ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ದೇಶಾದ್ಯಂತ ಹೊಸ ಶಿಕ್ಷಣ ನೀತಿ ಜಾರಿಯಾಗಿದೆ ಅದಲ್ಲಿಯೂ ಕರ್ನಾಟಕ ರಾಜ್ಯವೂ ನೀತಿಯನ್ನು ಅನುಷ್ಠಾನಗೊಳಿಸುವುದರಲ್ಲಿ ದೇಶದಲ್ಲಿ ಮೊದಲ ರಾಜ್ಯವಾಗಿದೆ.
ಹೊಸ ಶಿಕ್ಷಣ ನೀತಿಯು ಮುಂದಿನ ಸ್ಪರ್ಧಾತ್ಮಕ ಯುಗದಲ್ಲಿ, ಯುವ ಸಮೂಹವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಅತ್ಯತ್ತಮ ಎಂದು ಹೇಳಲಾಗುತ್ತಿದೆ.
ಸಾವಿರಾರು ಕೋಟಿ ರೂಪಾಯಿಗಳನ್ನು ನೀಡುವ ಸರ್ಕಾರ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತದೆ. ಅವರ ಪ್ರಾಮಾಣಿಕ ಬೇಡಿಕೆಯನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ.
ರಾಜ್ಯದಲ್ಲಿ ಒಟ್ಟು 411ಕ್ಕೂ ಹೆಚ್ಚು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ, ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 5400 ಪ್ರಾಧ್ಯಾಪಕರಿದ್ದಾರೆ. ಒಟ್ಟು ಅತಿಥಿ ಉಪನ್ಯಾಸಕರು 14 ಸಾವಿರಕ್ಕಿಂತ ಹೆಚ್ಚು ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಷ್ಕರದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಲ್ಲದೇ ಅತಂತ್ರರಾಗಿದ್ದಾರೆ.
ಸೇವೆಯಲ್ಲಿರುವ ಬಹುತೇಕ ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಹಿನ್ನೆಲೆ ತರಗತಿಗಳು ಅಸ್ತವ್ಯಸ್ತವಾಗಿವೆ.
ಇನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದ ಹಿನ್ನೆಲೆ ಅದರಲ್ಲೂ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡಿರುವುದರಿಂದ ಕಾಲೇಜುಗಳಲ್ಲಿ ಪ್ರವೇಶಾತಿ ಹೆಚ್ಚಾಗಿ ಅತಿಥಿ ಉಪನ್ಯಾಸಕರ ಸಂಖ್ಯೆಯೂ ಹೆಚ್ಚಳವಾಗಿದ್ದು, ಕಾಲೇಜಿನ ಪ್ರಾಂಶುಪಾಲರಿಗೆ ತಲೆನೋವಾಗಿದೆ. 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಕ್ಷಣಿಕ ಜೀವನ ಅತಂಕದಲ್ಲಿದ್ದು, ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸದೇ ಇರುವ ಸರ್ಕಾರ, ಉನ್ನತ ಶಿಕ್ಷಣ ಇಲಾಖೆಗೆ ಗಂಭೀರತೆ ಇನ್ನು ಅರಿವು ಆಗದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.
ಕೆಳೆದ ವಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಂಬಂಧ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಸೇರಿದಂತೆ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳ ವಿಧಾನ ಪರಿಷತ್ ಸದಸ್ಯರು ಕೂಡ ಭಾಗವಹಿಸಿದ್ದ ಈ ಸಭೆಯು, ಕುಮಾರ್ ನಾಯಕ್ ರ ನೇತೃತ್ವದಲ್ಲಿ ರಚಿಸಲಾಗಿರುವ ಉನ್ನತ ಮಟ್ಟದ ಸಮಿತಿಯು ಒಂದು ತಿಂಗಳಲ್ಲಿ ವರದಿ ಸಲ್ಲಿಸಬೇಕೆಂದು ಸೂಚಿಸಿತ್ತು. ಸಮಿತಿಯ ಭಾಗವಾಗಿರುವ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್ ಪ್ರಸಾದ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಮುಂತಾದವರು ಸದಸ್ಯರಾಗಿದ್ದಾರೆ.
ಹಲವು ವರ್ಷಗಳಿಂದ ದುಡಿಯುತ್ತಿರುವ ಉಪನ್ಯಾಸಕರು ಖಾಯಂಗೊಳಿಸುವಂತೆ ಹೋರಾಟ ಮಾಡುತ್ತಲೇ ಬಂದಿದ್ದು, ಯಾವುದೇ ಸರ್ಕಾರಗಳು ಸ್ಪಂದಿಸದೇ, ಸಮಿತಿ ಹೆಸರಲ್ಲಿ ಕಾಲಹರಣ ಮಾಡುತ್ತಿದೆ. ಈ ವರ್ಷದ ಪ್ರತಿಭಟನೆಯು ಮಾಡು ಇಲ್ಲವೇ ಮಡಿಯ ಹೋರಾಟವಾಗಿದ್ದು, ಸರ್ಕಾರಕ್ಕೆ ಬಿಸಿಮುಟ್ಟಿಸಲು ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸೇವಾ ಭದ್ರತೆಯ ಲಿಖಿತ ಆದೇಶ ಬರುವವರೆಗೂ ತರಗತಿ ಬಹಿಷ್ಕಾರಿಸಿ ಮುಷ್ಕರ ಮಾಡುತ್ತಿದ್ದೇವೆ. ನಮ್ಮ ಈ ಮುಷ್ಕರವು ಇದೀಗ 11ನೇ ದಿನಕ್ಕೆ ಕಾಲಿಟ್ಟಿದೆ, ಬೆಳಗಾವಿ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜಿನ 8 ಸಾವಿರಕ್ಕೂ ಅತಿಥಿ ಉಪನ್ಯಾಸಕರು ಬೆಳಗಾವಿ ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವರು ಯಾವುದೇ ಸೇವಾ ಭದ್ರತೆಯ ಭರವಸೆ ನೀಡದೆ ಸಮಿತಿ ರಚಿಸಿದ್ದೇವೆ ವರದಿ ಬಂದ ನಂತರ ಪರಿಶೀಲನೆ ಮಾಡುತ್ತೇವೆ, ಹಿಂದಿರುಗಿ ತರಗತಿಯನ್ನು ತೆಗೆದುಕೊಳ್ಳಿ ಎಂದು ಹೇಳಿದರು ಅದರೆ ಇದನ್ನು ಅತಿಥಿ ಉಪನ್ಯಾಸಕರು ತಿರಸ್ಕರಿಸಿ, ಲಿಖಿತ ಆದೇಶ ನೀಡಿದ್ದಲ್ಲಿ ಮಾತ್ರ ಹಿಂದಿರುಗುತ್ತೇವೆ ಎಂದು ಇಲ್ಲಿಯವರೆಗೆ ಮುಷ್ಕರ ನಡೆಸುತ್ತಿದ್ದಾರೆ.
ಪದವಿ ಕಾಲೇಜಗಳ ಪರಿಸ್ಥಿತಿ : ಅತಿಥಿ ಉಪನ್ಯಾಸಕರ ಮುಷ್ಕರದಿಂದ ಕಾಲೇಜುಗಳಲ್ಲಿ ತರಗತಿಗಳು ನಡೆಯದೆ ಏರುಪೇರಾಗಿದೆ. ಅತಿಥಿ ಉಪನ್ಯಾಸಕರ ಪ್ರತಿಭಟನೆಯಿಂದ ತರಗತಿಗಳು ಅಸ್ತವ್ಯಸ್ತ ಆಗಿರುವುದರಿಂದ ಕಾಲೇಜಿನಲ್ಲಿ ಪ್ರಾಂಶುಪಾಲರು ಹಾಗೂ ಖಾಯಂ ಪ್ರಾಧ್ಯಾಪಕರು ಹೈರಾಣಾಗಿದ್ದಾರೆ. ತರಗತಿಗಳು ನಡೆಯದ ಹಿನ್ನೆಲೆ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ನಿತ್ಯ ಮನೆಗೆ ತೆರಳುತ್ತಿದ್ದಾರೆ.
ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿದ್ದಾರೆ, ಇನ್ನು ಅತಿಹೆಚ್ಚು ಸಂಖ್ಯೆಯುಳ್ಳ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹೇಳೋರಿಲ್ಲ ಕೇಳೋರಿಲ್ಲದಂತ್ತಾಗಿದೆ. ವಿದ್ಯಾರ್ಥಿಗಳಿಗೆ ಕ್ಲಾಸ್ ಇಲ್ಲದ ಕಾರಣ ತರಗತಿ ಕೊಠಡಿಗಳಲ್ಲಿ ಅಶಿಸ್ತಿನಿಂದ ಕೂಡುವುದು, ಬೆಂಚ್ ಮೇಲೆ ಕುಳಿತು ಮೊಬೈಲ್ ವೀಕ್ಷಣೆ ಮಾಡುತ್ತಿರುವುದು, ಹರಟೆ ಹೊಡೆಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ಕಾಲೇಜಿನ ಪ್ರಾಂಶುಪಾಲರು ಅಸಹಾಯಕರಾಗಿದ್ದು, ಹಲವು ಕಾಲೇಜುಗಳಲ್ಲಿ ಖಾಯಂ ಪ್ರಾಧ್ಯಾಪಾಕರು ತರಗತಿಗಳನ್ನು ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು,ಬಹುತೇಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿರುವುದರಿಂದ ತರಗತಿಗಳು ಅಸ್ತವ್ಯಸ್ತವಾಗಿದ್ದು, ವಿದ್ಯಾರ್ಥಿಗಳು ನಿತ್ಯ ಕಾಲಹರಣ ಮಾಡುವಂತ್ತಾಗಿದೆ.
ವಿದ್ಯಾರ್ಥಿಗಳು, ತರಗತಿಗಳು ಸೂಕ್ತವಾಗಿ ನಡೆಯುತ್ತಿಲ್ಲ ಈ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ನಮ್ಮ ಕೈನಲ್ಲಿ ಏನೂ ಇಲ್ಲ. ಸರ್ಕಾರ ಮತ್ತು ಕಾಲೇಜು ಶಿಕ್ಷಣ ಇಲಾಖೆ ಇದರ ಬಗ್ಗೆ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದು, ಸಮಸ್ಯೆಗೆ ಪರಿಹಾರವಾಗಿ ಆನ್‍ಲೈನ್ ಶಿಕ್ಷಣವನ್ನು ನೀಡಬಹುದಷ್ಟೆ. ಇದಕ್ಕಿಂತ ಹೆಚ್ಚಿಗೆ ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯ ಅರ್ಜಿಯನ್ನು ಬರೆದುಕೊಂಡು ತಾಲ್ಲೂಕು ಕಚೇರಿಗೆ ದೌಡಾಯಿಸಿ, ಗ್ರೇಡ್-2 ತಹಶೀಲ್ದಾರರಿಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ.
ಪೋಷಕರ ಆತಂಕ; ನಾವು ಕಷ್ಟಪಟ್ಟಿದ್ದು ಸಾಕು, ನಮ್ಮ ಮಕ್ಕಳಾದರೂ ಸುಖವಾಗಿರಲಿ ಎಂದು ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ಕೊಡಿಸಿ ನಮ್ಮ ಮಕ್ಕಳು ವಿದ್ಯಾವಂತರಾಗಿ, ಸಮಾಜದಲ್ಲಿ ಉತ್ತಮ ಸ್ಥಾನಮಾನ, ಉನ್ನತ ಹುದ್ದೆ ಪಡೆದು ನಮ್ಮನ್ನು ನೋಡಿಕೊಳ್ಳಲಿ ಎಂದು ತಮ್ಮ ಕಷ್ಟವನ್ನೆಲ್ಲಾ ಬದಿಗಿಟ್ಟು ಅದೇಷ್ಟೊ ಪೋಷಕರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
ಆದರೆ ವಿದ್ಯಾರ್ಥಿಗಳು ಪಾಠ-ಪ್ರವಚನಗಳಿಲ್ಲದೆ ಕಾಲೇಜಿಗೆ ಬರಬೇಕೊ ಬೇಡವೊ ಎಂಬ ಗೊಂದಲದಲ್ಲಿದ್ದು, ಅತಿಥಿ ಉಪನ್ಯಾಸಕರ ಪ್ರತಿಭಟನೆ ಎಂದು ಮುಗಿಯುತ್ತದೊ ಎಂದು ಎದುರು ನೋಡುತ್ತಿದ್ದಾರೆ. ಎಲ್ಲಿ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಚಕಾರ ಬರುತ್ತದೇಯೋ ,ನಮ್ಮ ಆಸೆ ನೆರವೇರುವುದಿಲ್ಲವೊ ಎಂಬ ಆತಂಕದಲ್ಲಿ ಪೋಷಕರದು.
ಅತಿಥಿ ಉಪನ್ಯಾಸಕರ ಬದುಕಿನ ಬವಣೆ: ಸರಕಾರದ ಉನ್ನತ ಶಿಕ್ಷಣ ಇಲಾಖೆ ತಾತ್ಸಾರಕ್ಕೆ ಒಳಗಾಗಿ, ಯಾರಿಗೂ ಬೇಡವಾದ ರೀತಿಯಲ್ಲಿ ಕಳೆದ 15-20 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ದುಡಿಯುತ್ತಿರುವ ಒಮ್ಮೆ ಅತಿಥಿ ಹೆಸರಲ್ಲಿ, ಇನ್ನೊಮ್ಮೆ ಬಾಡಿಗೆ ಹೆಸರಲ್ಲಿ, ಮತ್ತೊಮ್ಮೆ ಅರೆಕಾಲಿಕ ಹೆಸರಿನಲ್ಲಿ ಬದುಕಿಗಾಗಿ ಚಡಪಡಿಸುತ್ತಿರುವ ಅರೆಜೀವದ ಚಾತಕ ಪಕ್ಷಿಗಳಂತಾಗಿದೆ ಅತಿಥಿ ಉಪನ್ಯಾಸಕರ ಸ್ಥಿತಿ.
ತಮ್ಮ ಹಾಗೆಯೇ ಓದಿ, ನೇಮಕಾತಿಯಲ್ಲಿ ಸ್ವಲ್ಪದರಲ್ಲೇ ಆಯ್ಕೆಯಾದವರಿಂದ ಒಂದು ರೀತಿಯಲ್ಲಿ ತಿರಸ್ಕಾರಕ್ಕೆ, ಅಸಹನೆಗೆ ಒಳಗಾಗಿ ಕಾಲೇಜಿನಲ್ಲಿ ಕುಳಿತುಕೊಳ್ಳಲು ಕುರ್ಚಿಯೂ ಸಿಗದೆ, ಮಾಡುವ ಕೆಲಸಕ್ಕೆ ಬಿಡಿಗಾಸು ಎಂಬ ಗೌರವ ಧನ ಪಡೆಯಲು ವಾರಗಟ್ಟಲೇ ಕಾಯುವ, ಕ್ಲರ್ಕ್, ಪ್ರಿನ್ಸಿಪಾಲರ ಮುಂದೆ ಕೈಕಟ್ಟಿ ನಿಲ್ಲುವ, ಅವರು ಕೊಟ್ಟಾಗ ಪಡೆದುಕೊಂಡು ಮಾಡಿದ ಸಾಲಕ್ಕೆ ಹೊಂದಿಸುವ, ಮುಂದಿನದು ಏನು ಎಂಬ ಚಿಂತೆಯಲ್ಲಿಯೇ ದಿನಗಳನ್ನು ದೂಡುತ್ತಾ ಸವೆಸುವ ಜೀವನದ ಪಾಡು ಯಾರಿಗೂ ಬೇಡ. ಅಂಥ ಬದುಕಿನವರು ಈ ಪದವಿ ಕಾಲೇಜು ಅತಿಥಿ ಉಪನ್ಯಾಸಕರು.
ರಾಜ್ಯದ 430 ಪದವಿ ಕಾಲೇಜುಗಳಲ್ಲಿ ಸುಮಾರು 14,755 ಉಪನ್ಯಾಸಕರು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಯಾವ ಸೇವಾ ಭದ್ರತೆಯೂ ಇಲ್ಲದೇ,ಕೊಟ್ಟಾಗಷ್ಟೇ ಪ್ರಸಾದ ಎಂಬ ರೀತಿಯಲ್ಲಿ ಗೌರವಧನ ಪಡೆಯುತ್ತಾ ದುಸ್ತರ ಬದುಕು ಬದುಕುತ್ತಿದ್ದಾರೆ.
ನೀವು ಪ್ರತಿ ವರ್ಷವೂ ವಿಧಾನಮಂಡಲ ಅಧಿವೇಶನ ಸಮಯದಲ್ಲಿ ನೋಡಬಹುದು. ಸೇವಾಭದ್ರತೆ ನೀಡಿ, ಗೌರವಧನ ಹೆಚ್ಚಿಸಿ, ಕಾಯಮಾತಿ ಮಾಡಿ ಎಂದು ಅತಿಥಿ ಉಪನ್ಯಾಸಕರ ಅರ್ನಿದಿಷ್ಟ ಮುಷ್ಕರ ಎಂಬ ದೃಶ್ಯಗಳನ್ನು ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ನೋಡಿರುತ್ತೀರಾ. ಸರಕಾರ ಮಾತುಕತೆಗೆ ಕರೆದು ಚರ್ಚಿಸುತ್ತದೆ. ಕಾಯಂ ಮಾಡುತ್ತೇವೆ ಎಂಬ ಆಶ್ವಾಸನೆ ಕೊಡುತ್ತದೆ. ಇಂಥ ನಾಟಕ ದೃಶ್ಯಗಳು ಮರುಕಳಿಸುತ್ತಲೇ ಇವೆ.
ಗೌರವ ಧನ ಎಂಬ ಶೋಷಣೆ: ಮಾಡುವ ಕೆಲಸ ಒಂದೇ. ಆದರೆ ತಾರತಮ್ಯ ಯಾಕೆ? ಅತಿಥಿ ಉಪನ್ಯಾಸಕರಿಗೆ ಕೊಡುವ ಗೌರವ ಧನ 8 ಪಿರೇಡ್ʼಗಳಿಗೆ ಕೇವಲ 11,000 ರಿಂದ 13,000 ರೂಪಾಯಿಗಳು ಮಾತ್ರ. ಅದೇ ಕಾಯಂ ಉಪನ್ಯಾಸಕರಿಗೆ ಸಿಗುವ ಸಂಬಳ ವಾರದ 16 ಪಿರೇಡ್ʼಗೆ 60,000ದಿಂದ 1,10,000 ರೂಪಾಯಿ ವರೆಗೆ ಅಥವಾ ಅದಕ್ಕಿಂತ ಹೆಚ್ಚು. ಸಾಮಾಜಿಕ ನ್ಯಾಯ ಎಂದರೆ ಇದೇನಾ? ಶೈಕ್ಷಣಿಕ ಸುಧಾರಣೆ ಎಂದರೆ ಇದೇನಾ? ಅದೇ ಅನ್ಯ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಏನಿಲ್ಲವೆಂದರೂ 25,000ರಿಂದ 35,000 ರೂಪಾಯಿ ವರೆಗೆ ಸಂಬಳ, ಸೇವಾಭದ್ರತೆಯೂ ಇದೆ. ಶಿಕ್ಷಣದ ಕಾಶಿ, ಜ್ಞಾನದ ಗಂಗೋತ್ರಿ ಎಂದು ಕರೆಸಿಕೊಳ್ಳುವ ಕರ್ನಾಟಕದಲ್ಲಿ ಏಕಿಲ್ಲ?
ಕಳೆದ ವರ್ಷ ಕೊರೋನಾ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಪಾಡು ಯಾರಿಗೂ ಹೇಳದ ಸ್ಥಿತಿಯಲ್ಲಿ ಇತ್ತು. ಅನಾರೋಗ್ಯ ಪೀಡಿತರಾಗಿ ವೇತನ ಇಲ್ಲದೇ ಸುಮಾರು 60ಕ್ಕೂ ಹೆಚ್ಚು ಉಪನ್ಯಾಸಕರು ಸಾವಿಗೀಡಾದರು.
ಇದು ನಿಜಕ್ಕೂ ದುರಂತವೇ ಸರಿ. ಎಷ್ಟೋ ಉಪನ್ಯಾಸಕರು ಗೌರವಧನ ಸಿಗದೇ ಬೀದಿಬದಿ ವ್ಯಾಪಾರಿಗಳಾದರು. ಹೋಟೆಲ್, ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿದ್ದಾರೆ. ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಗಳಾಗಿ ಕೆಲಸ ಮಾಡಿದ್ದಾರೆ. ಒಂದು ಗೌರವಯುತವಾದ ಬದುಕನ್ನು ಕಟ್ಟಿಕೊಳ್ಳದ, ಮನೆಯವರಿಗೂ ಬೇಡವಾಗಿ, ಸಮಾಜದ ಕಣ್ಣಲ್ಲಿ ಏನಕ್ಕೂ ಆಗದವರಂತೆ ಆಗಿಬಿಟ್ಟ ಇವರ ನೋವಿನ್ನು ಹೇಳುವುದಾದರೂ ಹೇಗೆ?
ಒಂದು ನಡೆದ ಘಟನೆಯ ಬಗ್ಗೆ ಹೇಳಬೇಕು. ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆ ಹಾಗೂ ಗೌರವಧನ ಹೆಚ್ಚಳಕ್ಕಾಗಿ ಮನವಿ ಕೊಡಲು ಡೀಸಿ ಕಚೇರಿಗೆ ಹೋದ ಸಂದರ್ಭದಲ್ಲಿ ಆ ಡೀಸಿ ಹೇಳಿದ ಮಾತು ಅಕ್ಷರಶಃ ಜಿಗುಪ್ಸಕರವಾಗಿತ್ತು. ಯಾಕಾಗಿ ಈ ಉಪನ್ಯಾಸಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆಯೋ ಎಂಬ ಸಂಕಟ ಕಾಡಿದ್ದು ಸುಳ್ಳಲ್ಲ.
ಆ ಡೀಸಿ ಮಹಾಶಯ ಹೇಳುತ್ತಾರೆ… ನೀವು ಇಲಾಖೆ ನಡೆಸುವ ನೇರ ಅಥವಾ ಸ್ಪರ್ಧಾತ್ಮಕ ಪರೀಕ್ಷಯಲ್ಲಿ ಉತ್ತೀರ್ಣರಾಗದೇ ಇಲ್ಲಿ ಬಂದು ಕಾಯಂ ಮಾಡಿ, ಗೌರವಧನ ಹೆಚ್ಚಳ ಮಾಡಿ ಅಂತ ಕೇಳ್ತಾ ಇದೀರಾ. ಅವೆಲ್ಲ ಮಾಡೊಕೆ ಸರ್ಕಾರಕ್ಕೆ ಅಗೋದಿಲ್ಲ. ಇದೇ ಗೌರವಧನ ತೆಗೆದುಕೊಂಡು ಕೆಲಸ ಮಾಡುವುದಾದರೆ ಮಾಡಿ. ಇಲ್ಲವೇ ಕೆಲಸ ಬಿಟ್ಟುಬಿಡಿ. ಈ ಕೆಲಸ ಮಾಡಲು ಲಕ್ಷಾಂತರ ವಿದ್ಯಾವಂತರು ಕಾಯುತ್ತಿದ್ದಾರೆ. ಪಾಠ ಮಾಡಿಕೊಂಡೇ ಅರ್ಧ ಜೀವನವನ್ನೇ ಸವೆಸಿದ, ಇಂಥ ಡೀಸಿಗಳಿಗೆ ಪಾಠ ಮಾಡಿದ ಅವರ ಬದುಕಿಗೆ ಬೆಂಕಿ ಇಡುವಂಥ ಇಂಥ ಮಾತುಗಳು ಇನ್ನೆಷ್ಟು ದಿನ..?
ಎಷ್ಟು ಕೇಳಿದರೂ, ಹೋರಾಟ ನಡೆಸಿದರೂ ಅತಿಥಿ ಉಪನ್ಯಾಸಕರಾಗಿ ಕಡಿಮೆ ಸಂಬಳಕ್ಕೆ (ಗೌರವ ಧನ) ವರ್ಷಗಳಿಂದ ಕೆಲಸ ಮಾಡುವ ದುಃಸ್ಥಿತಿ ನಮ್ಮದು. ಅತಿಥಿ ಉಪನ್ಯಾಸಕರ ಸಂಘಗಳು ಸೇವಾ ವಿಲೀನ, ಸೇವಾ ಭದ್ರತೆ ಹಾಗೂ ಗೌರವ ಧನ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಲೆ ಬಂದಿದೆ. ಆದರೂ ಸಹ ಯಾವುದೇ ಸರ್ಕಾರ ಗಮನ ಕೊಟ್ಟಿಲ್ಲ. ಕೊಡುತ್ತಲೂ ಇಲ್ಲ. ಅರ್ಹತೆ ಹೊಂದಿದರು ಸಿಗದ ಮಾನ್ಯತೆ ಇಲ್ಲಿ ಬಹುತೇಕ ಉಪನ್ಯಾಸಕರು ಪಿಎಚ್.ಡಿ, ಸೆಟ್ ಹಾಗೂ ನೆಟ್ ಪರೀಕ್ಷೆ ಪಾಸಾಗಿದ್ದು ಯು.ಜಿ.ಸಿ ನಿಯಮಾವಳಿ ಪ್ರಕಾರ ವಿದ್ಯಾರ್ಹತೆ ಹೊಂದಿರುವುದರಿಂದ ಕಾಯಂ ಗೊಳಿಸಲು ಸೂಕ್ತ ನಿಯಮಾವಳಿ ರೂಪಿಸಲು ಏಕೆ ಮೀನಮೇಷ? ಸ್ಥಳೀಯ ಅಭ್ಯರ್ಥಿ, ಗುತ್ತಿಗೆ ಆಧಾರ ಹಾಗೂ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರನ್ನು ಅವರ ಸೇವಾ ಅನುಭವ, ವಿದ್ಯಾರ್ಹತೆ ಪರಿಗಣಿಸಿ ಈ ಹಿಂದೆ ಕಾಯಂಗೊಳಿಸಿದ ಉದಾಹರಣೆಗಳಿವೆ. ಆದರೆ 2003ರಿಂದ ಇಲ್ಲಿವರೆಗೆ ಪ್ರತಿ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಅನ್ಯಾಯವಾಗುತ್ತಲೇ ಇದೆ.
ಈಚೆಗೆ ಧಾರವಾಡದ ಉಚ್ಚ ನ್ಯಾಯಾಲಯವು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಕುರಿತು ನಿಯಮಾನುಸಾರ 3 ತಿಂಗಳ ಒಳಗಾಗಿ ಕ್ರಮ ಕೈಗೊಳ್ಳಲು ಸೂಚಿಸಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ಸದಸ್ಯರುಗಳ ಹಾಗೂ ಅತಿಥಿ ಉಪನ್ಯಾಸಕ ಪದಾಧಿಕಾರಿಗಳೊಂದಿಗೆ ಮಾರ್ಚ್ನಲ್ಲಿ ನಡೆದ ಸಭೆಯಲ್ಲಿ ಹಂತ-ಹಂತವಾಗಿ ಕಾಯಂಗೊಳಿಸುವ ಭರವಸೆ ನೀಡಲಾಗಿದೆ. ಆದ್ದರಿಂದ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರನ್ನು ವಿಶೇಷವಾಗಿ ವಯೋಮಿತಿ ಮೀರುತ್ತಿರುವ ಅರ್ಹತೆ ಮತ್ತು ಅನುಭವ ಹೊಂದಿದ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಇದೆ.
ಚಿಂತಕರಾದ ಬರಗೂರು ರಾಮಚಂದ್ರಪ್ಪ, ಬಸವರಾಜ ಹೊರಟ್ಟಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ್ತು ವಿಧಾನ ಪರಿಷತ್ ಸದಸ್ಯರುಗಳು ಮುಂತಾದವರು ಹಾಗೂ ಅತಿಥಿ ಉಪನ್ಯಾಸಕರ ರಾಜ್ಯ ಒಕ್ಕೂಟವು ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಬೇಕು. ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರ ಕೆಲಸವನ್ನು ಪರಿಗಣಿಸಬೇಕು ಎಂದು ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.
15-20 ವರ್ಷಗಳಿಂದ ಕಡಿಮೆ ಸಂಬಳದಲ್ಲಿಯೂ ವೃತ್ತಿಬದ್ಧತೆ ಮೆರೆದ, ಪಾಠ, ಬೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಜ್ಯದ ಸಹಸ್ರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಅತಿಥಿ ಉಪನ್ಯಾಸಕರ ಸೇವೆಯನ್ನು ಸರಕಾರ ಪರಿಗಣಿಸದೇ ಇರುವುದು ವಿಷಾದನೀಯ. ನಾಡಿನ ಶಿಕ್ಷಣ ಚಿಂತಕರು, ಕಾನೂನು ತಜ್ಞರು, ರಾಜಕೀಯ ಧುರೀಣರು ಮುಂತಾದವರು ಸೇರಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕಲ್ಪಿಸಿಕೊಡಲು ಪ್ರಯತ್ನಿಸಬೇಕು.
34 ವರ್ಷಗಳ ನಂತರ ಕೇಂದ್ರ ಸರಕಾರ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೆ ತಂದಿದೆ. ಈ ಮೂಲಕ ಕರ್ನಾಟಕ ರಾಜ್ಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಮೊದಲ ರಾಜ್ಯವೆನಿಸಿದೆ. ಈ ನೀತಿಯನ್ನು ಜಾರಿಗೆ ತರುವಲ್ಲಿ ಅತಿಥಿ ಉಪನ್ಯಾಸಕರ ಪಾತ್ರ ಬಹು ದೊಡ್ಡದು. ಯಾಕೆಂದರೆ, ಬಹುತೇಕ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರೇ ಇಲ್ಲ. ಅತಿಥಿ ಉಪನ್ಯಾಸಕರಿಂದಲೇ ಕಾಲೇಜು ನಡೆಯುತ್ತಿದೆ. ಈ ನೀತಿಯು ಯಶಸ್ವಿಯಾಗಬೇಕಾದೆ ಇವರ ಸೇವಾ ಭದ್ರತೆ, ವೇತನ ತಾರತಮ್ಯ ನೀಗಬೇಕಿದೆ.
ಸರ್ಕಾರ ಸೂಕ್ತ ಸಮಯದಲ್ಲಿ ನೇಮಕಾತಿಯನ್ನು ಮಾಡಿದ್ದರೆ ಇಂದು ಅತಿಥಿ ಉಪನ್ಯಾಸಕರ ಸಮಸ್ಯೆಯೆ ಉದ್ಭವಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಹೋಗಿ ತಮ್ಮ ಭವಿಷ್ಯವನ್ನೆ ಅಡ ಕತ್ತರಿಗೆ ಸಿಕ್ಕಿಸಿಕೊಂಡಿರುವ ಅತಿಥಿ ಉಪನ್ಯಾಸಕರು ತಮ್ಮ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವಮಾನವನ್ನೆ ತೇಯ್ದಿದ್ದಾರೆ.
ಇನ್ನು ಕೆಲವು ಅತಿಥಿ ಉಪನ್ಯಾಸಕರು ತಾವು ಇನ್ನು ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕುವ ವಯೋಮಿತಿ ಮೀರಿದ್ದು, ಉಪನ್ಯಾಸ ಬಿಟ್ಟರೆ ನಮಗೇನು ತಿಳಿದಿಲ್ಲ, ಈಗ ನಡೆಯುತ್ತಿರುವ ನೇಮಕಾತಿಯಲ್ಲಿ ನಮಗೆ ವಯೋಮಿಯಲ್ಲಿ ಸಡಿಲಿಕೆಯನ್ನಾದರೂ ಮಾಡಿ, ನಮಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಎಂದು ಸರ್ಕಾರವನ್ನು ಕೇಳುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಅನ್ಲೈನ್ ತರಗತಿಗಳನ್ನೂ ಅತಿಥಿ ಉಪನ್ಯಾಸಕರೇ ಮಾಡಿದ್ದರು. ಇಲಾಖೆಯು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಉಚಿತ ಲ್ಯಾಪ್ಟಾಪ್, ಟ್ಯಾಬ್ʼಗಳನ್ನು ನೀಡಿದೆ. ಅದರೆ ಎಷ್ಟೋ ಅತಿಥಿ ಉಪನ್ಯಾಸಕರುಗಳಿಗೆ ಸ್ಮಾರ್ಟ್ʼಪೋನ್ ಕೂಡ ಇಲ್ಲದಿರುವುದು ದುರ್ದೈವದ ಸಂಗತಿ.
ಕಾಯಂ ಉಪನ್ಯಾಸಕರಲ್ಲಿ ಎಲ್ಲವೂ ಇದ್ದು ತರಗತಿ ಮಾಡಿದ್ದರೆ, ಅತಿಥಿಗಳು ಏನೂ ಇಲ್ಲದೇ ಅನ್ಲೈನ್ ತರಗತಿ ನಡೆಸಲು ಒಂದು ಜಿಬಿ ಡೇಟಾಗೂ ಒದ್ದಾಡಿದ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ಅವರಿಗೆ ಲ್ಯಾಪ್ಟಾಪ್, ಟ್ಯಾಬ್ʼಗಳನ್ನಾದರೂ ಸರಕಾರ ಕೊಡಬೇಕಿತ್ತು ಕೊಡಲಿಲ್ಲ.
ಮೇಲೆ ಹೇಳಿದ ಹಾಗೆ ಒಮ್ಮೆ ಅರೆಕಾಲಿಕ, ಇನ್ನೊಮ್ಮೆ ಬಾಡಿಗೆ ಉಪನ್ಯಾಸಕ, ಮತ್ತೊಮ್ಮೆ ಅತಿಥಿಯಾಗಿ ಇಡೀ ಬದುಕನ್ನು ಗೌರವಯುತವಾಗಿ ಬದುಕಲೂ ಅಗದೆ,ಇರುವ ಸ್ಥಿತಿ ಅವರದು.
ಇವರರಲ್ಲಿಯೂ ಸಹ ನೆಟ್ ಸ್ಲೆಟ್, ಪಿಹೆಚ್ ಡಿ ಮಾಡಿಕೊಂಡಿದ್ದು, ಅರ್ಹ ಹಾಗೂ ಸೇವಾನುಭವ, ವಯೋಮಿತಿ ಮೀರುವವರಿಗೆ ಖಾಯಂ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿ ಮುಷ್ಕರ ಮಾಡುತ್ತಿದ್ದಾರೆ.
ಸರ್ಕಾರ ಇಲಾಖೆಯು ಮಾನವೀಯತೆಯಿಂದ ವರ್ತಿಸಿ ಹದಿನಾಲ್ಕು ಸಾವಿರ ವೃತ್ತಿಗೂ ಚ್ಯುತಿ ತಾರದೆ ಬದುಕುವ ಈ ಅತಿಥಿಉಪನ್ಯಾಸಕರ ಬದುಕಲ್ಲಿ ಬೆಳಕು ಮೂಡಲಿ.