ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ: ಎಚ್ ಡಿ ಕೆ ಅನುಕಂಪ

ಮೈಸೂರು: ಪೂರ್ಣಾವಧಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ 13 ಬಾರಿ ಬಜೆಟ್ ಮಂಡಿಸಿದಂತಹವರಿಗೇ ಒಂದು ಸುರಕ್ಷಿತ ಕ್ಷೇತ್ರ ಹುಡುಕಿಕೊಳ್ಳಲು ಆಗುತ್ತಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ಬಗ್ಗೆ ಅನುಕಂಪ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಿದ್ದು ಕ್ಷೇತ್ರ ಹುಡುಕಾಟದ ಬಗ್ಗೆ ಪ್ರತಿಕ್ರಿಯಿಸಿ ಇದನ್ನ ನೋಡಿ ನಾನು ಲಘುವಾಗಿ ಹೇಳುತ್ತಿಲ್ಲ, ಅನುಕಂಪ ಬರುತ್ತಿದೆ ಎಂದರು.

ಕೋಲಾರ ಕ್ಷೇತ್ರ ಸೇರಿ ಜಿಲ್ಲೆಯಲ್ಲಿ 6 ಸ್ಥಾನದಲ್ಲಿ 5 ಸ್ಥಾನದಲ್ಲಿ ನಾವು ಮುಂದೆ ಇದ್ದೇವೆ. ಹೈ ಕಮಾಂಡ್ ಹೆಸರು ಹೇಳಿಕೊಂಡು ಸ್ಪರ್ಧೆಯಿಂದ ಸಿದ್ದರಾಮಯ್ಯ ಹಿಂದೆ ಸರಿದಿರಬಹುದು ಎಂದು ಮಾರ್ಮಿಕವಾಗಿ ನುಡಿದರು.

5 ವರ್ಷದ ಸಂಪೂರ್ಣ ಅವಧಿ ಮುಗಿಸಿರುವ ಸಿಎಂ ಎಂಬ ಹೆಸರಿದೆ,ಕಳೆದ ಒಂದು ವರ್ಷದಿಂದ ಸ್ಪರ್ಧೆಯ ಬಗ್ಗೆ ಕ್ಷೇತ್ರ ಹುಡುಕಾಡುತ್ತಿದ್ದಾರೆ ಇದನ್ನು ನೋಡಿ ನನಗೆ ಅನುಕಂಪ ಬರುತ್ತಿದೆ.

ಅಂತಹ ಅನುಭವಿ ರಾಜಕಾರಣಿ ತಾನಾಗಿಯೇ ಆತಂಕ ಸೃಷ್ಟಿಸಿಕೊಂಡಿದ್ದಾರೆ. ಇಂತಹ ಪರಿಸ್ಥಿತಿ ಬೇಕಿತ್ತಾ ಎಂದು

ಪ್ರಶ್ನಿಸಿದರು.   

ಮಾರ್ಚ್ 26ರಂದು ಮೈಸೂರಿನಲ್ಲಿ ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗುವುದು. ಸಮಾವೇಶಕ್ಕೆ ಸುಮಾರು ಹತ್ತು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಇದೇ‌ ವೇಳೆ ಕುಮಾರಸ್ವಾಮಿ ತಿಳಿಸಿದರು.

ಪಂಚರತ್ನ ರಥಯಾತ್ರೆಯಲ್ಲಿ   ರಾಜ್ಯದಾದ್ಯಂತ ಅತ್ಯುತ್ತಮ  ಜನಬೆಂಬಲ ಸಿಕ್ಕುದೆ. ಕಾರ್ಯಕ್ರಮದಲ್ಲಿ ಭಾಗವಹಿುವ ಮೂಲಕ ಜನ ನಮ್ಮನ್ನುಆಶೀರ್ವದಿಸಿದ್ದಾರೆ ಎಂದು ತಿಳಿಸಿದರು.

ಕಂದಾಯ ಸಚಿವ ಆರ್. ಅಶೋಕ್ ಅವರು ನಮ್ಮ ರಾಜ್ಯದಲ್ಲಿ ಇಂತಹ ಮುಖ್ಯಮಂತ್ರಿಗಳನ್ನು ನೋಡಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಬಹುಶಃ ಅದು ಸತ್ಯ. ಯಾವ ಕಡೆಯಿಂದ ನೋಡಿದ್ದಾರೆ ಎನ್ನುವುದನ್ನು ಯೋಚಿಸುತ್ತಿದ್ದೇನೆ ಎಂದು ಎಚ್ ಡಿ ಕೆ ಹೇಳಿದರು.

ಇಂತಹ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿ ಬರಲೇ ಇಲ್ಲ ಎಂದು ವ್ಯಂಗ್ಯವಾಗಿ ಹೇಳಿದ್ದಾರೋ ಅಥವಾ ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೋ ಇದು ಬಹಳ ಯೋಚನೆ ಮಾಡಬೇಕಾದ ಸಂದರ್ಭ ಎಂದು ಅಭಿಪ್ರಾಯಪಟ್ಟರು.

ಈಗಿನ ಸರ್ಕಾರದ ನ್ಯೂನ್ಯತೆಗಳೇನಿದೆ ಅದರ ಬಗ್ಗೆ ಚರ್ಚೆ ಮಾಡಲು ಹೋಗಿಲ್ಲ. ಜನರಿಗೆ ಗೊತ್ತಿದೆ. ಇಂದು ಕಾಂಗ್ರೆಸ್, ಬಿಜೆಪಿ ಪರಸ್ಪರ ಟೀಕೆಗಳಿಗೆ ಸಮಯ ಮೀಸಲಿಟ್ಟಿವೆ ಎಂಬುದು.

ನಾನು ನನ್ನ ಕಾರ್ಯಕ್ರಮದಲ್ಲಿ ಜನತೆಯ ಮುಂದೆ ಈಗಾಗಲೇ ಸುಮಾರು 86 ವಿಧಾನಸಭಾ ಕ್ಷೇತ್ರಗಳಿಗೆ, 50-60 ಹಳ್ಳಿಗಳಿಗೆ ಭೇಟಿ ಕೊಟ್ಟು ದಿನಕ್ಕೆ 50ರಿಂದ 100 ಕಿ.ಮೀ ಪ್ರವಾಸ ಮಾಡಿದ್ದೇನೆ. ನನ್ನ ಕಾರ್ಯಕ್ರಮಕ್ಕೆ ಒಂದು ಅವಕಾಶ ಕೊಡಿ ಎಂದು ಮನವಿ ಸಲ್ಲಿಸಿ ಹೊರಟಿದ್ದೇನೆ.

ಕಾಂಗ್ರೆಸ್  ಬಗ್ಗೆಯಾಗಲಿ, ಬಿಜೆಪಿ ಬಗ್ಗೆಯಾಗಲಿ ಟೀಕೆ ಮಾಡಿ ಸಮಯ ವ್ಯರ್ಥ ಮಾಡಲು ಹೋಗಿಲ್ಲ, ಟೀಕೆ ಮಾಡುವುದರಿಂದ ಜನರ ಸಮಸ್ಯೆಗೆ ಪರಿಹಾರ ದೊರಕಲ್ಲ ಎಂದು ತಿಳಿಸಿದರು.

ನನಗೆ ಆದ ಅನುಭವದಲ್ಲಿ ನಾಡಿನ ಜನತೆ ನಿಜವಾದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಅದನ್ನು ಬಗೆ ಹರಿಸುವುದು ಹೇಗೆ ಎಂಬ ದೂರದೃಷ್ಟಿಯಿಂದ ಕೆಲವು ಕಾರ್ಯಕ್ರಮಗಳನ್ನು ಘೋಷಣೆ ಮಾಡಿ ಅದಕ್ಕೆ ಸಿದ್ಧತೆಯನ್ನೂ ಮಾಡಿದ್ದೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಉಪಸ್ಥಿತರಿದ್ದರು.