ಗಣರಾಜ್ಯೋತ್ಸವ ದಿನ ಮೋದಿ ಸೇರಿ ಗಣ್ಯರ ಹತ್ಯೆಗೆ ಉಗ್ರರ ಸಂಚು

ನವದೆಹಲಿ: ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಏಷ್ಯಾ ಖಂಡದ 5 ರಾಷ್ಟ್ರಗಳ ಗಣ್ಯರನ್ನು ಹತ್ಯೆ ಮಾಡಲು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ.

75ನೇ ವರ್ಷದ ಗಣರಾಜ್ಯೋತ್ಸವದ ವೇಳೆ ಪ್ರಧಾನಿ ನರೇಂದ್ರ ಮೋದಿ, ಖಜಕಿಸ್ತಾನ್, ಕಿಜಕಿಸ್ತಾನ್, ತುರ್ಕಿಸ್ತಾನ್, ತಜಕಿಸ್ತಾನ್ ಹಾಗೂ ಉಬೇಕಿಸ್ತಾನ್ ದೇಶಗಳ ಗಣ್ಯ ಅತಿಥಿಗಳನ್ನು ಹತ್ಯೆ ಮಾಡುವ ಹುನ್ನಾರವನ್ನು ಉಗ್ರರು ಮಾಡಿದ್ದಾರೆ.

ಸ್ವಾತಂತ್ರೋತ್ಸವದ ಆಜಾದಿ ಕಾ ಅಮೃತ ಮಹೋತ್ಸವದ ವೇಳೆ ನಡೆಯುವ ಗಣರಾಜ್ಯೋತ್ಸವಕ್ಕೆ ಏಷ್ಯಾ ಖಂಡದ ಈ ಐದು ದೇಶಗಳ ಪ್ರಮುಖರನ್ನು ಅತಿಥಿಗಳನ್ನಾಗಿ ಆಹ್ವಾನಿಸುವ ಸಾಧ್ಯತೆಯಿದೆ.

ಈ ದೇಶಗಳ ನೀತಿಗಳ ಜೊತೆ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಉಗ್ರ ಸಂಘಟನೆಗಳು ಕಡು ವಿರೋಧ ಹೊಂದಿವೆ. ಜೊತೆಗೆ ಭಾರತವನ್ನು ಉಗ್ರ ಸಂಘಟನೆಗಳು ತಮ್ಮ ಎದುರಾಳಿ ಎಂದು ಭಾವಿಸಿವೆ. ಹೀಗಾಗಿ ಭಾರೀ ವಿಧ್ವಂಸಕ ಕೃತ ನಡೆಸಲು ಸಂಚು ರೂಪಿಸಿವೆ ಎಂದು ಕೇಂದ್ರ ಗುಪ್ತದಳ ರಕ್ಷಣಾ ಪಡೆಗಳಿಗೆ ಮಾಹಿತಿ ನೀಡಿದೆ.

ಈ ಸಂಚಿನ ಹಿಂದೆ ಲಷ್ಕರ್-ಇ-ತೊಯ್ಬಾ, ಜೈಷ್-ಇ-ಮೊಹಮ್ಮದ್, ಹರ್ಕತ್-ಉಲ್ -ಮುಜಾಯಿದ್ದೀನ್ ಸಂಘಟನೆಗಳ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಕಲಿಸ್ತಾನದ ಪರವಾಗಿ ಕೆಲಸ ಮಾಡುವ ಕೆಲವು ಗುಂಪುಗಳು ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ಕೈ ಜೋಡಿಸಿದ್ದು, ಸಂಚಿಗೆ ಸಹಕಾರ ನೀಡುತ್ತಿವೆ. ಪಂಜಾಬ್ ಸೇರಿದಂತೆ ಇತರ ರಾಜ್ಯಗಳಲ್ಲೂ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಲಾಗಿದೆ.