ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಆದರೆ ಚಿಗುರಿದ ಕನಸು ಸಾಕಾರವಾಗಬೇಕಾದರೆ ನಮ್ಮಲ್ಲಿ ಆತ್ಮವಿಶ್ವಾಸ ಉಳಿಯಬೇಕು. ಅದು ಉಳಿಯಬೇಕಾದರೆ ನಿರಾಸೆಗೆ ಸಲಾಂ ಹೇಳಿ ಉತ್ಸಾಹ ಚಿಲುಮೆಯಾಗಿ ತೆರೆದುಕೊಳ್ಳಬೇಕು.
ಹಾಗೆ ನೋಡಿದರೆ ನಾವು ಸವೆಸಿ ಬಂದ ಅಷ್ಟು ವರ್ಷಗಳು ಅಮೂಲ್ಯವೇ.
ಪ್ರತಿವರ್ಷವೂ ವರ್ಷದ ಕೊನೆಯಲ್ಲಿ ನಿಂತು ನಾವು ಸವೆಸಿ ಬಂದ ಅಷ್ಟು ದಿನಗಳತ್ತ ತಿರುಗಿ ನೋಡಿದಾಗಲೆಲ್ಲ ಕಳೆದುಹೋದ ಕ್ಷಣಗಳು ಅದು ತಂದೊಡ್ಡಿದ ಸಂಕಟ.. ಸಾವು, ನೋವು, ದುಃಖ ದುಮ್ಮಾನ, ಈಡೇರದೆ ಉಳಿದು ಹೋದ ಬಯಕೆಗಳು.. ಹೀಗೆ ಕೆಲವೇ ಕೆಲವಷ್ಟೆ ಖುಷಿಯ ಕ್ಷಣಗಳನ್ನು ಹೊರತು ಪಡಿಸಿದರೆ ನೂರಾರು ನಿರಾಸೆ ಕಷ್ಟ- ನೋವುಗಳು ನಮ್ಮನ್ನು ಸುತ್ತಿ ನೇವಳಿಸಿ ಎಸೆದು ಬಿಡುತ್ತದೆ.
ಪ್ರತಿವರ್ಷದ ಆರಂಭದ ಶಪಥ ಕ್ರಮೇಣ ಮಾಸಿಹೋಗುತ್ತದೆ. ಅದರಾಚೆಗೆ ವರ್ಷದ ಆರಂಭದ ಆತ್ಮವಿಶ್ವಾಸಕ್ಕೆ ತುಕ್ಕು ಹಿಡಿಯುತ್ತದೆ.
ಮತ್ತೆ ಅದೇ ಬದುಕು ಮುನ್ನಡೆಯುತ್ತದೆ. ಸಾಧನೆ ಹಾದಿಗಾಗಿ ನಾವೇ ಹಾಕಿಟ್ಟ ಮಾಪನವೂ ಮಸುಕಾಗಿ ಬಿಡುತ್ತದೆ. ಇಷ್ಟಕ್ಕೂ ಎಲ್ಲ ವರ್ಷಗಳಲ್ಲಿಯೂ ಒಂದಲ್ಲ ಒಂದು ರೀತಿಯ ಘಟನಾವಳಿಗಳು ನಡೆದೇ ನಡೆದಿರುತ್ತವೆ.
ಅವುಗಳಲ್ಲಿ ಕೆಲವು ಖುಷಿ ಕೊಟ್ಟಿದ್ದರೆ ಮತ್ತೆ ಕೆಲವು ದುಃಖವನ್ನು ತಂದಿರುತ್ತವೆ. ಕೆಲವು ಮನೆಗಳಲ್ಲಿ ಶುಭ ಕಾರ್ಯಕ್ರಮಗಳು ನಡೆದಿದ್ದರೆ ಮತ್ತೆ ಕೆಲವರ ಮನೆಗಳಲ್ಲಿ ಸಾವು-ನೋವು ಘಟಿಸಿರಬಹುದು. ಆದರೆ ಕಾಲವೇ ಹಾಗೆ ಅದಕ್ಕೆ ಎಲ್ಲವನ್ನು ಮರೆಸುತ್ತಾ ಮುನ್ನಡೆಸುವ ಶಕ್ತಿಯಿದೆ.
ವ್ಯಕ್ತಿಗತವಾಗಿ ನಾವೆಲ್ಲರೂ ಸಾಕಷ್ಟು ಏರುಪೇರುಗಳನ್ನು ಅನುಭವಿಸಿರಬಹುದು ಆದರೆ ರಾಷ್ಟ್ರೀಯ ವಿಪತ್ತುಗಳು ಮಾತ್ರ ಎಲ್ಲರನ್ನು ತಲ್ಲಣಿಸಿ ಬಿಡುತ್ತವೆ.
ಕಳೆದ ಎರೆಡು ವರ್ಷಗಳಿಂದ ಕೊರೊನಾ ವೈರಸ್ ಪರಿಣಾಮದಿಂದ ಜನರೆಲ್ಲರೂ ಅನುಭವಿಸಿದ ಕಷ್ಟನಷ್ಟಗಳನ್ನು ಮರೆಯುವುದು ಅಸಾಧ್ಯ. ಇದೀಗ ಹೊಸ ವರ್ಷ, ಹೊಸ ಭರವಸೆ, ಹೊಸ ಸಾಧನೆಗಳತ್ತ ನೋಡುವ ಸಮಯ ಬಂದಿದೆ.
ಹಿಂದಿನ ವರ್ಷಗಳಂತೆ ಹೊಸ ವರ್ಷವನ್ನು ಬರಮಾಡಿಕೊಳ್ಳುವಾಗ ಭವಿಷ್ಯದ ಬಗ್ಗೆ ಹೊಸ ನಿರ್ಣಯವನ್ನು ಮಾಡಿ, ಅದನ್ನು ಈಡೇರಿಸಲು ದೃಢಸಂಕಲ್ಪ ಮಾಡುವುದರ ಜೊತೆಗೆ ಬಂಧು-ಮಿತ್ರರ ಒಡಗೂಡಿ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂಭ್ರಮಪಡಲು ಕೊರೊನಾ ಅಡ್ಡಿಯಾಗಿದೆ.
ಕೊರೊನಾ ಸಾಂಕ್ರಾಮಿಕವಲ್ಲದೆ ಈ ವರ್ಷದಲ್ಲಿ ರೈತರ ಪ್ರತಿಭಟನೆಗಳು, ಸರಣಿ ಚಂಡಮಾರುತ, ಪ್ರಾಕೃತಿಕ ವಿಕೋಪ, ಹವಾಮಾನ ಏರುಪೇರು, ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದು, ಸೆಲೆಬ್ರಿಟಿಗಳ ಆಘಾತಕಾರಿ ಸಾವು, ರಾಜ್ಯರಾಜಕಾರಣದಲ್ಲಿ ಬಿಎಸ್ ಯಡಿಯೂರಪ್ಪ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದು, ಬಸವರಾಜ್ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಬಿಟ್ ಕಾಯಿನ್ ಜಟಾಪಟಿ, ಮತಾಂತರ ನಿಷೇಧ ಕಾಯ್ದೆ ಜಾರಿ ಸೇರಿದಂತೆ ಅನೇಕ ನೋವು-ನಲಿವು, ರೋಗ ರುಜಿನ, ಪ್ರತಿಭಟನೆ ಸಂಘರ್ಷ, ರಾಜಕೀಯ ತಲ್ಲಣಗಳ ನಡುವೆ 2021ರ ಘಟನಾವಳಿಗಳು ನೆಡೆದಿದ್ದು, ಅದರಾಚೆಗೆ ಅಲ್ಲಲ್ಲಿ ಸಂಭವಿಸಿದ ಅಪಘಾತಗಳು, ಆಕಸ್ಮಿಕ ಅವಘಡಗಳು ಒಂದೇ ಎರಡೇ ಲೆಕ್ಕಕ್ಕೆ ಸಿಗದಷ್ಟಿವೆ. ಹಲವು ನಾಯಕರು, ಸ್ವಾಮೀಜಿಗಳು, ಪ್ರೀತಿಯ ಸಿನಿಮಾ ನಟರು ನಮ್ಮನ್ನು ಅಗಲಿದ್ದಾರೆ. ಅವರು ತುಂಬಿದ್ದ ಸ್ಥಾನದ ನಷ್ಟ ಭರಿಸುವುದು ಅಸಾಧ್ಯವೇ ಸರಿ.
ಮುಂಗಾರು ಅಬ್ಬರಿಸಿದ ಕಾರಣ ಹಲವು ಜಲಾಶಯಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮಿನುಗುವಂತೆ ಮಾಡಿತು. ಜತೆ ಜತೆಗೆ ಪ್ರವಾಹದಿಂದಾಗಿ ಸಂಭವಿಸಿದ ಹಾನಿ ಅನುಭವಿಸಿದ ಕಷ್ಟನಷ್ಟಗಳು ಮರೆಯಲಾರದ್ದು ಜಲಪ್ರಳಯ ಆ ಸಂಕಟದಿಂದ ಇನ್ನೂ ಹೊರಬರಲಾಗದೆ ಪರದಾಡುತ್ತಿರುವ ಜನ. ತಮ್ಮವರನ್ನು ಕಳೆದುಕೊಂಡು ದುಃಖಿಸುತ್ತಿರುವ ಕುಟುಂಬದ ಸದಸ್ಯರು.
ನಾವು ಎಲ್ಲವನ್ನು ನೆನಪಿಸಿಕೊಂಡು ಮುಂದಿನ ವರ್ಷಕ್ಕೆ ಹೆಜ್ಜೆಯಿಡುವುದು ಅನಿವಾರ್ಯವಾಗಿದೆ.
ಹೊಸ ವರ್ಷದ ಸಂದರ್ಭದಲ್ಲಿ ಸಂಭ್ರಮಕ್ಕಿಂತಲೂ ಹೆಚ್ಚಾದ ಸಾಮಾಜಿಕ ಹೊಣೆಗಾರಿಕೆಯನ್ನು ನಾವು ನಿರ್ವಹಿಸಬೇಕಾಗಿದೆ. ಕೊರೊನಾ ವಿರುದ್ಧದ ಸಂಘರ್ಷದಲ್ಲಿ ಅತ್ಯಂತ ನಿರ್ಣಾಯಕ ವಾದ ಸಂದರ್ಭ ಪ್ರಸ್ತುತ ನಮ್ಮ ಮುಂದಿದೆ. ಕೊರೊನಾ ಮೂರನೇ ಅಲೆ ಓಮಿಕ್ರೋನ್ ಆರಂಭವಾಗಿದೆ ಎನ್ನುವ ಆತಂಕವೂ ತಲೆದೋರಿದೆ. ಅದ್ದರಿಂದ ಸರ್ಕಾರ ರಸ್ತೆ, ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನಿರಾಕರಿಸಲಾಗಿದೆ. ಅಪಾರ್ಟ್ಮೆಂಟ್ ಸಮುಚ್ಚಯದ ನಿವಾಸಿಗಳು ಹಾಗೂ ಕ್ಲಬ್ ನವರು ತಂತಮ್ಮ ನಿಗದಿತ ಜಾಗದಲ್ಲಿ ಆಚರಣೆ ಮಾಡಲಿಕ್ಕೆ ಅನುಮತಿಯಿದ್ದರೂ ಆ ಕಾರ್ಯಕ್ರಮಗಳಿಗೆ ಹೊರಗಿನವರನ್ನು ಸೇರಿಸಲಿಕ್ಕೆ ಅವಕಾಶವಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಸಾರ್ವಜನಿಕರ ಹಿತಾಸಕ್ತಿಯ ಕಾರಣದಿಂದಾಗಿ ರೂಪಿಸಲಾಗಿದ್ದು, ಅವುಗಳನ್ನು ಎಲ್ಲರೂ ಸ್ವಯಂಪ್ರೇರಣೆಯಿಂದ ಪಾಲಿಸುವುದು ಅಗತ್ಯವಾಗಿದೆ.
ವಿಶ್ವದ ವಿವಿಧ ಭಾಗಗಳಲ್ಲಿ ಕೊರೊನಾದ 3ನೇ ಅಲೆ ಕಾಣಿಸಿಕೊಂಡಿದೆ. ಸಾಂಕ್ರಾಮಿಕ ವೈರಸ್ ನಿಯಂತ್ರಿಸಲು ಅಭಿವೃದ್ಧಿ ಹೊಂದಿದ ದೇಶಗಳೇ ಒದ್ದಾಡುತ್ತಿವೆ. ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿರುವಾಗ, ಸಂಭ್ರಮದ ಹೆಸರಿನಲ್ಲಿ ಮೈಮರೆತರೆ ಅಪಾಯಕ್ಕೆ ಆಹ್ವಾನ ನೀಡಿದಂತೆಯೇ. ಕೊರೊನಾ ವೈರಸ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ಮದ್ದು ಎನ್ನುವುದನ್ನು ಮನಗಂಡು, ಸಾಮೂಹಿಕ ಜವಾಬ್ದಾರಿ ನಿರ್ವಹಿಸಬೇಕಾದ ಸಂದರ್ಭವಿದು.
ನಮಗೆ ಗೊತ್ತು ಹೊಸ ವರ್ಷದಲ್ಲಿ ಏನೂ ಇಲ್ಲ ಎಂಬುದು ಆದರೂ ಹೊಸತನಕ್ಕೆ ಹಾತೊರೆಯುವ ಜಾಯಮಾನ ನಮ್ಮದಾಗಿರುವ ಕಾರಣ ಅತ್ತ ಹೆಚ್ಚು ಆಕರ್ಷಿತರಾಗುತ್ತಿದ್ದೇವೆ.
ಇಡೀ ಜಗತ್ತೇ ಹೊಸವರ್ಷದತ್ತ ತವಕಿಸುತ್ತಿರುವಾಗ ಅವರಲ್ಲಿ ನಾವು ಒಬ್ಬರಾಗಿ ಮುನ್ನಡಿಯಿಡೋಣ. ವರ್ಷದ ಮೊದಲ ದಿನವಷ್ಟೆ ಹೊಸತು. ನಂತರ ಅದು ಕೂಡ ಹಳೆದಾಗುತ್ತದೆ.
ಮತ್ತೆ ಹೊಸ ವರ್ಷ ಬಂದಾಗ ನಾವು ಅದನ್ನು ಸ್ವಾಗತಿಸಲು ಸಿದ್ಧವಾಗಿ ಬಿಡುತ್ತೇವೆ. ಇದೆಲ್ಲವೂ ನೈಸರ್ಗಿಕ ನಿಯಮ. ಆದರೂ ಹೊಸ ವರ್ಷದ ಹೊಸ್ತಿಲಲ್ಲಿರುವ ನಾವು ಹಳೆಯ ವರ್ಷದ ದಿನಗಳನ್ನು ಮೆಲುಕು ಹಾಕುತ್ತಾ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ ದುಃಖದ ಕ್ಷಣಗಳನ್ನು ಮರೆಯುತ್ತಾ ಮುನ್ನಡೆಯೋಣ ಇನ್ನೊಂದು ಹೊಸವರ್ಷ ಬರೋ ತನಕ…
ಹೊಸ ವರ್ಷದ ಶುಭಾಶಯಗಳು