ಗೌರಿಬಿದನೂರು-ಚಿಕ್ಕಬಳ್ಳಾಪುರ ಹೆದ್ದಾರಿ ಕಾಮಗಾರಿ ಮೇ ಒಳಗೆ ಪೂರ್ಣಗೊಳಿಸಿ -ಸಚಿವ ಡಾ. ಸುಧಾಕರ್

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ 234ರ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರವರೆಗಿನ 50.66 ಕಿ.ಮೀ. ಉದ್ದದ ರಸ್ತೆ ಕಾಮಗಾರಿಯನ್ನು 2021ರ ಮೇ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವ ಡಾ. ಕೆ. ಸುಧಾಕರ್, ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಕಾಮಗಾರಿಗೆ ಚುರುಕು ನೀಡುವಂತೆ ಸೂಚಿಸಿದರು.
106.50 ಕೋಟಿ ರೂ. ಮೊತ್ತದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸೆಲ್ ಅಸೈನಿಯ ಎಂಬ ಕಂಪನಿಗೆ ಗುತ್ತಿಗೆ ನೀಡಿದ್ದು, 2015ರ ಜುಲೈನಲ್ಲಿ ಕಾಮಗಾರಿ ಆರಂಭವಾಗಿ 2017ರ ಜುಲೈನಲ್ಲಿ ಪೂರ್ಣಗೊಳ್ಳಬೇಕಿತ್ತು. ಈ ಕಂಪನಿಯು ಕಾಮಗಾರಿಯನ್ನು ಅಸಮರ್ಪಕವಾಗಿ ಮಾಡಿ 2018ರ ಜುಲೈನಲ್ಲಿ ಕೈ ಬಿಟ್ಟಿತ್ತು. 2018ರ ಜುಲೈನಿಂದ 2019ರ ವರೆಗೆ ರಸ್ತೆ ಕಾಮಗಾರಿ ನಡೆದಿರಲಿಲ್ಲ. ಇದರಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರು ಸಂಚರಿಸಲು ಸಾಧ್ಯವಾಗದೆ ಪರದಾಡುತ್ತಿದ್ದರು. ಈ ಭಾಗದ ರೈತರು, ಕಾರ್ಮಿಕರು ನಿತ್ಯದ ಚಟುವಟಿಕೆಗಳಿಗೆ ಸಂಚಾರ ಮಾಡಬೇಕಿದ್ದು, ಅಪೂರ್ಣ ಕಾಮಗಾರಿಯಿಂದಾಗಿ ಸಂಚಾರ ಕಷ್ಟವಾಗಿತ್ತು.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, 2020ರ ಫೆಬ್ರವರಿಯಲ್ಲಿ ಉಪ ಗುತ್ತಿಗೆದಾರರನ್ನು ನಿಯೋಜಿಸುವಂತೆ ಕ್ರಮ ಕೈಗೊಂಡಿದ್ದರು. ನಂತರ 2020ರ ಜೂನ್ ನಲ್ಲಿ ಕಾಮಗಾರಿ ಪುನರಾರಂಭಗೊಂಡು ಮಂದಗತಿಯಲ್ಲಿ ನಡೆಯುತ್ತಿದೆ.
ಇದಲ್ಲದೆ, ಚಿಕ್ಕಬಳ್ಳಾಪುರ ನಗರದ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ನಿರ್ಮಿಸಬೇಕು. ಹಾಗೆಯೇ ಎರಡೂ ಬದಿ ಚರಂಡಿ ನಿರ್ಮಿಸಬೇಕು. ಬಾಕಿ ಉಳಿದ ಯಾವುದೇ ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಮುಖ್ಯ ಎಂಜಿನಿಯರ್ ಗೋವಿಂದರಾಜು, ಕೇಂದ್ರ ಭೂ ಸಾರಿಗೆಯ ಮುಖ್ಯ ಎಂಜಿನಿಯರ್ ವಿಜಯಕುಮಾರ್, ಅಧೀಕ್ಷಕ ಎಂಜಿನಿಯರ್ ಸದಾನಂದ ಬಾಬು, ರಾಷ್ಟ್ರೀಯ ಹೆದ್ದಾರಿಯ ಅಧೀಕ್ಷಕ ಎಂಜಿನಿಯರ್ ಸತೀಶ್, ಕಾರ್ಯನಿರ್ವಾಹಕ ಎಂಜಿನಿಯರ್ ಹೇಮಲತ ಪರಿಶೀಲನೆ ವೇಳೆ ಹಾಜರಿದ್ದರು.