ಹುತಾತ್ಮ ಯೋಧರಿಗೆ ಬೊಮ್ಮಾಯಿ ಗೌರವ ಸಮರ್ಪಣೆ

ಬೆಳಗಾವಿ: ಇಂಡೋ-ಪಾಕ್ ಯುದ್ಧವು ಚರಿತ್ರೆಯಲ್ಲಿ ಭಾರತದ ಶಕ್ತಿಗೆ ಸ್ಥಾನ ಒದಗಿಸಿದೆ. ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇದು ನಮಗೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ‌ತಿಳಿಸಿದರು.

ಬೆಳಗಾವಿಯ ಮರಾಠಿ ಲಘು ಪದಾತಿದಳ ಕೇಂದ್ರದ ಆವರಣದಲ್ಲಿ ಭಾರತವು 1971 ರಲ್ಲಿ ಪಾಕಿಸ್ತಾನದ ವಿರುದ್ಧ ಯುದ್ದದಲ್ಲಿ ಜಯಸಾಧಿಸಿ 50 ವರ್ಷ ಪೂರೈಸಿದ ಸಂದರ್ಭವಾಗಿ ಹಮ್ಮಿಕೊಳ್ಳಲಾಗಿದ್ದ ವಿಜಯ ದಿವಸ ಕಾರ್ಯಕ್ರಮದಲ್ಲಿ  ಬೊಮ್ಮಾಯಿ ಅವರು 1971ರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿ ಮಾತನಾಡಿದರು.

ಸೇನೆ ದೇಶ ರಕ್ಷಣೆಯ ಜತೆಗೆ ಆಂತರಿಕ ಭದ್ರತೆಯಲ್ಲೂ ಪ್ರಮುಖ‌ ಪಾತ್ರ ವಹಿಸುತ್ತಿದೆ. ಗಡಿಯಾಚೆಗಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದೆ. ಇಂಡೋ-ಪಾಕ್ ಯುದ್ಧವು ದೇಶದ ಮೂರೂ ಸೇನಾ ಪಡೆಗಳ ಕಾರ್ಯಕ್ಷಮತೆಗೆ ಸಾಕ್ಷಿ. 13 ದಿನಗಳ ಯುದ್ಧದಲ್ಲಿ ಅನೇಕ ಜನರು ಹುತಾತ್ಮರಾದರು. 90 ಸಾವಿರಕ್ಕೂ ಅಧಿಕ ಪಾಕಿಸ್ತಾನಿ ಸೈನಿಕರು ಶರಣಾದರು. ಈ ಯುದ್ಧ ಕಲೆಯು ಇಡೀ ಜಗತ್ತು ಭಾರತದ ಸೇನಾಶಕ್ತಿಯ ಕಡೆ ನೋಡುವಂತೆ ಆಯಿತು. ಈ ಯುದ್ಧದ ಬಳಿಕ ಭಾರತ ಸೇನೆ ಮತ್ತಷ್ಟು ಬಲಿಷ್ಢವಾಗಿದೆ ಎಂದು ಹೇಳಿದರು.

ಇಂಡೋ-ಪಾಕ್ ಯುದ್ಧವು ಚರಿತ್ರೆಯಲ್ಲಿ ಭಾರತದ ಶಕ್ತಿಗೆ ಸ್ಥಾನ ಒದಗಿಸಿದೆ. ದೇಶವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಇದು ನಮಗೆ ಮತ್ತಷ್ಟು ಸ್ಫೂರ್ತಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭಾರತ ಮಾತೆಯ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ನಾವು ಯಾವುದೇ ವೃತ್ತಿಯಲ್ಲಿ ಇದ್ದರೂ ದೇಶ ಸೇವೆಗೆ ಸಮರ್ಪಿಸಿಕೊಳ್ಳಬೇಕು ಎಂದು ಸಿಎಂ ತಿಳಿಸಿದರು.

ಪರಮವೀರ ಚಕ್ರ ಪ್ರಶಸ್ತಿಗೆ 1.50 ಕೋಟಿ ರೂಪಾಯಿ ಅನುದಾನ, ಅಶೋಕ ಚಕ್ರ  1.50 ಕೋಟಿ, ಕೀರ್ತಿ ಚಕ್ರ, ಶೌರ್ಯ ಚಕ್ರ ಪ್ರಶಸ್ತಿಗೆ ನೀಡಲಾಗುತ್ತಿದ್ದ ಅನುದಾನ ಹಾಗೂ ಪ್ರೋತ್ಸಾಹ ಮೊತ್ತವನ್ನು ಕೂಡ ಹೆಚ್ಚಿಸಲಾಗಿದೆ ಎಂದು ಈ ವೇಳೆ ಬೊಮ್ಮಾಯಿ ತಿಳಿಸಿದರು.

ಇದೇ ರೀತಿ ಸೇನಾ ಮೆಡೆಲ್ ಗಳಿಗೆ ರಾಜ್ಯ ಸರಕಾರದಿಂದ ಅನುದಾನ ಹಾಗೂ ಪ್ರೋತ್ಸಾಹವನ್ನು ಹೆಚ್ಚಿಸಲಾಗಿದೆ ಎಂದು  ಅವರು ಪ್ರಕಟಿಸಿದರು.

ರಾಜ್ಯ ಸರಕಾರವು ಯಾವಾಗಲೂ ಸೈನಿಕರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದೆ. ನಿವೃತ್ತ ಯೋಧರು ಹಾಗೂ ಹುತಾತ್ಮರ ಕುಟುಂಬದ ಸದಸ್ಯರ ಕ್ಷೇಮಾಭಿವೃದ್ಧಿ ಗೆ ಬದ್ಧವಾಗಿದೆ ಎಂದರು.

ಕರ್ನಾಟಕ ಮತ್ತು ಕೇರಳ ಉಪ ಕ್ಷೇತ್ರದ ಜನರಲ್ ಕಮಾಂಡಿಂಗ್ ಆಫೀಸರ್ ಮೇಜರ್ ಜನರಲ್ ಜೆ.ವಿ.ಪ್ರಸಾದ್, ಡಿಜಿಪಿ ಪ್ರವೀಣ ಸೂದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಕೂಡ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಿದರು.