ಬೆಂಗಳೂರು:ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು,ಕೋವಿಡ್ನಿಂದಾಗಿ ಸರಿಯಾಗಿ ಶಾಲಾಕಾಲೇಜುಗಳು ನಡೆದಿಲ್ಲ. ಶೇ.80ರಷ್ಟು ಪಠ್ಯಗಳು ಮುಗಿದಿಲ್ಲ ಹಾಗಾಗಿ ತರಗತಿಗಳು ಸರಿಯಾಗಿ ನಡೆಯಬೇಕಿದೆ ಎಂದು ತಿಳಿಸಿದರು.
ಕಾಲೇಜುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಗುರುವಾರದವರೆಗೆ ರಜೆ ನೀಡಲಾಗಿದೆ ಎಲ್ಲರೂ ನ್ಯಾಯಾಲಯದ ತೀರ್ಪನ್ನು ಪಾಲಿಸಬೇಕು ಎಂದು ಕೋರಿದರು.
ಮುಖ್ಯಮಂತ್ರಿಯವರು ಸಭೆ ನಡೆಸಿ ಕಾಲೇಜುಗಳನ್ನು ಮರು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ತುಂಬ ವಿಳಂಬ ಮಾಡುವುದಿಲ್ಲ. ಪ್ರೌಢಶಾಲೆಗಳು ಆರಂಭವಾಗಿದ್ದು, ಶಾಲೆಗಳ ಬಳಿ ಅಗತ್ಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಗಳು ತೆಗೆದುಕೊಳ್ಳುವ ಕ್ರಮಗಳಿಗೆ ಪೊಲೀಸರು ಬೆಂಬಲವಾಗಿ ಇರುತ್ತಾರೆ. ಪೋಷಕರು ಭಯಪಡುವುದು ಬೇಡ, ಉಡುಪಿಯಲ್ಲಿ ಶಾಂತಿ ಸಭೆ ನಡೆಸಿರುವುದು ಸಂತಸ ತಂದಿದೆ. ಆ ಸಭೆಯಲ್ಲಿ ಕೋರ್ಟ್ ಆದೇಶ ಪಾಲನೆ ಮಾಡುವುದಾಗಿ ಹೇಳಿದ್ದಾರೆ. ಇದೇ ರೀತಿ ಎಲ್ಲ ಕಡೆಯೂ ಕೋರ್ಟ್ ಆದೇಶ ಪಾಲನೆ ಮಾಡಿ ಸಾಮರಸ್ಯದಿಂದ ಬಾಳಬೇಕು ಎಂದರು.
ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರದು ಕೆಟ್ಟ ಹೇಳಿಕೆ, ಹಿಜಾಬ್ ಹಾಕಿದರೆ ಮಾತ್ರ ರೇಪ್ ಆಗೋದಿಲ್ಲವೇ, ಬೇರೆ ಬಟ್ಟೆ ಧರಿಸಿದರೆ ರೇಪ್ ಆಗುತ್ತಾ? ಬ್ಯೂಟಿ ಹೇಗೆ ಕಾಣಬಾರದು ಎಂದು ಹೇಗೆ ಹೇಳುತ್ತಾರೆ ಎಂದು ಆರಗ ಪ್ರಶ್ನೆಗಳ ಸುರಿಮಳೆಗೈದರು.
ಜಮೀರ್ ಮನಸಿಗೆ ಬಂದ ಹಾಗೆ ಮಾತನಾಡುತ್ತಾರೆ ವಿಶಾಲವಾಗಿ ಯೋಚಿಸಿ ಮಾತನಾಡಬೇಕು. ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.