಡಿದ್ದರು.
ಆದರೆ ಅವರು ಅಷ್ಟರಲ್ಲಿ ನಿಧನರಾದರು. ಹಾಗಾಗಿ ಅವರ ಕನಸಿನ ಕೂಸನ್ನು ಅದ್ಧೂರಿಯಾಗಿಯೇ ರಿಲೀಸ್ ಮಾಡಬೇಕು ಎನ್ನುವುದು ಅಶ್ವಿನಿ ಅವರ ಕನಸಾಗಿದೆ. ಹೀಗಾಗಿ ಥಿಯೇಟರ್ ನಲ್ಲೇ ಈ ಸಾಕ್ಷ್ಯ ಚಿತ್ರ ಬಿಡುಗಡೆ ಆಗುತ್ತಿದೆ.