ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಮ್ಮ ಬಗ್ಗೆ ಪದೇ ಪದೇ ಹೇಳಿಕೆ ನೀಡುವ ಬದಲು ಸ್ಲೇಟಿನಲ್ಲಿ ಬರೆದುಕೊಂಡು ಕುತ್ತಿಗೆಗೆ ತಗಲು ಹಾಕಿಕೊಂಡು ಓಡಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು.
ಗುರುವಾರ ನೆಲಮಂಗಲದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಸಭೆಯಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಅವಕಾಶವಾದಿ ರಾಜಕಾರಣಿ ಹಾಗೂ ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಮ್ ಎಂದು
ಸಿದ್ದರಾಮಯ್ಯ ಹೇಳಿರುವ ಕುರಿತು ಪ್ರತಿಕ್ರಿಯಿಸಿ ಸಿದ್ದು ವಿರುದ್ದ ಟೀಕಾ ಪ್ರಹಾರ ನಡೆಸಿದರು.
ಹೀಗೆ ಏನೇನೊ ಹೇಳಿಕೊಳ್ಳುವ ಬದಲು ಒಂದು ಸ್ಲೇಟಿನಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಟೀಮ್ ಅಂತ ಬರೆದುಕೊಂಡು ಕಟ್ಟು ಹಾಕಿಸಿ ಕುತ್ತಿಗೆಗೆ ಹಾಕಿಕೊಂಡು ತಿರುಗಾಡಲಿ, ಹಾಗೆಯೇ ಪ್ರಚಾರ ಮಾಡಿಕೊಂಡು ದಿನವೂ ಓಡಾಡಲಿ ಎಂದು ಟೀಕಿಸಿದರು.
ಹೊಸ ರೂಪದಲ್ಲಿ ಕಾಣಿಸಿಕೊಂಡಿರುವ ಕೋರೋನ ತಳಿ ಒಮಿಕ್ರಾನ್ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರಬಾರದು ಹಾಗೂ ವೈದ್ಯಕೀಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎಂದು ಕುಮಾರಸ್ವಾಮಿ ಇದೇ ವೇಳೆ ಆಗ್ರಹಿಸಿದರು.
ರಾಜ್ಯದಲ್ಲಿ ಹೊಸ ತಳಿಯ ವೈರಸ್ ಪತ್ತೆಯಾಗಿದೆ ಅಂದಾಕ್ಷಣ ಕೋವಿಡ್ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ ಎಂದಲ್ಲ. ಸರಕಾರ ಸಭೆಗಳನ್ನು ಮಾಡಿದೆ ಎಂಬುದನ್ನು ನಾನೂ ಗಮನಿಸಿದ್ದೇನೆ. ಏನೇ ಆದರೂ ಸರಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ವಹಿಸಬೇಕು ಎಂದು ಎಚ್.ಡಿ.ಕೆ ಸಲಹೆ ನೀಡಿದರು.
ಮೂರನೇ ಅಲೆ ಬಹಳ ಅಪಾಯಕಾರಿ ಎಂದು ತಜ್ಞರು ಹೇಳುತ್ತಿದ್ದಾರೆ, ಯಾವುದೇ ಕಾರಣಕ್ಕೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.