ಹಾಡುಹಗಲೆ ಸಿನಿಮೀಯ ಮಾದರಿಯಲ್ಲಿ ದರೋಡೆ: ಸ್ಥಳಕ್ಕೆ ಎಸ್ಪಿ,ಐಜಿಪಿ ಭೇಟಿ

(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಹಾಡುಹಗಲೆ ಸಿನಿಮೀಯ ಮಾದರಿಯಲ್ಲಿ ಚಿನ್ನದ ವ್ಯಾಪಾರಿಯನ್ನು ದರೋಡೆ ಮಾಡಲಾಗಿದ್ದು ನಗರದಲ್ಲಿ ಆತಂಕ ಮನೆ ಮಾಡಿದೆ.

ಈ ಸಂಬಂಧ ಕೆಲವರನ್ನು ಬಂಧಿಸಿದ್ದು,ಮತ್ತೆ ಕೆಲವರಿಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ಶೋಧ ಕಾರ್ಯ ನಡೆಸಿದೆ.

ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಕೆಇಬಿ ಕಚೇರಿ ಮುಂಭಾಗದ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ಮೈಸೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಚಿನ್ನದ ವ್ಯಾಪಾರಿ ಕೇರಳದ ಕಲ್ಪೇಟ ಮೂಲದ ಸುಖದೇವ್ ಎಂಬುವರ ಕಾರನ್ನು ಅಡ್ಡಗಟ್ಟಿ ನಡು ರಸ್ತೆಯಲ್ಲೇ ಈ ಕೃತ್ಯ ಎಸಗಿದ್ದಾರೆ‌.

ಈ ವ್ಯಾಪಾರಿಯು ಮೈಸೂರಿನಲ್ಲಿ ಚಿನ್ನ ಮಾರಾಟ ಮಾಡಿ ಚಾಲಕ ಅಶ್ರಪ್ ಜೊತೆಗೆ ಹೊಂಡಾ ಸಿಟಿ ಕಾರಲ್ಲಿ ಕೇರಳಕ್ಕೆ ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಹಿಂದಿನಿಂದ ಎರಡು ಕಾರುಗಳಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ಎಂಟರಿಂದ ಹತ್ತು ಜನ ದರೋಡೆ ಕೋರರ ಗುಂಪು ಸುಖದೇವ್ ಕಾರನ್ನು ಅಡ್ಡಗಟ್ಟಿ ಚಾಲಕನ ಥಳಿಸಿ ಹಣ ಹಾಗೂ ಚಿನ್ನದ ವ್ಯಾಪಾರಿ ಸಮೇತ
ಪರಾರಿಯಾಗಿದ್ದಾರೆ.

ದರೋಡೆಕೋರರು ಪೊಲೀಸರ ದಿಕ್ಕು ತಪ್ಪಿಸಲು ಮೂರು ಕಾರುಗಳನ್ನು ಒಂದೊಂದು ದಿಕ್ಕಿಗೆ ಚಾಲನೆ ಮಾಡಿಕೊಂಡು ಹೋಗಿದ್ದಾರೆ.

ಒಂದು ಕಾರು ಸೋಮಹಳ್ಳಿ ಬಳಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಲ್ಲಿಗೆ ಗುದ್ದಿದೆ. ಈ ವೇಳೆ ಕಾರಿನಿಂದ ಇಳಿದ ದರೋಡೆಕೋರರು ಪರಾರಿಯಾಗಲು ಯತ್ನಿಸಿದ್ದನ್ನ ಮನಗಂಡು ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಈಗಾಗಲೇ ಬೇಗೂರು ಠಾಣೆ ಪೊಲೀಸರು ಪ್ರಕರಣ ಗಂಭೀರತೆಯನ್ನು ಅರಿತು ತನಿಖೆ ಚುರುಕುಗೊಳಿಸಿ ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ.

ನಾಪತ್ತೆಯಾಗಿರುವವರಿಗಾಗಿ ಶೋಧ ನಡೆಸಿದ್ದಾರೆ. ಕೇರಳ ನೋಂದಣಿಯ ಇನೋವಾ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಆದರೆ ಚಿನ್ನದ ವ್ಯಾಪಾರಿ ಸುಖದೇವ್ ಸಂಚರಿಸುತ್ತಿದ್ದ ಹೊಂಡಾ ಸಿಟಿ ಕಾರು ಹಾಗೂ ಹಣ ಇನ್ನೂ ಪತ್ತೆಯಾಗಿಲ್ಲ.

ದರೋಡೆ ಪ್ರಕರಣ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚೆತ್ತು ಚಾಮರಾಜನಗರ, ಗುಂಡ್ಲುಪೇಟೆ, ಬೇಗೂರು, ತೆರಕಣಾಂಬಿ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಎಲ್ಲಾ ಕಾರುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ದರೋಡ ಘಟನೆ ಮಾಹಿತಿ ತಿಳಿದ ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೋ ಹಾಗು ಐಜಿಪಿ ಬೋರಲಿಂಗಯ್ಯ ಠಾಣೆ ಹಾಗು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆ ಸಂಬಂಧ ತನಿಖೆ ಚುರುಕುಗೊಳಿಸಿ ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ: ಘಟನೆ ಸಂಬಂದ ಪರಿಶೀಲನೆ ಮಾಡಿ ಅದಿಕಾರಿಗಳ ಜೊತೆ ಚರ್ಚಿಸಿ ಕ್ರಮ ವಹಿಸಲಾಗಿದೆ,ವಿಚಾರಣೆ ಪ್ರಗತಿಯಲ್ಲಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.