ಹಾಸನದಲ್ಲಿ ಆಕ್ಸಿಜನ್ ಘಟಕ, ಜನರೇಟರ್ ಗಳ ಅಳವಡಿಕೆ -ಸಚಿವ ಡಾ.ಕೆ.ಸುಧಾಕರ್

ಹಾಸನ: ಹಾಸನದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್ ಘಟಕ ಅಳವಡಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವರು ಮಾತನಾಡಿದರು. ಆಕ್ಸಿಜನ್ ಪೂರೈಕೆ ಹೆಚ್ಚಿಸಲು ಹೊಸ ಘಟಕ ಅಳವಡಿಸುವ ಬಗ್ಗೆ ಚರ್ಚೆಯಾಗಿದೆ. ಈಗಾಗಲೇ 13 ಕೆಎಲ್ ನ ಘಟಕ ಮೆಡಿಕಲ್ ಕಾಲೇಜಿನಲ್ಲಿದೆ. ಜೊತೆಗೆ 20 ಕೆಎಲ್ ಘಟಕ ಮೂರ್ನಾಲ್ಕು ವಾರದಲ್ಲಿ ಆರಂಭವಾಗಲಿದೆ. ಆಕ್ಸಿಜನ್ ಜನರೇಟರ್ ಗಳನ್ನು ಸಕಲೇಶಪುರ ಹಾಗೂ ಚನ್ನರಾಯಪಟ್ಟಣಕ್ಕೆ ನೀಡಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ರೆಮ್ ಡಿಸಿವಿರ್ ಔಷಧಿ ಪೂರೈಕೆ, ಆಕ್ಸಿಜನ್ ಪೂರೈಕೆ, ಆರೋಗ್ಯ ಸಿಬ್ಬಂದಿ ಕೊರತೆ ಬಗ್ಗೆ ಸಂಸದರು, ಶಾಸಕರು ಬೇಡಿಕೆ ಇಟ್ಟಿದ್ದಾರೆ. ವಾರದಲ್ಲಿ ಮೂರು ದಿನ ಬಿಟ್ಟು, ಉಳಿದ ನಾಲ್ಕು ದಿನ ಕಡ್ಡಾಯವಾಗಿ ಲಾಕ್ ಡೌನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ ಎಂದರು.
ಸಾವಿನ ಪ್ರಮಾಣ 0.68% ರಷ್ಟಿದೆ. ಸೋಂಕು ಉಲ್ಬಣವಾದ ನಂತರ ತಡವಾಗಿ ದಾಖಲಾಗಿರುವ ಕಾರಣದಿಂದ ಕೆಲವು ಸಾವು ಉಂಟಾಗಿದೆ. ಇದನ್ನು ಕಡಿಮೆ ಮಾಡಬೇಕೆಂದು ಸೂಚಿಸಲಾಗಿದೆ. ಹಿಮ್ಸ್ ನಲ್ಲಿ ಪೂರ್ಣ ಪ್ರಮಾಣದ ನೋಡಲ್ ಅಧಿಕಾರಿ ನಿಯೋಜಿಸಲು ಸೂಚಿಸಲಾಗಿದೆ. ಈ ಅಧಿಕಾರಿಯೇ ಎಲ್ಲ ಪ್ರಕ್ರಿಯೆ ನೋಡಿಕೊಳ್ಳಲಿದ್ದಾರೆ ಎಂದರು.
1,480 ವೈದ್ಯರ ನೇಮಕ ಜೂನ್ 15 ರೊಳಗೆ ಆಗಲಿದೆ ಎಂದವರು ತಿಳಿಸಿ, ಶೀಘ್ರದಲ್ಲೇ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಮಾಡಲು ಸೂಚನೆ, ಸಲಹೆ ನೀಡಲಾಗಿದೆ ಎಂದವರು ಹೇಳಿದರು.