ಹಲವು ವರ್ಷಗಳ ನಂತರ ಉತ್ತರ ಕರ್ನಾಟಕಕ್ಕೆ ಸಿಎಂ ಪಟ್ಟ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಜನತಾದಳದಿಂದ ಸೋಮಪ್ಪ ರಾಯಪ್ಪ ಬೊಮ್ಮಾಯಿ (ಎಸ್ .ಆರ್ . ಬೊಮ್ಮಾಯಿ) ಅವರು ಮುಖ್ಯಮಂತ್ರಿಯಾಗಿದ್ದ (1988-89) 32-33 ವರ್ಷಗಳ ನಂತರ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.

61 ವರ್ಷ ಬೊಮ್ಮಾಯಿ ಅವರು ಈಗ ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಕ್ಕೆ ಸೇರಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಪುತ್ರ. 28 ಜನವರಿ1960ರಂದು ಜನಿಸಿದ ಬೊಮ್ಮಾಯಿವರು, ಎಸ್.ಆರ್ ಬೊಮ್ಮಾಯಿ-ಗಂಗಮ್ಮ ದಂಪತಿಗಳ ನಾಲ್ಕು ಮಕ್ಕಳಲ್ಲಿ (ಇಬ್ಬರು ಗಂಡು, ಇಬ್ಬರು ಹೆಣ್ಣು) ಹಿರಿಯ ಮಗನೇ ಬಸವರಾಜ್ ಬೊಮ್ಮಾಯಿ ಪತ್ನಿ ಹೆಸರು ಚೆನ್ನಮ್ಮ ಹಾಗೂ ಭರತ, ಆದಿತಿ ಇಬ್ಬರು ಮಕ್ಕಳಿದ್ದಾರೆ. ಅವರ ವಿದ್ಯಾಭ್ಯಾಸವು ರೋಟರಿ ಇಂಗ್ಲೀಷ ಮಾದ್ಯಮ ಶಾಲೆ, ದೇಶಪಾಂಡೆ ನಗರ, ಹುಬ್ಬಳ್ಳಿ. ರೋಟರಿ ಇಂಗ್ಲೀಷ ಮಾದ್ಯಮ ಶಾಲೆ, ದೇಶಪಾಂಡೆ ನಗರ, ಹುಬ್ಬಳ್ಳಿ. ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ಪಿ.ಯು.ಸಿ , ಬಿ.ವಿ ಬೊಮ್ಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದರು. ತದನಂತರ 1983 ರಿಂದ 1985 ರವರೆಗೆ ಪುಣೆ ಟೆಲ್ಕೋ ಕಂಪನಿಯಲ್ಲಿ ಎರಡು ವರ್ಷಗಳ ತಾಂತ್ರಿಕ ತರಬೇತಿ ಪಡೆದು ಕೈಗಾರಿಕಾ ಉದ್ಯಮಿಯಾದರು,ಅವರು ಮೂಲತಃ ವೃತ್ತಿಯಲ್ಲಿ ಕೃಷಿಕ ಕುಟುಂಬವಾಗಿದೆ.

ಸಾಮಾಜಿಕ ಹಾಗೂ ರಾಜಕೀಯ ಸೇವೆಯನ್ನು ಕಾಲೇಜ್ ವಿದ್ಯಾಭ್ಯಾಸ ದಿನದಿಂದಲೇ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತಿ ಹಾಗೂ ಸಂಘಟನೆಗಳಿಗೆ ತೊಡಗಿಕೊಂಡಿದ್ದರು.

ಬೊಮ್ಮಾಯಿ ಅವರು ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ್ದು ಜನತಾದಳದಿಂದ.
1993ರಲ್ಲಿ ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ಯುವಜನತಾ ದಳದ ಐತಿಹಾಸಿಕ ಬೃಹತ್ ರ್ಯಾಲಿಯ ಸಂಘಟನೆಯ ನೇತೃತ್ವ ವಹಿಸಿದ್ದರು.

1995ರಲ್ಲಿ ಹುಬ್ಬಳ್ಳಿ ನಗರದ ಈದಗಾ ಮೈದಾನದ ಸಮಸ್ಯೆಯ ಶಾಸ್ವತ ಪರಿಹಾರಕ್ಕೆ ರಾಜ್ಯ ಸರ್ಕಾರದ ಮೂಲಕ ಪ್ರಯತ್ನ ಮಾಡಿದರು.

1995 ರಿಂದ 1997 ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ಇವರಿಗೆ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿ ಪಕ್ಷದಲ್ಲಿ ಸ್ಥಾನ ಪಡೆದರು.

31-12-1997 ಹಾಗೂ 04-12-2003 ರಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಸ್ಥಳೀಯ ಸಂಸ್ಥೆಗಳಿಂದ (ಧಾರವಾಡ-ಹಾವೇರಿ-ಗದಗ) ನಡೆದ ಚುನಾವಣೆಯಲ್ಲಿ ಸತತ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು.

2007 ರಲ್ಲಿ ಜುಲೈನಲ್ಲಿ ಧಾರವಾಡದಿಂದ ನರಗುಂದವರೆಗೆ 232 ಕಿ.ಮೀ 21 ದಿನಗಳ ಬೃಹತ್ ರೈತರೊಂದಿಗೆ ಪಾದಯಾತ್ರೆ ಜನಮನ್ನಣೆ ಗಳಿಸಿದರು.

ನಂತರ 2008ರಲ್ಲಿ ಜನತಾದಳವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಶಿಗ್ಗಾಂವ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಬೊಮ್ಮಾಯಿ ಆಯ್ಕೆಗೊಂಡಿದ್ದರು.

ವಿರೋಧ ಪಕ್ಷದ ಉಪನಾಯಕ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ಸಚಿವರಾಗಿ, ಸಹಕಾರ ಸಚಿವರಾಗಿ ಕಾರ್ಯನಿರ್ವಹಣೆ, ಹಿಂದಿನ ಬಿ.ಜೆ.ಪಿ ಸರ್ಕಾರದಲ್ಲಿ ಬಿ.ಎಸ್.ಯಡಿಯೂರಪ್ಪ / ಡಿ.ವ್ಹಿ.ಸದಾನಂದಗೌಡ ಹಾಗೂ ಜಗದೀಶ ಶೆಟ್ಟರ್ ಇವರ ಸಚಿವ ಸಂಪುಟದಲ್ಲಿ ಸತತ ಐದು ವರ್ಷಗಳವರೆಗೆ ಜಲ ಸಂಪನ್ಮೂಲ ಸಚಿವರಾಗಿ ಸೇವೆ ಮಾಡಿರುವ ಅನುಭವವನ್ನು ಬಸವರಾಜ ಬೊಮ್ಮಾಯಿ ಹೊಂದಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಲ್ಲಿ ಭಾರತದಲ್ಲೇ ಮೊದಲ ಶೇ..100ರಷ್ಟು ಕೊಳವೆ ನೀರಾವರಿ ಯೋಜನೆಯನ್ನು ಜಾರಿಗೆ ತರುವುದು ಸೇರಿದಂತೆ ಕಾವೇರಿ, ಇತರ ನದಿಗಳ ಇತರ ರಾಜ್ಯದ ತಕರಾರು, ವ್ಯಾಜ್ಯ ಗಳ ಬಗ್ಗೆ, ಹೋರಾಟಗಳ ಬಗ್ಗೆ ,ನೀರಾವರಿ ಯೋಜನೆಗಳಲ್ಲಿ ಹಾಗೂ ನೀರಾವರಿ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದಾರೆ.

ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಧಾರವಾಡದ ಅಧ್ಯಕ್ಷರೂ ಅವರಾಗಿದ್ದರು. ಕ್ರಿಕೆಟ್, ಗಾಲ್ಫ್ ಎಂದರೆ ಬೊಮ್ಮಾಯಿಗೆ ಆಸಕ್ತಿ, ಮಿತಭಾಷಿ, ನೇರ ನುಡಿಯ,ಸರಳ ವ್ಯಕ್ತಿತ್ವದ ಬೊಮ್ಮಾಯಿವರು.

ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ಅಪ್ಪ – ಮಗ ಇಬ್ಬರೂ ಸಿಎಂ ಆದ ಎರಡನೇ ಜೋಡಿ ಎಂಬ ಹೆಗ್ಗಳಿಕೂ ಬೊಮ್ಮಾಯಿ ಪಾತ್ರರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವರು ವರಿಷ್ಠರ ಮಾತಿನಂತೆ ರಾಜೀನಾಮೆ ನೀಡಿ ತಮ್ಮ ಅಪ್ತರಾದ ಬೊಮ್ಮಾಯಿವರಿಗೆ ರಾಜ್ಯದ ಗಾದಿ ಸಿಗುವಂತೆ ಮತ್ತು ಮುಂದೆ ಆಡಳಿತ ನಡೆಸುವ ಸರ್ಕಾರದ ಹಿಡಿತ ತಮ್ಮ ಕೈಯಲ್ಲಿ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಒಂದು ಅರ್ಥದಲ್ಲಿ ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಸಾಕ್ಷಿಯಾಗಲಿದ್ದಾರೆ, ಒಂದು ವೇಳೆ ತಮ್ಮ ರಾಜಕೀಯ ಗುರು ಯಡಿಯೂರಪ್ಪರವರ ಹಸ್ತಕ್ಷೇಪ ವನ್ನು ಒಪ್ಪಿಕೊಂಡು ಆಡಳಿತ ನಡೆಸುವರೋ ಅಥವಾ ತಮ್ಮದೇ ರೀತಿಯಲ್ಲಿ ಸುಸೂತ್ರವಾಗಿ ನಡೆಯುವಂತೆ ಮಾಡುತ್ತಾರೋ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ಈಗಾಗಲೇ ರಾಜ್ಯದ ಜನರು ಕೊರೊನಾದಿಂದಾಗಿ ಆರ್ಥಿಕವಾಗಿ ತತ್ತರಿಸಿ ಹೋಗಿದ್ದಾರೆ ಮತ್ತು ಕಳೆದ ವರ್ಷಗಳ ರಾಜಕೀಯ ಅಸ್ಥಿರತೆ, ಸ್ಥಿತ್ಯಂತರದಿಂದ ಬೇಸತ್ತು ಹೋಗಿದ್ದಾರೆ.

ರಾಜ್ಯದಲ್ಲಿ ಮಳೆ ಪ್ರವಾಹದಿಂದ ಮನೆಮಠಗಳನ್ನು ಕಳೆದು ಕೊಂಡು ನಿರಾಶ್ರಿತರಾಗಿದ್ದಾರೆ ಅದಕ್ಕೆ ಸಂಬಂಧಿಸಿದ ಪರಿಹಾರವನ್ನು ನೀಡುವಕಾರ್ಯ, ಮೇಕೆದಾಟು ಯೋಜನೆಯನ್ನು ಪ್ರಾರಂಭಿಸುವುದಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವುದು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಗೊಳಿಸುವುದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಬೆಳಗಾವಿಯಲ್ಲಿ ಗಡಿ ತಕರಾರು, ಮತ್ತೆ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಳಿಗೆ ತರುವುದು, ತಮ್ಮ ಪಕ್ಷದ ಅಂತರಿಕ ಕಚ್ಚಾಟವನ್ನು, ಭಿನ್ನಮತೀಯ ಚಟುವಟಿಕೆಗಳನ್ನು ತಡೆಯುವುದು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿ ಆಡಳಿತ ನಡೆಸುವ ಮತ್ತು ವಿರೋಧ ಪಕ್ಷಗಳ ಸವಾಲುಗಳನ್ನು ಸದನದಲ್ಲಿ ಸಮರ್ಥವಾಗಿ ಎದುರಿಸಬೇಕಾಗಿದೆ ಇಂತಹ ಕಾಲಘಟ್ಟದಲ್ಲಿ ಬೊಮ್ಮಾಯಿವರು ರಾಜ್ಯದ ಮುಖ್ಯಮಂತ್ರಿಯಾಗಿ ಪಾರದರ್ಶಕವಾದ ಜನಪರವಾದ ಆಡಳಿತವನ್ನು ನೀಡಲಿ ಯಾವುದೇ ರೀತಿಯ ರಬ್ಬರ್ ಸ್ಟಾಂಪ್ ಆಗದೇ ಅತ್ಯುತ್ತಮ ಆಡಳಿತ ನೀಡಲಿ ಎಂಬುದು ನಮ್ಮೆಲ್ಲರ ಮತ್ತು ರಾಜ್ಯದ ಜನರ ಆಶಯವಾಗಿದೆ.