ಮೈಸೂರು: ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತೀವ್ರಗತಿಯಲ್ಲಿ ತನಿಖೆ ಮುಂದುವರಿಸಿದ್ದು, ಐವರು ರೇಪಿಸ್ಟುಗಳಲ್ಲಿ ಒಬ್ಬ ನಟೋರಿಯಸ್ ಕಾಮುಕ ಇದ್ದಾನೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ತಮಿಳುನಾಡಿನ ತಿರುಪೂರ್ʼನಿಂದ ಬಂಧಿಸಿ ಕರೆ ತಂದ ಐವರು ಆರೋಪಿಗಳನ್ನು ಡ್ರಿಲ್ ಮಾಡುತ್ತಿರುವ ಪೊಲೀಸರಿಗೆ ರೇಪಿಸ್ಟುಗಳ ಕರಾಳ ಮುಖ ದರ್ಶನವಾಗುತ್ತಿದೆ. ಬಾಲಾಪರಾಧಿ ಸೇರಿ ಐವರನ್ನೂ ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಓರ್ವ ಆರೋಪಿಯು ಜೇಬಿನಲ್ಲೇ ಕಾಂಡೋಮ್ ಇಟ್ಟುಕೊಂಡು ತಿರುಗಾಡುತ್ತಿದ್ದ ಸ್ಫೋಟಕ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಈ ನಟೋರಿಯಸ್ ಕಾಮುಕ ಯಾವಾಗಲೂ ಜೇಬಿನಲ್ಲಿಯೇ ಕಾಂಡೋಮ್ ಇಟ್ಟುಕೊಂಡೇ ತಿರುಗಾಡುತ್ತಿದ್ದ ಎನ್ನಲಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಉಳಿದ ಪಾತಕಿಗಳು ಹಣಕ್ಕೆ ಬೇಡಿಕೆ ಇಟ್ಟು ಸಂತ್ರಸ್ಥೆಯ ಗೆಳೆಯನ ಮೇಲೆ ದಾಳಿ ನಡೆಸುತ್ತಿದ್ದರೆ, ಈ ಕಾಮುಕ ಮಾತ್ರ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎನ್ನಲಾಗಿದೆ.
ಪ್ರತಿ ತಿಂಗಳಿಗೊಮ್ಮೆ ಮೈಸೂರಿಗೆ ಬಂದು ಹೋಗುತ್ತಿದ್ದ ಈ ನಟೋರಿಯಸ್ ಕಾಮುಕ ಇಂಥ ಕೃತ್ಯಗಳನ್ನು ಎಸಗಿರುವುದು ಗೊತ್ತಾಗಿದೆ ಎನ್ನಲಾಗಿದೆ. ಅಲ್ಲದೆ, ದುಷ್ಕೃತ್ಯ ನಡೆದ ಸ್ಥಳದಲ್ಲಿ ತನಿಖಾ ತಂಡಕ್ಕೆ ಸಿಕ್ಕಿದ್ದು ಇವನೇ ಬಳಸಿ ಬಿಸಾಡಿದ ಕಾಂಡೋಮ್ ಎಂಬ ಮಾಹಿತಿಯೂ ಪೊಲೀಸರಿಗೆ ಸಿಕ್ಕಿದೆ ಎಂದು ಹೇಳಲಾಗಿದೆ.
ವಿಚಾರಣೆ ನಡೆಸಿದಂತೆಲ್ಲ ಬೆಚ್ಚಿಬೀಳುವ ಸಂಗತಿಗಳು ತನಿಖಾ ತಂಡಕ್ಕೆ ಸಿಗುತಿದ್ದು, ಯಾರೂ ಬಾರದ ನಿರ್ಜನ ಪ್ರದೇಶಗಳನ್ನೇ ದುಷ್ಕೃತ್ಯ ಎಸಗಲು ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಜತೆಗೆ; ಈ ನೀಚ ಕೃತ್ಯ ಎಸಗುವುದಕ್ಕೆ ಮುನ್ನವೂ ಇವರು ಹಲವರಿಗೆ ಬೆದರಿಸಿ ಹಣ ದೋಚಿದ್ದಾರೆನ್ನಲಾಗಿದೆ.
ಆದರೆ, ಮೈಸೂರಿನಲ್ಲಿ ಈ ಘಟನೆಗಳ ಬಗ್ಗೆ ಯಾರೂ ಈವರೆಗೂ ಠಾಣೆಗಳಲ್ಲಿ ದೂರುಗಳನ್ನು ದಾಖಲು ಮಾಡಿಲ್ಲ. ಹೀಗಾಗಿ ಮತ್ತಷ್ಟು ಧೈರ್ಯಗೊಂಡು ಇಂಥ ಕೃತ್ಯ ಎಸಗಿದ್ದಾರೆಂದು ಹೇಳಲಾಗಿದೆ.ತಮಿಳುನಾಡು ತಿರುಪೂರ್ʼನ ನಿವಾಸಿಗಳಾದ ಈ ಕಿರಾತಕರನ್ನು ನಿನ್ನೆ ಬೆಳಗಿನ ಜಾವ ಪೊಲೀಸರು ಬಲೆಗೆ ಕೆಡವಿಕೊಂಡಿದ್ದರು. ಮೈಸೂರಿನಲ್ಲಿ ಅವರ ವಿಚಾರಣೆ ನಡೆಯುತ್ತಿದೆ.